ದೆಹಲಿ: ಮೋದಿಜೀ, ಯೋಗಿಜೀ ಹಾಗೂ ಎಲ್ಲರೂ ಜಾಗೃತರಾಗಿ ಕೇಳಿರಿ.. ಪ್ರತಿಭಟನಾ ನಿರತ ರೈತರು ಅವಮಾನ ಮತ್ತು ಮಾನಹಾನಿಗೊಂಡು ಈ ಚಳುವಳಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ವರಾಜ್ ಪಕ್ಷದ ನಾಯಕ ಯೋಗೇಂದ್ರ ಯಾದವ್ ಎಚ್ಚರಿಕೆ ನೀಡಿದ್ದಾರೆ. ರೈತ ಹೋರಾಟವನ್ನು ಉದ್ದೇಶಿಸಿ, ದೆಹಲಿ-ಉತ್ತರ ಪ್ರದೇಶ ಗಡಿಭಾಗದಲ್ಲಿ ಯಾದವ್ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ಪ್ರತಿಭಟನಾ ಸ್ಥಳದಿಂದ ತೆರಳುವುದಿಲ್ಲ ಎಂದು ಹೇಳಿದ್ದಾರೆ.
ಇಂದು ಸಿಂಘು ಗಡಿಭಾಗದಲ್ಲಿ ಪ್ರತಿಭಟನಾ ನಿರತರಾಗಿದ್ದ ರೈತರನ್ನು ಚದುರಿಸಲು ಹಾಗೂ ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರು. ಸ್ಥಳೀಯರು ಎಂದು ಗುರುತಿಸಲ್ಪಟ್ಟ ಅನೇಕರು ಕೂಡ ರೈತರು ಜಾಗ ಖಾಲಿ ಮಾಡಬೇಕು ಎಂದು ಆಗ್ರಹಿಸಿದ್ದರು.
ಇಂದು ಮುಂಜಾನೆ ವೇಳೆ, ಭಾರತೀಯ ಕಿಸಾನ್ ಯೂನಿಯನ್ (BKU) ಸದಸ್ಯರು ಕೂಡ ದೆಹಲಿ-ಮೀರತ್ ಹೆದ್ದಾರಿಯಲ್ಲಿ ನೆಲೆಯೂರಿದ್ದರು. ಗಾಜಿಬಾದ್ ಆಡಳಿತವು ಉತ್ತರ ಪ್ರದೇಶ ಪ್ರತಿಭಟನಾ ಸ್ಥಳದಿಂದ ಜಾಗ ಖಾಲಿ ಮಾಡುವಂತೆ ಸೂಚನೆ ನೀಡಿತ್ತು. ಗುರುವಾರದ ಬಳಿಕ, ನೂರಾರು ಪೊಲೀಸರು ಕೂಡ ಸ್ಥಳದಲ್ಲಿ ನಿಯೋಜನೆಗೊಂಡಿದ್ದರು. ಜಿಲ್ಲಾ ಮ್ಯಾಜಿಸ್ಟ್ರೇಟ್ ಅಜಯ್ ಶಂಕರ್ ಪಾಂಡೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಕಲಾನಿಧಿ ನೈತಾನಿ ಪ್ರತಿಭಟನಾ ನಿರತ ಸ್ಥಳಕ್ಕೆ ಭೇಟಿ ನೀಡಿದ್ದರು.
ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳ ಮುಖಂಡರ ಮೇಲೆ ಎಫ್ಐಆರ್ ದಾಖಲಾಗಿತ್ತು. ಇದೀಗ ಪ್ರತಿಭಟನೆಯಲ್ಲಿ ತೊಡಗಿದ ಯೋಗೇಂದ್ರ ಯಾದವ್, ಮೇಧಾ ಪಾಟ್ಕರ್, ಲಖಾ ಸಿಧಾನ, ನಟ ದೀಪು ಸಿಧು ವಿರುದ್ಧ ಲುಕ್ ಔಟ್ ನೋಟೀಸ್ ಜಾರಿ ಮಾಡಲಾಗಿದೆ. ಎಫ್ಐಆರ್ನಲ್ಲಿ ಹೆಸರಿರುವ ಎಲ್ಲಾ ರೈತಮುಖಂಡರು ಈ ಮೂಲಕ ತಮ್ಮ ಪಾಸ್ಪೋರ್ಟ್ ಒಪ್ಪಿಸಬೇಕಾಗಿದೆ. ಎಫ್ಐಆರ್ ಜಾರಿಯಾಗಿರುವ ಪ್ರತಿಭಟನಾಕಾರರು ದೇಶ ತೊರೆಯದಂತೆ ನೋಡಿಕೊಳ್ಳಲು ಇದರಿಂದ ಸಾಧ್ಯವಾಗಿದೆ.
ರೈತರೇ ಹೋರಾಟ ಮುಂದುವರಿಸಿ, ನಿಮ್ಮ ಜತೆ ನಾವಿದ್ದೇವೆ: ರಾಹುಲ್ ಗಾಂಧಿ ಅಭಯ‘ಹಸ್ತ‘
Published On - 6:22 pm, Fri, 29 January 21