ದೆಹಲಿ: ನಿರ್ದಿಷ್ಟ ಕಾರಣಗಳನ್ನು ನೀಡದೇ, ಇಂದು ಆಯೋಜನೆಯಾಗಿದ್ದ ರೈತ ನಾಯಕರ ಜತೆಗಿನ 10ನೇ ಸುತ್ತಿನ ಸಭೆಯನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ದಿಢೀರನೆ ನಾಳೆಗೆ ಮುಂದೂಡಿದ್ದಾರೆ. 40 ರೈತ ಒಕ್ಕೂಟಗಳಿಗೆ ಈ ಕುರಿತು ಪತ್ರ ಬರೆದು ಜನವರಿ 20ರಂದು ಮಧ್ಯಾಹ್ನ ಎರಡು ಗಂಟೆಗೆ ದೆಹಲಿಯ ವಿಜ್ಞಾನ ಭವನಕ್ಕೆ ಸಭೆಗೆ ಆಗಮಿಸುವಂತೆ ವಿನಂತಿಸಿದ್ದಾರೆ.
ಇಂದು ಸುಪ್ರೀಂ ಕೋರ್ಟ್ ನೇಮಿಸಿರುವ ತಜ್ಞರ ಸಮಿತಿಯು ಮೊದಲ ಸುತ್ತಿನ ಮಾತುಕತೆ ನಡೆಸಲಿದ್ದು, ರೈತ ಸಂಘಟನೆ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇದೇ ಕಾರಣಕ್ಕೆ ಇಂದಿನ 10ನೇ ಸುತ್ತಿನ ಸಭೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.
ರೈತರೇ ನೇರವಾಗಿ ಮಾತುಕತೆಗೆ ಆಗಮಿಸಿದೇ, ರೈತ ನಾಯಕರಷ್ಟೇ ಮಾತುಕತೆಗೆ ಆಗಮಿಸುತ್ತಿರುವುದೇ ಈವರೆಗೂ ಒಮ್ಮತ ಮೂಡದಿರಲು ಕಾರಣ ಎಂದು ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವ ಪುರುಷೋತ್ತಮ್ ರೂಪಾಲಾ ಹೇಳಿದ್ದಾರೆ. ಚಳವಳಿಯಲ್ಲಿ ಭಾಗವಹಿಸಿದ ಜನರ ದೃಷ್ಟಿಕೋನಗಳು ಹೆಚ್ಚಿದಷ್ಟೂ ಒಮ್ಮತ ಮೂಡಲು ಹೆಚ್ಚು ಸಮಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಟ್ರ್ಯಾಕ್ಟರ್ ಪರೇಡ್: ದೆಹಲಿ ಪೊಲೀಸರೇ ನಿರ್ಣಯ ಕೈಗೊಳ್ಳಲಿ ಎಂದ ಸುಪ್ರೀಂ ಕೋರ್ಟ್