ಹೈದರಾಬಾದ್: ಆಂಧ್ರಪ್ರದೇಶದ (Andhra Pradesh) ಎಲೂರು ಜಿಲ್ಲೆಯಲ್ಲಿ ಶನಿವಾರ 18 ಬೀದಿನಾಯಿಗಳಿಗೆ (Dogs) ವಿಷ ನೀಡಿ ಕೊಂದು ಹಾಕಲಾಗಿದೆ. ಚೇಬ್ರೋಲೆ ಗ್ರಾಮದ ಮುಖಂಡರ ಆದೇಶದ ಮೇರೆಗೆ ಆ 18 ನಾಯಿಗಳಿಗೆ ವಿಷದ ಇಂಜೆಕ್ಷನ್ ನೀಡಿ ಸಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಚೇಬ್ರೋಲೆ ಗ್ರಾಮದ ಸರಪಂಚ್ ಮತ್ತು ಕಾರ್ಯದರ್ಶಿ ವಿರುದ್ಧ ಆಂಧ್ರಪ್ರದೇಶ ಪೊಲೀಸರು ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ನಾಯಿಗಳ ಸಾವಿನ ನಂತರ ಗ್ರಾಮದ ಮುಖ್ಯಸ್ಥರ ವಿರುದ್ಧ ತ್ವರಿತ ಕ್ರಮಕ್ಕೆ ಪ್ರಾಣಿ ಹಕ್ಕುಗಳ ಗುಂಪುಗಳು ಕರೆ ನೀಡಿವೆ.
ಇದನ್ನೂ ಓದಿ: ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಎಲ್ಲ ನಾಯಿಗಳಿಗೂ ಮಾಸ್ಕ್ ಕಡ್ಡಾಯ, ಪಿಟ್ಬುಲ್ ಸೇರಿ ಮೂರು ನಾಯಿ ತಳಿಗಳಿಗೆ ನಿಷೇಧ
ಚೇಬ್ರೋಲೆ ಗ್ರಾಮದ ವಿವಿಧೆಡೆ ಬೀದಿ ನಾಯಿಗಳು ಸತ್ತು ಬಿದ್ದಿರುವುದು ಕಂಡು ಬಂದಿತ್ತು. ಈ ವಿಷಯ ತಿಳಿದು ಗ್ರಾಮಕ್ಕೆ ದೌಡಾಯಿಸಿದ ಪ್ರಾಣಿ ಪ್ರಿಯರು ಎಲ್ಲರನ್ನೂ ಈ ಬಗ್ಗೆ ವಿಚಾರಿಸಿದಾಗ ಗ್ರಾಮದ ಕಾರ್ಯದರ್ಶಿ ಹಾಗೂ ಇತರರ ಒತ್ತಾಯದ ಮೇರೆಗೆ ನಾಯಿಗಳಿಗೆ ವಿಷದ ಇಂಜೆಕ್ಷನ್ ಹಾಕಲಾಗಿದೆ ಎಂಬ ವಿಷಯ ಗೊತ್ತಾಗಿದೆ.
ಈ ವರ್ಷದ ಆರಂಭದಲ್ಲಿ ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಬೀದಿನಾಯಿಗಳನ್ನು ಕೊಂದು ಹಾಕಲಾಗಿತ್ತು. ನಾಯಿಗಳ ಶವಗಳು ಗುಂಡಿಯಲ್ಲಿ ಬಿದ್ದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು.