ಹೊಸ ಕೃಷಿ ಕಾಯ್ದೆಯ ಬಗ್ಗೆ ರೈತರ ಹಾದಿ ತಪ್ಪಿಸಲಾಗುತ್ತಿದೆ: ವಾರಣಾಸಿಯಲ್ಲಿ ಪ್ರಧಾನಿ ಮೋದಿ ಹೇಳಿಕೆ

| Updated By: ganapathi bhat

Updated on: Apr 06, 2022 | 11:28 PM

ಸರ್ಕಾರದ ಹೊಸ ಕೃಷಿ ಕಾಯ್ದೆಯು ರೈತರ ಪರವಾಗಿ ಇದೆ, ಮಾರುಕಟ್ಟೆಯೊಂದಿಗಿನ ನೇರ ಸಂಪರ್ಕ ರೈತರಿಗೆ ಹೆಚ್ಚು ಲಾಭವನ್ನೇ ತರಲಿದೆ. ಸುಳ್ಳು ಸುದ್ದಿಗಳಿಂದ ರೈತರ ಹಾದಿ ತಪ್ಪಿಸಲಾಗುತ್ತಿದೆ ಎಂದ ಪ್ರಧಾನಿ ಮೋದಿ.

ಹೊಸ ಕೃಷಿ ಕಾಯ್ದೆಯ ಬಗ್ಗೆ ರೈತರ ಹಾದಿ ತಪ್ಪಿಸಲಾಗುತ್ತಿದೆ: ವಾರಣಾಸಿಯಲ್ಲಿ ಪ್ರಧಾನಿ ಮೋದಿ ಹೇಳಿಕೆ
ಪ್ರಧಾನಿ ಮೋದಿ
Follow us on

ವಾರಣಾಸಿ: ಹೊಸ ಕೃಷಿ ಕಾಯ್ದೆಗಳ ಮೂಲಕ ರೈತರ ಮಾರುಕಟ್ಟೆಯನ್ನು ವಿಸ್ತರಿಸಲಾಗಿದೆ. ತಾವು ಬೆಳೆದ ಬೆಳೆಯನ್ನು ನೇರವಾಗಿ ಮಾರುಕಟ್ಟೆಗೆ ಸರಬರಾಜು ಮಾಡುವ ಸೌಲಭ್ಯ ನೀಡಲಾಗಿದೆ. ಈ ಬಗ್ಗೆ ರೈತರಿಗೆ ಕಾನೂನು ರಕ್ಷಣೆಯನ್ನೂ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ತಮ್ಮ ಸ್ವಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ ಅವರು ವಾರಣಾಸಿ-ಪ್ರಯಾಗ್​ರಾಜ್ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ರಾಷ್ಟ್ರ ರಾಜಧಾನಿಯಲ್ಲಿ ರೈತರ ಹೋರಾಟದ ಕಾವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿ, ಸರ್ಕಾರದ ಹೊಸ ಕೃಷಿ ಕಾಯ್ದೆಗಳು ರೈತರ ಪರವಾಗಿ ಇದೆ. ಮಾರುಕಟ್ಟೆಯೊಂದಿಗಿನ ನೇರ ಸಂಪರ್ಕ ರೈತರಿಗೆ ಹೆಚ್ಚು ಲಾಭವನ್ನೇ ತರಲಿದೆ ಎಂದು ಹೇಳಿದರು. ಸುಳ್ಳು ಸುದ್ದಿಗಳಿಂದ ರೈತರ ಹಾದಿ ತಪ್ಪಿಸಲಾಗುತ್ತಿದೆ ಎಂದು ಮೋದಿ ಅಭಿಪ್ರಾಯಪಟ್ಟರು.

ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ
ಈ ಹಿಂದೆ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುತ್ತಿದ್ದ ವಿರೋಧ ಪಕ್ಷಗಳಿಗೆ ಈಗ ಗಾಳಿಸುದ್ದಿಯೇ ಅಸ್ತ್ರವಾಗಿದೆ. ಸರ್ಕಾರದ ವಿಚಾರ ಸರಿಯಾಗಿದ್ದರೂ ವಿರೋಧ ಪಕ್ಷಗಳ ಕುತಂತ್ರಕ್ಕೆ ಅವು ಬಲಿಯಾಗುತ್ತಿವೆ ಎಂದು ಮೋದಿ ಮಾತನಾಡಿದರು.

ರೈತರ ಹೋರಾಟ ನಿಂತಿಲ್ಲ
ರೈತ ಕಾಯ್ದೆಯ ಬಗ್ಗೆ ಸರ್ಕಾರದೊಂದಿಗಿನ ಮಾತುಕತೆಯ ಆಹ್ವಾನವನ್ನು ನಿರಾಕರಿಸಿರುವ ರೈತರು, ದೆಹಲಿಯ ಹೊರಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಾರ್ಯಕ್ರಮದ ಬಳಿಕ ಕಾಶಿ ವಿಶ್ವನಾಥ ಕ್ಷೇತ್ರಕ್ಕೆ ಭೇಟಿ ನೀಡಿದ ಪ್ರಧಾನಿ, ಕ್ಷೇತ್ರದ ಕಾರಿಡಾರ್ ಯೋಜನೆಯನ್ನು ಪರಿಶೀಲಿಸಿದರು. ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಉಪಸ್ಥಿತರಿದ್ದರು.

ಇದನ್ನೂ ಓದಿ: ವಾರಣಾಸಿಗೆ ಇಂದು ಪ್ರಧಾನಿ ನರೇಂದ್ರ ಮೋದಿ: ಪ್ರಯಾಗ್​ರಾಜ್-ವಾರಣಾಸಿ ಹೆದ್ದಾರಿ ಕಾಮಗಾರಿಗೆ ಚಾಲನೆ

Published On - 6:06 pm, Mon, 30 November 20