ದೀಪಾವಳಿ ಹಬ್ಬ (Deepavali) ಹತ್ತಿರಬರುತ್ತಿದ್ದಂತೆ ಇದಕ್ಕೆ ಸಂಬಂಧಿಸಿದ ಸಂದೇಶಗಳು ವಾಟ್ಸಾಪ್‌ನಲ್ಲಿ(WhatsApp) ಹರಿದಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್‌ನಲ್ಲಿ ಸಂದೇಶವೊಂದು ವೈರಲ್ ಆಗುತ್ತಿದ್ದು ಈ ಸಂದೇಶದಲ್ಲಿ ಗೃಹ ಸಚಿವಾಲಯದ ಅಧಿಕಾರಿಯೊಬ್ಬರ ಹೆಸರನ್ನೂ ಬರೆಯಲಾಗಿದೆ. ಈ ಸಂದೇಶದಲ್ಲಿ ಪಾಕಿಸ್ತಾನವು ನೇರವಾಗಿ ಭಾರತದ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲದ ಕಾರಣ ಚೀನಾ ಮೂಲಕ ಅದು ಸಂಚು ರೂಪಿಸುತ್ತಿದೆ. ಹಾಗಾಗಿ ಈ ಬಾರಿಯ ದೀಪಾವಳಿಗೆ ಚೀನಾದ ವಸ್ತುಗಳನ್ನು ಬಳಸಬೇಡಿ. ಚೀನಾವು ಭಾರತದಲ್ಲಿ ಅಸ್ತಮಾ ಹರಡಲು ಮತ್ತು ಕಣ್ಣಿನ ಕಾಯಿಲೆಗಳನ್ನು ಉಂಟುಮಾಡಲು ವಿವಿಧ ರೀತಿಯ ಪಟಾಕಿಗಳು ಮತ್ತು ಅಲಂಕಾರಗಳಲ್ಲಿ ಬಳಸುವ ದೀಪಗಳನ್ನು ಕಳುಹಿಸುತ್ತಿದೆ. ಈ ಸಂದೇಶವನ್ನು ಎಲ್ಲ ಭಾರತೀಯರಿಗೂ ತಲುಪಿಸಿ ಎಂದು ಈ ಮೆಸೇಜ್ ವಾಟ್ಸಾಪ್ ನಲ್ಲಿ ಫಾರ್ವರ್ಡ್ ಆಗುತ್ತಿದೆ. ಆದಾಗ್ಯೂ,ಈ ವಾಟ್ಸಾಪ್ ಸಂದೇಶ ಸುಳ್ಳು ಎಂದು ಪಿಐಬಿ ಫ್ಯಾಕ್ಟ್ ಚೆಕ್ (Fact Check) ಮಾಡಿದೆ.
ವೈರಲ್ ಸಂದೇಶದಲ್ಲೇನಿದೆ?
ಹಿಂದಿಯಲ್ಲಿ ಬರೆದಿರುವ ಈ ಸಂದೇಶದಲ್ಲಿ ಗುಪ್ತಚರ ಮಾಹಿತಿ ಪ್ರಕಾರ, ಪಾಕಿಸ್ತಾನಕ್ಕೆ ನೇರವಾಗಿ ಭಾರತದ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲದ ಕಾರಣ, ಅದು ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಒತ್ತಾಯಿಸಿದೆ. ಭಾರತದಲ್ಲಿ ಅಸ್ತಮಾ ಹರಡಲು ಕಾರ್ಬನ್ ಮಾನಾಕ್ಸೈಡ್ ಅನಿಲಕ್ಕಿಂತ ಹೆಚ್ಚು ವಿಷಕಾರಿ ಪಟಾಕಿಗಳನ್ನು ಚೀನಾ ತಯಾರಿಸಿದೆ. ಇದಲ್ಲದೆ, ಕಣ್ಣಿನ ಕಾಯಿಲೆಗಳು ಹರಡುವುದಕ್ಕಾಗಿ ಭಾರತದಲ್ಲಿ ವಿಶೇಷ ಬೆಳಕಿನ ಅಲಂಕಾರಿಕ ದೀಪಗಳನ್ನೂ ತಯಾರಿಸಲಾಗಿದೆ. ಇದು ಅಂಧತೆ ಉಂಟುಮಾಡುತ್ತದೆ. ಇದರಲ್ಲಿ ಪಾದರಸದ ಬಳಕೆ ಬಹಳಷ್ಟಿದೆ, ದಯವಿಟ್ಟು ಈ ದೀಪಾವಳಿಯಲ್ಲಿ ಜಾಗರೂಕರಾಗಿರಿ ಮತ್ತು ಈ ಚೈನೀಸ್ ಉತ್ಪನ್ನಗಳನ್ನು ಬಳಸಬೇಡಿ. ದಯವಿಟ್ಟು ಈ ಸಂದೇಶವನ್ನು ಎಲ್ಲಾ ಭಾರತೀಯರಿಗೆ ತಲುಪಿಸಿ. ಸಂದೇಶವನ್ನು ಸ್ವೀಕರಿಸಿದ ನಂತರ, ಅದನ್ನು ನಿಮ್ಮ ಎಲ್ಲಾ ಗುಂಪುಗಳು, ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಹಂಚಿಕೊಳ್ಳಿ . ಈ ದೀಪಾವಳಿಯಲ್ಲಿ ಚೀನಾದ ಪಟಾಕಿ ಖರೀದಿಸಬೇಡಿ.
ಫ್ಯಾಕ್ಟ್ ಚೆಕ್
#WhatsApp पर गृह मंत्रालय के कथित अधिकारी के नाम से #viral एक फर्जी मैसेज में दावा किया जा रहा है कि चीन भारत में अस्थमा फैलाने और नेत्र रोग उत्पन्न करने के लिए विशेष किस्म के पटाखे और सजावटी लाइट्स भेज रहा है#PIBFactCheck
▶️गृह मंत्रालय द्वारा ऐसी कोई सूचना जारी नहीं की गई है pic.twitter.com/9B0ol7YArr
— PIB Fact Check (@PIBFactCheck) October 16, 2022
ಗೃಹ ಸಚಿವಾಲಯದ ಅಧಿಕಾರಿ ಹೇಳಿದ್ದಾರೆ ಎಂದು ವಾಟ್ಸಾಪ್‌ನಲ್ಲಿ ವೈರಲ್ ಆಗುತ್ತಿರುವ ಈ ಸಂದೇಶವನ್ನು ಪಿಐಬಿ ಫ್ಯಾಕ್ಟ್ ಚೆಕ್ ಮಾಡಿದೆ. ಪಿಐಬಿ ಫ್ಯಾಕ್ಟ್ ಚೆಕ್‌ನ ಈ ಬಗ್ಗೆ ಟ್ವೀಟ್ ಮಾಡಿದ್ದು ಈ ವೈರಲ್ ಸಂದೇಶವು ನಕಲಿ ಎಂದಿದೆ. ಭಾರತದಲ್ಲಿ ಚೀನಾ ಅಸ್ತಮಾವನ್ನು ಹರಡಲು ಮತ್ತು ಕಣ್ಣಿನ ಕಾಯಿಲೆಗಳನ್ನು ಉಂಟುಮಾಡಲು ವಿಶೇಷ ರೀತಿಯ ಪಟಾಕಿ ಮತ್ತು ಅಲಂಕಾರ ದೀಪಗಳನ್ನು ಮಾರುಕಟ್ಟೆಗೆ ತಂದಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಗೃಹ ಸಚಿವಾಲಯವು ಅಂತಹ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಪಿಐಬಿ ಹೇಳಿದೆ.