Delhi Chalo ಪರಿಣಾಮ ದೆಹಲಿ ವಾಸ ದುಬಾರಿ: ಸರಕು ಸಾಗಾಣಿಕೆ ಸ್ಥಗಿತ, ಅಗತ್ಯ ವಸ್ತು ಪೂರೈಕೆ ಕಷ್ಟ ಕಷ್ಟ
ಪಂಜಾಬ್ ರೈತರ ಪ್ರತಿಭಟನೆಯಿಂದ ದೆಹಲಿ-ಹರಿಯಾಣ ಗಡಿ ಬಂದ್ ಆಗಿರುವುದರಿಂದ ಅಗತ್ಯ ಸರಕು ಸೇವಾ ಲಾರಿಗಳು 100ಕಿಮೀ ದೂರದ ಬದಲಿ ಮಾರ್ಗ ಬಳಸಿ ದೆಹಲಿ ತಲುಪುತ್ತಿವೆ. ಸಾಗಾಣಿಕಾ ವೆಚ್ಚದ ಹೆಚ್ಚಳದಿಂದ ಹಣ್ಣು ತರಕಾರಿಗಳ ಬೆಲೆ ಗಗನಕ್ಕೇರುವ ಸಂಭವವಿದೆ.
ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹಣ್ಣು ಮತ್ತು ತರಕಾರಿಗಳ ಬೆಲೆ ಗಗನಕ್ಕೇರುವ ಸಾಧ್ಯತೆ ದಟ್ಟವಾಗಿದೆ. ಪಂಜಾಬ್ ರೈತರ ಪ್ರತಿಭಟನೆಯಿಂದ ದೆಹಲಿ-ಹರಿಯಾಣ ಗಡಿ ಬಂದ್ ಆಗಿರುವುದರಿಂದ ಅಗತ್ಯ ಸರಕು ಸೇವಾ ಲಾರಿಗಳು 100 ಕಿಮೀ ದೂರದ ಬದಲಿ ಮಾರ್ಗ ಬಳಸಿ ದೆಹಲಿ ತಲುಪುತ್ತಿವೆ. ಒಂದು ಅಂದಾಜಿನ ಪ್ರಕಾರ ಶೇ 15ರಿಂದ 25ರಷ್ಟು ಸಾಗಾಣಿಕಾ ವೆಚ್ಚ ಹೆಚ್ಚಳವಾಗಿದೆ. ಹೀಗಾಗಿ, ಹಣ್ಣು ತರಕಾರಿ, ದಿನಸಿಗಳ ಬೆಲೆ ಹೆಚ್ಚಳವಾಗಲಿದೆ.
ನಾಳೆ ದೆಹಲಿಯಲ್ಲಿ ಚಲಿಸುವುದಿಲ್ಲ ಲಾರಿಗಳು ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ನಾಳೆಯ ಬಂದ್ಗೆ ಬೆಂಬಲ ಘೋಷಿಸಿದೆ. ಅಲ್ಲದೇ, ನಾಳೆ ಯಾವುದೇ ಸರಕು ಸೇವಾ ಲಾರಿಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಿದೆ.
ದೆಹಲಿಯ ಮಾರುಕಟ್ಟೆಗಳಿಗೆ ಅಗತ್ಯ ವಸ್ತುಗಳ ಪೂರೈಕೆ ಈಗಾಗಲೇ ಅರ್ಧಕ್ಕರ್ಧ ಕುಸಿದಿದೆ. 9-10 ಟನ್ ಸಾಮರ್ಥ್ಯದ ವಾಹನಗಳಲ್ಲಿ ಸರಕು ಸಾಗಾಣಿಕೆಯನ್ನು ಸ್ಥಗಿತಗೊಳಿಸಲಾಗಿದೆ. ನಷ್ಟ ತಗ್ಗಿಸುವ ದೃಷ್ಟಿಯಿಂದ ದ್ರಾಕ್ಷಿ ಮತ್ತು ಟೊಮ್ಯಾಟೋ ಖರೀದಿಯನ್ನು ತಗ್ಗಿಸುವಂತೆ ವ್ಯಾಪಾರಿಗಳಿಗೆ ಹಿಂದೆಯೇ ಸಲಹೆ ನೀಡಲಾಗಿತ್ತು.
ಸಾಗಾಣಿಕಾ ವಾಹನಗಳ ಲಭ್ಯತೆಯೂ ಕಡಿಮೆಯಾಗಿದೆ. ಪಂಜಾಬ್ನಿಂದ ಆಮದಾಗಬೇಕಿದ್ದ ಆಲೂಗಡ್ಡೆ ಮತ್ತು ಅವರೆಕಾಳಿನ ಸರಬರಾಜಿನಲ್ಲೂ ಅರ್ಧಕ್ಕರ್ಧ ವ್ಯತ್ಯಯ ಉಂಟಾಗಿದೆ. ಒಟ್ಟಿನಲ್ಲಿ ರಾಷ್ಟ್ರ ರಾಜಧಾನಿಯ ವಾಸಿಗರು ದೆಹಲಿ ಚಲೋ ಮುಗಿಯುವವರೆಗೂ ದುಬಾರಿಯ ದಿನಗಳನ್ನು ಅನುಭವಿಸುವುದು ಖಚಿತ.
Delhi Chalo ರೈತರಿಗೆ ದಿಲ್ಜಿತ್ ದೊಸಾಂಜ್ ಸಹಾಯ: 1 ಕೋಟಿ ದಾನ ನೀಡಿದ್ರೂ ಪ್ರಚಾರ ಬಯಸದ ನಟ
Published On - 1:19 pm, Mon, 7 December 20