ಕರ್ನಾಟದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಂದು ವಾರಗಳ ಕಾಲ ರಾಜ್ಯದಲ್ಲಿ ನಿರ್ಬಂಧ ಹೇರಿದ್ದಾರೆ ಎಂಬ ಒಕ್ಕಣೆಯೊಂದಿಗೆ ಹಳೇ ವಿಡಿಯೊ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 2020 ಮಾರ್ಚ್ ತಿಂಗಳಲ್ಲಿ ಯಡಿಯೂರಪ್ಪ ಅವರು ರಾಜ್ಯದಲ್ಲಿ ಕೊವಿಡ್ ನಿಯಂತ್ರಣಕ್ಕಾಗಿ ಕ್ರಮಕೈಗೊಂಡಿದ್ದು, ಈ ಬಗ್ಗೆ ನಡೆದ ಸುದ್ದಿಗೋಷ್ಠಿಯ 2.20 ನಿಮಿಷ ಅಧಿಯ ವಿಡಿಯೊ ಮತ್ತು ವಿಡಿಯೊದ ಸ್ಕ್ರೀನ್ ಶಾಟ್ ಈಗ ವೈರಲ್ ಆಗಿದೆ.
ವಿಡಿಯೊದಲ್ಲೇನಿದೆ?
2020ಮಾರ್ಚ್ 13ರಂದು ಸುದ್ದಿಗೋಷ್ಠಿ ನಡೆಸಿದ್ದ ಯಡಿಯೂರಪ್ಪ ನೈಟ್ ಕ್ಲಬ್, ಪಬ್, ಥಿಯೇಟರ್ ಮತ್ತು ಮಾಲ್ಗಳನ್ನು ಮುಚ್ಚಲು ಆದೇಶ ನೀಡಿದ್ದರು. ಮದುವೆ ಸಮಾರಂಭ, ಕ್ರೀಡಾಕೂಟ ಸೇರಿದಂತೆ ಜನರು ಸೇರುವ ಯಾವುದೇ ಕಾರ್ಯಕ್ರಮ ಆಯೋಜಿಸಬಾರದು ಎಂದು ಮುಖ್ಯಮಂತ್ರಿ ಹೇಳಿದ್ದರು. ಈ ವಿಡಿಯೊದಲ್ಲಿ ಯಡಿಯೂರಪ್ಪ ಅವರು ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರುವುದರ ಜತೆಗೆ ಅಗತ್ಯವಿದ್ದರೆ ಮಾತ್ರ ಪ್ರಯಾಣ ಮಾಡಿ ಎಂದು ಹೇಳುತ್ತಾರೆ. ರಾಜ್ಯದಾದ್ಯಂತ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ಆದೇಶ ನೀಡಿರುವ ಯಡಿಯೂರಪ್ಪ, ವೈದ್ಯರು ಮತ್ತು ವೈದ್ಯಕೀಯ ತಜ್ಞರ ಸಲಹೆ ಪಡೆದು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಾರದ ನಂತರ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗುವುದು ಎಂದು ವಿಡಿಯೊದಲ್ಲಿ ಹೇಳಿದ್ದಾರೆ. ಕಲಬುರ್ಗಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಕೊವಿಡ್ ರೋಗದಿಂದ ಮೃತಪಟ್ಟಿದ್ದು, 46 ಮಂದಿ ಅವರ ಸಂಪರ್ಕಕ್ಕೆ ಬಂದಿದ್ದರು ಎಂಬ ವಿಷಯವನ್ನೂ ಇಲ್ಲಿ ಹೇಳಿದ್ದಾರೆ.
ಫ್ಯಾಕ್ಟ್ ಚೆಕ್
ವೈರಲ್ ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಹಳೆ ವಿಡಿಯೊ ಎಂಬುದು ತಿಳಿಯುತ್ತದೆ. ಯಡಿಯೂರಪ್ಪ ಅವರು ಕಲಬುರ್ಗಿಯಲ್ಲಿ ವ್ಯಕ್ತಿಯೊಬ್ಬರು ಕೋವಿಡ್ನಿಂದ ಸಾವಿಗೀಡಾದ ಘಟನೆಯನ್ನು ಇಲ್ಲಿ ಉಲ್ಲೇಖಿಸಿದ್ದಾರೆ. ಕಲಬುರ್ಗಿಯಲ್ಲಿ ಕೊರೊನಾ ವೈರಸ್ನಿಂದಾಗಿ ವ್ಯಕ್ತಿಯೊಬ್ಬರು ಸಾವಿಗೀಡಾದ ಮೊದಲ ಪ್ರಕರಣ ಅದಾಗಿತ್ತು.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊ/ ವಿಡಿಯೊ ಸ್ಕ್ರೀನ್ ಗ್ರ್ಯಾಬ್ ನಲ್ಲಿ ನ್ಯೂಸ್ ಫಸ್ಟ್ ಸುದ್ದಿ ವಾಹಿನಿಯ ಲೋಗೊ ಇದೆ. ನ್ಯೂಸ್ ಫಸ್ಟ್ ಸುದ್ದಿವಾಹಿನಿಯ ಯುಟ್ಯೂಬ್ ವಿಡಿಯೊಗಳಲ್ಲಿ 2020 ಮಾರ್ಚ್ 13ರಂದು ಅಪ್ಲೋಡ್ ಮಾಡಿರುವ ವಿಡಿಯೊದಲ್ಲಿ ಯಡಿಯೂರಪ್ಪ ಅವರ ಪತ್ರಿಕಾಗೋಷ್ಠಿಯ ವಿಡಿಯೊ ಇದೆ. ವಿಡಿಯೊದಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯ ಅಂದರೆ ಯಡಿಯೂರಪ್ಪ ಜತೆ ಗೋವಿಂದ ಕಾರಜೋಳ ಮತ್ತು ಶ್ರೀರಾಮುಲು ಇದ್ದಾರೆ. ಆಗ ಶ್ರೀರಾಮುಲು ರಾಜ್ಯದ ಆರೋಗ್ಯ ಸಚಿವರಾಗಿದ್ದರು.
ನಿನ್ನೆ (2021 ಮಾರ್ಚ್ 17) ಯಡಿಯೂರಪ್ಪ ಅವರು ಸುದ್ದಿಗೋಷ್ಠಿ ನಡೆಸಿದ್ದರು. ಈ ಸುದ್ದಿಗೋಷ್ಠಿಯಲ್ಲಿ ಅವರು ಕೊರೊನಾ ಲಸಿಕೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾತನಾಡಿದ್ದರು. ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪ ಜತೆ ಗೃಹ ಸಚಿವ ಬೊಮ್ಮಾಯಿ ಅವರು ಹಾಜರಿದ್ದರು.
ಇದನ್ನೂ ಓದಿ : Fact Check: ಪತಂಜಲಿ ಕೊರೊನಿಲ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ಸಿಕ್ಕಿದೆ ಎಂಬುದು ಸುಳ್ಳು
Published On - 9:27 pm, Thu, 18 March 21