Fact Check: ಗಣರಾಜ್ಯೋತ್ಸವದ ದಿನ ಬಿಹಾರದಲ್ಲಿ ಪಾಕಿಸ್ತಾನದ ಧ್ವಜ ಹಾರಾಡಿತಂತೆ! ಏನಿದರ ಸತ್ಯಾಸತ್ಯತೆ?
ಇಸ್ಲಾಮಿಕ್ ಧಾರ್ಮಿಕ ಧ್ವಜವನ್ನು ಪಾಕಿಸ್ತಾನದ ರಾಷ್ಟ್ರಧ್ವಜ ಎಂದು ಭಾವಿಸಿ ಹಲವು ಸುದ್ದಿಸಂಸ್ಥೆಗಳು ಮತ್ತು ಮಾಧ್ಯಮಗಳು ವರದಿ ಮಾಡಿದ್ದವು.
ಜನವರಿ 26ರಂದು ಇಡೀ ದೇಶ ಸಂಭ್ರಮದಿಂದ ಗಣರಾಜ್ಯೋತ್ಸವವನ್ನು(Republic Day 2023) ಆಚರಿಸಿದೆ. ಆದರೆ ಅದೇ ದಿನ ಬಿಹಾರದಲ್ಲಿ ನಡೆದಿದೆ ಎನ್ನಲಾದ ಸುದ್ದಿಯೊಂದು ವೈರಲ್ ಆಗಿತ್ತು. ಆದರೆ ಅದು ಸುಳ್ಳುಸುದ್ದಿ ಎಂಬ ಸಂಗತಿ ‘ಬೂಮ್ಲೈವ್’ ಮಾಡಿದ ಫ್ಯಾಕ್ಟ್ಚೆಕ್ನಲ್ಲಿ (Fact Check) ಬೆಳಕಿಗೆ ಬಂದಿದೆ. ಗಣರಾಜ್ಯೋತ್ಸವದಂದು ಬಿಹಾರದ ಪುರ್ನಿಯಾ ಎಂಬ ಜಿಲ್ಲೆಯ ಮನೆಯೊಂದರ ಮೇಲೆ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಗಿದೆ ಎಂದು ಹಲವು ರಾಷ್ಟ್ರೀಯ ಸುದ್ದಿವಾಹಿನಿಗಳು ಗುರುವಾರ ವರದಿ ಪ್ರಕಟಿಸಿದ್ದವು. ಘಟನೆಯಿಂದ ಸ್ಥಳೀಯರಲ್ಲಿ ಅಶಾಂತಿ ಸೃಷ್ಟಿಯಾಗಿದ್ದು ತಕ್ಷಣ ಬಿಹಾರ ಪೊಲೀಸರು ಧ್ವಜವನ್ನು ತೆಗೆದುಹಾಕಿದ್ದಾರೆ ಎಂಬ ಉಲ್ಲೇಖಗಳೂ ಈ ವರದಿಗಳಲ್ಲಿ ಇತ್ತು. ಈ ಸುದ್ದಿಯ ಬಗ್ಗೆ ಹಲವು ಗೊಂದಲಗಳು ಹುಟ್ಟಿಕೊಂಡಿದ್ದವು. ಫ್ಯಾಕ್ಟ್ಚೆಕ್ ವೇಳೆ ಮನೆಯೊಂದರ ಮೇಲೆ ಹಾರಾಡಿದ್ದು ಪಾಕಿಸ್ತಾನದ ರಾಷ್ಟ್ರಧ್ವಜವಲ್ಲ, ಅದು ಇಸ್ಲಾಮ್ನ ಧಾರ್ಮಿಕ ಧ್ವಜ ಎಂದು ಖಚಿತವಾಗಿದೆ.
ಈ ಸುದ್ದಿಯನ್ನು ANI ಸುದ್ದಿಸಂಸ್ಥೆಯೂ ವರದಿ ಮಾಡಿತ್ತು. ಗಣರಾಜ್ಯೋತ್ಸವ ದಿನದಂದು ಪುರ್ನಿಯಾ ಜಿಲ್ಲೆಯ ಮಧುಬನಿ ಸಿಪಾಹಿ ಟೋಲಾ ಪ್ರದೇಶದಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಗಿದೆ ಎಂದು ಹೇಳಲಾಗಿದೆ, ಈ ಘಟನೆಯು ಸ್ಥಳೀಯರಲ್ಲಿ ಕೋಲಾಹಲವನ್ನು ಉಂಟುಮಾಡಿದೆ” ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಎಎನ್ಐ ಟ್ವೀಟ್ ಮಾಡಿತ್ತು. ಅಲ್ಲದೆ ಇಂಡಿಯಾ ಟಿವಿ, ಸಿಎನ್‌ಎನ್ ನ್ಯೂಸ್ 18, ಅಮರ್ ಉಜಾಲಾ, ಲೈವ್ ಹಿಂದೂಸ್ತಾನ್, ನವಭಾರತ್ ಟೈಮ್ಸ್, ಫ್ರೀ ಪ್ರೆಸ್ ಜರ್ನಲ್ ಸೇರಿದಂತೆ ಅನೇಕ ಸುದ್ದಿವಾಹಿನಿಗಳು ಘಟನೆಯನ್ನು ವರದಿ ಮಾಡಿದ್ದವು. ಹಲವು ಪತ್ರಕರ್ತರು ಈ ಸುದ್ದಿಯನ್ನು ಟ್ವೀಟ್ ಸಹ ಮಾಡಿದ್ದರು.
#BiharPolice removed a Pakisatni flag from a house in Purnia, on the day when country was celebrating #RepublicDay2023 Police are investigating the case pic.twitter.com/BlI0zo674J
— Anupam Trivedi (@AnupamTrivedi26) January 27, 2023
ಫ್ಯಾಕ್ಟ್ಚೆಕ್ ವೇಳೆ ಸತ್ಯ ಬಯಲು
ಈ ಘಟನೆಯ ಸತ್ಯ ಶೋಧನೆ ನಡೆಸಿದ boomlive ಧ್ವಜವನ್ನು ಹಾರಿಸುವ ವಿಡಿಯೋಗಳನ್ನು ವಿಶ್ಲೇಷಿಸಿದೆ. ಈ ವೇಳೆ ಅದು ಪಾಕಿಸ್ತಾನದ ಧ್ವಜವಲ್ಲ ಎಂದು ಖಚಿತವಾಗಿದೆ. ವಿಡಿಯೋದಲ್ಲಿರುವ ಧ್ವಜವು ಬಿಳಿ ಹಾಗೂ ಕಪ್ಪು ಬಣ್ಣದ ಬಾರ್ಡರ್ ಹೊಂದಿದೆ. ಆದ್ರೆ ಈ ವಿನ್ಯಾಸ ಪಾಕಿಸ್ತಾನದ ಧ್ವಜದಲ್ಲಿಲ್ಲ. ಬಳಿಕ ಮತ್ತಷ್ಟು ಮಾಹಿತಿ ಕಲೆಹಾಕಿ, ಸುದ್ದಿ ಮಾಧ್ಯಮದ ವರದಿಗಾರರ ಬಳಿ ಘಟನೆಯ ಪರಿಶೀಲನೆ ಮಾಡಲಾಗಿದೆ. ಹಾಗೂ ಪೊಲೀಸರ ಬಳಿಯೂ ಈ ಬಗ್ಗೆ ವಿಚಾರಿಸಲಾಗಿದ್ದು ಪೊಲೀಸರು ಘಟನೆ ನಡೆದಿದೆ ಎಂಬ ಆರೋಪವನ್ನೇ ತಳ್ಳಿ ಹಾಕಿದ್ದಾರೆ. ಹಲವಾರು ಮಾಧ್ಯಮಗಳು ವರದಿ ಮಾಡಿದಂತೆ ಅಂತಹ ಯಾವುದೇ ಧ್ವಜವನ್ನು ಹಾರಿಸಲಾಗಿಲ್ಲ ಎಂದು ಹೇಳಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ‘ಘಟನೆ ನಡೆದಿದೆ ಎನ್ನಲಾದ ಅಲ್ಲಿಯ ಸ್ಥಳೀಯ ಮಸೀದಿಯ ಪಕ್ಕದಲ್ಲಿರುವ ಮೊಹಮ್ಮದ್ ಮುಬಾರಕುದ್ದೀನ್ ಒಡೆತನದ ಮನೆಯಲ್ಲಿ ಧಾರ್ಮಿಕ ಧ್ವಜವನ್ನು ಹಾರಿಸಲಾಗಿದೆ’. ಧ್ವಜವು ಧಾರ್ಮಿಕವಾಗಿದೆ ಮತ್ತು ಸುಮಾರು ಒಂದು ತಿಂಗಳ ಹಿಂದೆ ನಿವಾಸದಲ್ಲಿ ಹಾರಿಸಲಾಗಿತ್ತು ಎಂದು ಪೊಲೀಸರು ಸುದ್ದಿವಾಹಿನಿಗೆ ತಿಳಿಸಿದ್ದಾರೆ. ಬಳಿಕ ಪೂರ್ನಿಯಾ ಜಿಲ್ಲೆಯ SDPO ಸುರೇಂದ್ರ ಕುಮಾರ್ ಸರೋಜ್ ಅವರನ್ನು ಭೇಟಿ ಮಾಡಿದ್ದು ವಿಡಿಯೋದಲ್ಲಿ ಹಾರಿಸಲಾಗಿದೆ ಎನ್ನುವ ಧ್ವಜವು ಯಾವುದೇ ದೇಶದ ರಾಷ್ಟ್ರಧ್ವಜವನ್ನು ಹೋಲುವಂತಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸ್ಥಳೀಯ ನಿವಾಸಿಗಳ ಮೂಲಕ ಪೂರ್ನಿಯಾದ ಮನೆಯ ಮೇಲೆ ಹಾರಿಸಲಾದ ಧ್ವಜದ ಮೂಲ ಚಿತ್ರವನ್ನು ಸಂಗ್ರಹಿಸಿ ಅದನ್ನು ಪಾಕಿಸ್ತಾನದ ಧ್ವಜದೊಂದಿಗೆ ಹೋಲಿಕೆ ಮಾಡಲಾಗಿದೆ. ಬಳಿಕ ಧ್ವಜವು ಇಸ್ಲಾಮಿಕ್ ಧಾರ್ಮಿಕ ಪಂಗಡಕ್ಕೆ ಸೇರಿದ್ದು ಪಾಕಿಸ್ತಾನದ್ದಲ್ಲ ಎಂಬುದು ಸ್ಪಷ್ಟವಾಗಿದೆ. ಈ ಧ್ವಜವು ಇಸ್ಲಾಮಿಕ್ ಸಂಘಟನೆಯಾದ ದಾವತ್-ಎ-ಇಸ್ಲಾಮಿಯನ್ನು ಪ್ರತಿನಿಧಿಸುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Fact Check: ಬಿಬಿಸಿ ಸಾಕ್ಷ್ಯಚಿತ್ರ ನಿರ್ಮಾಪಕರ ಜತೆ ರಾಹುಲ್ ಗಾಂಧಿ?; ವೈರಲ್ ಫೋಟೊದಲ್ಲಿರುವವರು ಯಾರು?
ಮತ್ತಷ್ಟು ಫ್ಯಾಕ್ಟ್ಚೆಕ್ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:10 pm, Sat, 28 January 23