Delhi Chalo ಪಟ್ಟು ಬಿಡದ ರೈತರಿಂದ ಉಪವಾಸ ಸತ್ಯಾಗ್ರಹ ಆರಂಭ
ಸತತ 19ನೇ ದಿನದ ಪ್ರತಿಭಟನೆ ನಿಮಿತ್ತ ಇಂದು ಪಂಜಾಬ್ ರೈತರು ಒಂದು ದಿನದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಈಗಾಗಲೇ ಬೆಳಗ್ಗೆ 8ರಿಂದ ಉಪವಾಸ ಸತ್ಯಾಗ್ರಹ ಆರಂಭವಾಗಿದೆ.
ದೆಹಲಿ: ಸತತ 19ನೇ ದಿನದ ಪ್ರತಿಭಟನೆ ನಿಮಿತ್ತ ಇಂದು ಪಂಜಾಬ್ ರೈತರು ಒಂದು ದಿನದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಈಗಾಗಲೇ ಬೆಳಗ್ಗೆ 8ರಿಂದ ಉಪವಾಸ ಸತ್ಯಾಗ್ರಹ ಆರಂಭವಾಗಿದೆ. ದೆಹಲಿ-ಹರಿಯಾಣದ ವಿವಿಧ ಗಡಿಗಳಲ್ಲಿ ರೈತ ಒಕ್ಕೂಟಗಳ 40 ನಾಯಕರು ಸಂಜೆ 5ರವರೆಗೂ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಸಿಂಘು ಗಡಿಯಲ್ಲಿ 25, ಟಿಕ್ರಿ ಗಡಿಯಲ್ಲಿ 10, ಉತ್ತರ ಪ್ರದೇಶ ಗಡಿಯಲ್ಲಿ 5 ರೈತ ನಾಯಕರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಜೊತೆಗೆ ಸಾವಿರಾರು ಬೆಂಬಲಿಗರು ರೈತ ನಾಯಕರ ಜೊತೆಗೂಡಲಿದ್ದಾರೆ.
ಆದರೆ, ಭಾರತೀಯ ಕಿಸಾನ್ ಯೂನಿಯನ್ನ ಒಂದು ಬಣ ಇಂದಿನ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ತಿಳಿಸಿದೆ. ಬಂಧಿತ ರೈತ ಪ್ರತಿಭಟನಾಕಾರರ ಬಿಡುಗಡೆಗೆ ಒತ್ತಾಯಿಸಿ ಕಳೆದ ವಾರ ಈ ಸಂಘಟನೆ ಪ್ರತಿಭಟನೆ ನಡೆಸಿತ್ತು. ನಂತರ, ಬಿಜೆಪಿಯ ಕೆಲವು ನಾಯಕರು ದೆಹಲಿ ಚಲೋ ‘ಸಮಾಜ ಘಾತುಕ’ ಶಕ್ತಿಗಳ ವಶವಾಗಿದೆಯೆಂದು ಆಪಾದಿಸಿದ್ದರು. ಅರವಿಂದ್ ಕೇಜ್ರಿವಾಲ್ ಬೆಂಬಲ
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಹ ಇಂದು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಗೂ ಸತ್ಯಾಗ್ರಹದ ಕರೆ ನೀಡಿರುವ ಅವರು, ದೆಹಲಿ ಚಲೋವನ್ನು ಮನೆಗಳಿಂದಲೇ ಬೆಂಬಲಿಸುವಂತೆ ಕಾರ್ಯಕರ್ತರಲ್ಲಿ ವಿನಂತಿಸಿದ್ದಾರೆ.