ದೆಹಲಿ: ಭಾರತದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೇ ನೀಡಿದ್ದ ಹೇಳಿಕೆಯನ್ನು ಭಾರತದ ಮಾಜಿ ರಾಯಭಾರಿಗಳ ಒಕ್ಕೂಟ ಖಂಡಿಸಿದೆ. ಭಾರತೀಯ ರಾಯಭಾರಿಗಳು ಇಂದು ಬರೆದ ಪತ್ರದಲ್ಲಿ ಕೆನಡಾ ಹೇಳಿಕೆಯನ್ನು ‘ವೋಟ್ ಬ್ಯಾಂಕ್ ಪಾಲಿಟಿಕ್ಸ್’ ಎಂದು ಟೀಕಿಸಿದೆ.
ಜಸ್ಟಿನ್ ಟ್ರುಡೇ ಹೇಳಿಕೆಯು ಸತ್ಯಕ್ಕೆ ದೂರವಾಗಿದೆ ಎಂದಿರುವ ರಾಯಭಾರಿಗಳು, ಪ್ರಧಾನಿ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದಿದ್ದಾರೆ. ಅಭಿಮಾನಿಗಳನ್ನು ಸೃಷ್ಟಿಸಿಕೊಳ್ಳಲು ಅವರು ಹೀಗೆ ಮಾತನಾಡಿದ್ದಾರೆ. ಲಿಬರಲ್ ಪಕ್ಷದ ಮತದಾರರನ್ನು ಓಲೈಸಲು ಭಾರತೀಯ ಆಂತರಿಕ ವಿಚಾರಗಳಲ್ಲಿ ಕೆನಡಾ ಮೂಗುತೂರಿಸುವುದು ಸರಿಯಲ್ಲ. ಇದರಿಂದ ಎರಡು ದೇಶದ ಸಂಬಂಧದ ಮೇಲೆ ಕರಿನೆರಳು ಮುಸುಕುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೀಗೆ ಬರೆದಿರುವ ಪತ್ರಕ್ಕೆ ಸುಮಾರು 22 ಭಾರತೀಯ ರಾಯಭಾರಿಗಳು ಸಹಿ ಮಾಡಿದ್ದಾರೆ. ಭಾರತೀಯ ರೈತರಿಗೆ ಬೆಂಬಲ ಸೂಚಿಸಿರುವ ಕೆನಡಾವು ಈ ವಿಚಾರದಲ್ಲಿ ದ್ವಂದ್ವ ನಿಲುವು ತಾಳಿದೆ ಎಂಬುದನ್ನು ಪತ್ರದ ಮುಖ್ಯಾಂಶವಾಗಿ ಬರೆಯಲಾಗಿದೆ. ಈ ಹಿಂದೆ ಕೆನಡಾವು ಭಾರತದ ಕನಿಷ್ಠ ಬೆಂಬಲ ಬೆಲೆ (MSP) ವ್ಯವಸ್ಥೆಯನ್ನು ವಿರೋಧಿಸಿ ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ (WTO) ಹೇಳಿಕೆ ನೀಡಿತ್ತು.
ಜಸ್ಟಿನ್ ಟ್ರುಡೇ, ಗುರುನಾನಕ್ ಜಯಂತಿಯಲ್ಲಿ ಮಾತನಾಡಿರುವ ವಿಡಿಯೊ ತುಣುಕನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ‘ಶಾಂತಿಯುತವಾದ ಪ್ರತಿಭಟನೆಯ ಹಕ್ಕನ್ನು ಕೆನಡಾ ದೇಶ ಸದಾ ಬೆಂಬಲಿಸುತ್ತದೆ. ಭಾರತದ ರೈತರ ಪ್ರತಿಭಟನೆಯನ್ನು ಗುರುತಿಸದೇ ಹೋದರೆ, ನಾನು ಅಜಾಗರೂಕ ವರ್ತನೆ ತೋರಿದಂತೆ ಆಗುತ್ತದೆ’ ಎಂದಿದ್ದರು. ಭಾರತೀಯ ನಾಯಕರನ್ನು ಈ ಸಂವಾದ ತಲುಪಬೇಕು ಎಂದು ಅಭಿಪ್ರಾಯಪಟ್ಟಿದ್ದರು.
ಭಾರತದ ಆಂತರಿಕ ವಿಚಾರಗಳ ಬಗ್ಗೆ ಮತ್ತೊಂದು ದೇಶದ ಪ್ರಧಾನಿ ಪ್ರತಿಕ್ರಿಯಿಸಿರುವುದಕ್ಕೆ ಭಾರತದ ವಿದೇಶಾಂಗ ಇಲಾಖೆಯೂ ಆಕ್ಷೇಪ ವ್ಯಕ್ತಪಡಿಸಿತ್ತು. ಕೆನಡಾ ಪ್ರಧಾನಿಯ ಹೇಳಿಕೆಯನ್ನು ಭಾರತ ಗಂಭೀರವಾಗಿ ಪರಿಗಣಿಸಿ, ಪ್ರತಿನಡೆಯ ಕ್ರಮಗಳಿಗೆ ಮುಂದಾದರೆ ಭಾರತ-ಕೆನಡಾ ಸಂಬಂಧದ ಮೇಲೆ ದೂರಗಾಮಿ ಪರಿಣಾಮಗಳು ಉಂಟಾಗಬಹುದು ಎಂದು ವಿಶ್ಲೇಷಿಸಲಾಗಿತ್ತು.
ರೈತ ಹೋರಾಟದ ಪರ ಮಾತನಾಡಿದ ಕೆನಡಾ ಪ್ರಧಾನಿ: ಆಂತರಿಕ ವಿಚಾರಗಳ ಬಗ್ಗೆ ಅನಗತ್ಯ ಮಾತು ಬೇಡ ಎಂದ ಭಾರತ
Published On - 8:23 pm, Mon, 14 December 20