Fact Check | ವೈರಲ್ ಆಯ್ತು ಜಿಯೊ ಗೋಧಿ ಹಿಟ್ಟು, ಪ್ಯಾಕೆಟ್ ಮೇಲಿರುವ ರಿಲಯನ್ಸ್ ಲೋಗೊ ಫೇಕ್

ಸಾಮಾಜಿಕ ಮಾಧ್ಯಮಗಳಲ್ಲಿ ಜಿಯೊ ಗೋಧಿ ಹಿಟ್ಟಿನ ಪ್ಯಾಕೆಟ್ ಗಳ ಚಿತ್ರವೊಂದು ವೈರಲ್ ಆಗಿದೆ. ಆದರೆ ಇದು ರಿಲಯನ್ಸ್ ಕಂಪನಿಯ ಗೋಧಿ ಹಿಟ್ಟು ಅಲ್ಲ. ಪ್ಯಾಕೆಟ್ ಮೇಲಿರುವ ಲೋಗೊ ಕೂಡಾ ಬೇರೆ ಇದೆ .

Fact Check | ವೈರಲ್ ಆಯ್ತು ಜಿಯೊ ಗೋಧಿ ಹಿಟ್ಟು, ಪ್ಯಾಕೆಟ್ ಮೇಲಿರುವ ರಿಲಯನ್ಸ್ ಲೋಗೊ ಫೇಕ್
ವೈರಲ್ ಆಗಿರುವ ಫೋಟೊ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 25, 2020 | 9:30 PM

ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನು ವಿರುದ್ಧ ದೆಹಲಿ ಗಡಿಭಾಗದಲ್ಲಿ ರೈತರು ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೊತ್ತಿನಲ್ಲಿಯೇ ಜಿಯೊ ಬ್ರಾಂಡ್ ಹೆಸರಿನ ಗೋಧಿ ಹಿಟ್ಟು ಪ್ಯಾಕೆಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆಯ ಸಾಮಾಜಿಕ ಮಾಧ್ಯಮ ಘಟಕದ ಅಧ್ಯಕ್ಷ ಮನೋಜ್ ಲುಬಾನಾ ಈ ಫೋಟೊ ಟ್ವೀಟ್ ಮಾಡಿ, ಕಾನೂನು ಆಮೇಲೆ ಆಗುತ್ತದೆ ಆದರೆ ಚೀಲಗಳು ಮೊದಲು ಸಿದ್ಧವಾಗುತ್ತಿವೆ. ಈ ಫೋಟೊ ಸಾಕಷ್ಟು ವಿಷಯ ಹೇಳುತ್ತಿದೆ ಎಂದು ಟ್ವೀಟಿಸಿದ್ದಾರೆ. ಹಲವಾರು ನೆಟ್ಟಿಗರು ಈ ಫೋಟೊ ಹಂಚಿಕೊಂಡಿದ್ದು, ಇನ್ನು ಕೆಲವರು #BoycottRelianceproducts ಎಂದು ಹ್ಯಾಷ್ ಟ್ಯಾಗ್ ಟ್ರೆಂಡ್ ಮಾಡಿದ್ದರು.

ಫ್ಯಾಕ್ಟ್ ಚೆಕ್
ಈ ವೈರಲ್ ಚಿತ್ರದ ಬಗ್ಗೆ ದಿ ಪ್ರಿಂಟ್ ಫ್ಯಾಕ್ಟ್ ಚೆಕ್ ಮಾಡಿದ್ದು ಇದು ಫೇಕ್ ಎಂದು ಹೇಳಿದೆ. ವೈರಲ್ ಆಗಿರುವ ಫೋಟೊದಲ್ಲಿರುವ ಗೋಧಿ ಹಿಟ್ಟಿನ ಪ್ಯಾಕೆಟ್ ಮೇಲಿರುವ ಲೋಗೊ ಮತ್ತು ಜಿಯೊ ವೆಬ್ ಸೈಟ್ ನಲ್ಲಿರುವ ಲೋಗೊ ಭಿನ್ನವಾಗಿದೆ.

ಲೋಗೊಗಳು ಭಿನ್ನ

ರಿಲಯನ್ಸ್ ಇಂಡಸ್ಟ್ರೀಸ್ ವೆಬ್ ಸೈಟ್ ನಲ್ಲಿರುವ ಮಾಹಿತಿ ಪ್ರಕಾರ ಜಿಯೊ, ಶತಕೋಟಿ ಭಾರತೀಯರಿಗೆ ಬೃಹತ್ ಡಿಜಿಟಲ್ ವ್ಯವಸ್ಥೆ ಒದಗಿಸುವ ಕಾರ್ಯ ಮಾಡುತ್ತಿದೆ ಎಂದಿದೆ.

ರಿಲಯನ್ಸ್ ಸಂಸ್ಥೆಯು ‘ರಿಲಯನ್ಸ್ ರಿಟೇಲ್’ ಎಂಬ ವಿಭಾಗವನ್ನು ಹೊಂದಿದೆ. ಇದರಲ್ಲಿ ಆಹಾರ ಮತ್ತು ಆಹಾರೋತ್ಪನ್ನಗಳು ಮಾರಾಟವಾಗುತ್ತಿದ್ದು, ರಿಲಯನ್ಸ್ ಫ್ರೆಶ್, ರಿಲಯುನ್ಸ್ ಸ್ಮಾರ್ಟ್ ಮತ್ತು ರಿಲಯನ್ಸ್ ಮಾರ್ಕೆಟ್ ಸ್ಟೋರ್ಸ್ ಮೂಲಕ ಇವುಗಳು ಮಾರಾಟವಾಗುತ್ತವೆ.

ಜಿಯೊ ಕಂಪನಿಯು ರಿಲಯನ್ಸ್ ಡಿಜಿಟಲ್ ಕೆಟಗರಿಯಲ್ಲಿ ಬರುತ್ತಿದ್ದು, ರಿಲಯನ್ಸ್ ಡಿಜಿಟಲ್ ಎಕ್ಸ್ ಪ್ರೆಸ್ ಮಿನಿ ಸ್ಟೋರ್ಸ್ ಮತ್ತು ಜಿಯೊ ಸ್ಟೋರ್ಸ್ ಮೂಲಕ ಕಾರ್ಯ ನಿರ್ವಹಿಸುತ್ತದೆ. ಜಿಯೊ ಕಂಪನಿ ಯಾವುದೇ ಆಹಾರ ಉತ್ಪನ್ನಗಳ ಮಾರಾಟ ಕಾರ್ಯ ನಿರ್ವಹಿಸುತ್ತಿಲ್ಲ.

Fact Check | ಭಾರತೀಯ ರೈಲ್ವೆಯನ್ನು ಅದಾನಿ ಖರೀದಿಸಿದ್ದಾರೆ ಎಂಬ ವೈರಲ್ ವಿಡಿಯೊ ಹಿಂದಿನ ಮರ್ಮವೇನು?