ಲಖನೌ: ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಆರಂಭವಾಗಿ ಸುಮಾರು ಒಂದು ತಿಂಗಳಾಗುತ್ತಿದೆ. ಇದೀಗ ಪ್ರತಿಭಟನೆಯ ಜೊತೆಜೊತೆಗೆ ವಿಭಿನ್ನ ಹಾದಿ ಹಿಡಿದಿರುವ ರೈತರು ಮಾಜಿ ಪ್ರಧಾನಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನ ಮತ್ತು ಕೃಷಿ ದಿನವಾಗಿರುವ ಇಂದು ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಯಜ್ಞ ಆಯೋಜಿಸುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಕಿಸಾನ್ ಯೂನಿಯನ್ (ಅಸ್ಲಿ) ವಿಭಾಗೀಯ ಅಧ್ಯಕ್ಷ ಸಂಜಯ್ ಗಾಂಧಿ, ಸರ್ಕಾರಕ್ಕೆ ಬುದ್ಧಿ ಮತ್ತು ಶುದ್ಧಿ ಲಭಿಸಲಿ ಎಂಬ ಉದ್ದೇಶದಿಂದ ಯಜ್ಞ ಆಯೋಜಿಸಿದ್ದೇವೆ. ಈ ಮೂಲಕ ನೂತನ ಕೃಷಿ ಕಾಯ್ದೆಯ ಬಗ್ಗೆ ಸರ್ಕಾರಕ್ಕೆ ಮನಃಪರಿವರ್ತನೆ ಆಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
ಸರ್ಕಾರ ರೈತರ ಬೇಡಿಕೆಯನ್ನು ಆಲಿಸಿಕೊಳ್ಳಲು ತಯಾರಿಲ್ಲ. ಈ ಕಾರಣದಿಂದಲೇ ನಮ್ಮ ಪ್ರತಿಭಟನೆ ಈಗ ಚಳವಳಿಯಾಗಿ ರೂಪುಗೊಂಡಿದೆ. ಇನ್ನಾದರೂ ಸರ್ಕಾರ ರೈತರತ್ತ ಗಮನ ನೀಡುವಂತೆ ಆಶಿಸುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಅಸ್ಲಿ) ಸಂಭಾಲ್ ಜಿಲ್ಲಾಧ್ಯಕ್ಷ ರಾಜ್ಪಾಲ್ ಸಿಂಗ್ ಹೇಳಿದ್ದಾರೆ.
ಯಜ್ಞಯಾಗ, ಹೋಮಹವನಗಳ ಮೂಲಕ ಸದ್ದು ಮಾಡುವ ಬಿಜೆಪಿ ಪಕ್ಷದ ನಾಯಕರ ಮನಗೆಲ್ಲಲು ರೈತರು ಅವರದ್ದೇ ಹಾದಿ ಹಿಡಿದಿವುದು ಕುತೂಹಲಕಾರಿ. ಗಾಜಿಯಾಬಾದ್ ಬಳಿಯೂ ನಿನ್ನೆ ರೈತರು ಸಾಂಕೇತವಾಗಿ ಹೋಮ ಮಾಡುವ ಮೂಲಕ ಗಮನಸೆಳೆದಿದ್ದರು.
National Farmers Day 2020 | ಹೊಲದತ್ತ ಹೆಜ್ಜೆ ಹಾಕಲು ಭಯವೇಕೆ? ಮಣ್ಣಲ್ಲವೇ ನಮ್ಮನ್ನೆಲ್ಲಾ ಪೊರೆವ ತಾಯಿ..