Sonam Wangchuk: ಲಡಾಖ್‌ನಲ್ಲಿ ಸೋನಮ್ ವಾಂಗ್‌ಚುಕ್ ಆಮರಣಾಂತ ಉಪವಾಸ ಕೈಗೊಂಡಿರುವುದೇತಕ್ಕೆ?

|

Updated on: Mar 26, 2024 | 5:05 PM

ಮಾರ್ಚ್ 6 ರಂದು, ಶೂನ್ಯ ತಾಪಮಾನದಲ್ಲಿ ಸಮುದ್ರ ಮಟ್ಟದಿಂದ 3,500 ಮೀಟರ್ ಎತ್ತರದಲ್ಲಿ ಸೋನಮ್ ವಾಂಗ್‌ಚುಕ್ ಪ್ರತಿಭಟನೆ ಆರಂಭಿಸಿದ್ದಾರೆ. ಈ ಪ್ರತಿಭಟನೆಯ ಲಡಾಖ್‌ಗೆ ಸ್ವಾಯತ್ತತೆಯನ್ನು ತರಲು ಪ್ರಯತ್ನಿಸುತ್ತದೆ. ಅದೇ ವೇಳೆ ಕೈಗಾರಿಕೀಕರಣದಿಂದ ಹಿಮಾಲಯ ಪ್ರದೇಶದ ದುರ್ಬಲ ಪರಿಸರ ಮತ್ತು ಹಿಮನದಿಗಳಿಗೆ ಹಾನಿಯನ್ನು ಎತ್ತಿ ತೋರಿಸುತ್ತದೆ.

Sonam Wangchuk: ಲಡಾಖ್‌ನಲ್ಲಿ ಸೋನಮ್ ವಾಂಗ್‌ಚುಕ್ ಆಮರಣಾಂತ ಉಪವಾಸ ಕೈಗೊಂಡಿರುವುದೇತಕ್ಕೆ?
ಸೋನಮ್ ವಾಂಗ್‌ಚುಕ್
Follow us on

ದೆಹಲಿ ಮಾರ್ಚ್ 26: ಸೋನಮ್ ವಾಂಗ್‌ಚುಕ್ (Sonam Wangchuk) , ನವೋದ್ಯಮಿ, ಇಂಜಿನಿಯರ್ ಮತ್ತು ಶಿಕ್ಷಣ ಸುಧಾರಣಾವಾದಿ. ಇವರು ಮಾರ್ಚ್ 6ರಿಂದ ಆಮರಣಾಂತ ಉಪವಾಸ (fast unto death) ಆರಂಭಿಸಿದ್ದು, ಇಂದಿಗೆ 20 ದಿನಗಳು ದಾಟಿವೆ. ಸೋನಮ್ ವಾಂಗ್‌ಚುಕ್ ಅವರು ಯಾರು ಎಂಬುದನ್ನು ಸರಳವಾಗಿ ಹೇಳಬೇಕಾದರೆ ನೀವೆಲ್ಲರೂ ರಾಜ್ ಕುಮಾರ್ ಹಿರಾನಿ ಅವರ ತ್ರೀ ಈಡಿಯಟ್ಸ್ ಸಿನಿಮಾ ನೋಡಿರಬಹುದು. ಅದರಲ್ಲಿ ಅಮೀರ್ ಖಾನ್ ನಿರ್ವಹಿಸಿದ ರಾಂಚೋ/ ಫುನ್ಸುಖ್ ವಾಂಗ್ಡು ಕಥಾಪಾತ್ರಕ್ಕೆ ಸ್ಫೂರ್ತಿಯಾದ ವ್ಯಕ್ತಿಯೇ ಈ ಸೋನಮ್ ವಾಂಗ್‌ಚುಕ್. ಲಡಾಖ್‌ನ (Ladakh) ಇಂಜಿನಿಯರ್ ಮತ್ತು ಶಿಕ್ಷಣ ಸುಧಾರಕ ಸೋನಮ್ ವಾಂಗ್‌ಚುಕ್, ಈ ಪ್ರದೇಶದಲ್ಲಿ ಶಿಕ್ಷಣ ಮತ್ತು ಸುಸ್ಥಿರ ಅಭಿವೃದ್ಧಿಗೆ ಅವರ ನವೀನ ವಿಧಾನಗಳನ್ನು ಕೈಗೊಂಡವರು.

ಮಾರ್ಚ್ 6 ರಂದು, ಶೂನ್ಯ ತಾಪಮಾನದಲ್ಲಿ ಸಮುದ್ರ ಮಟ್ಟದಿಂದ 3,500 ಮೀಟರ್ ಎತ್ತರದಲ್ಲಿ ಅವರು ಪ್ರತಿಭಟನೆ ಆರಂಭಿಸಿದ್ದಾರೆ. ಈ ಪ್ರತಿಭಟನೆಯ ಲಡಾಖ್‌ಗೆ ಸ್ವಾಯತ್ತತೆಯನ್ನು ತರಲು ಪ್ರಯತ್ನಿಸುತ್ತದೆ. ಅದೇ ವೇಳೆ ಕೈಗಾರಿಕೀಕರಣದಿಂದ ಹಿಮಾಲಯ ಪ್ರದೇಶದ ದುರ್ಬಲ ಪರಿಸರ ಮತ್ತು ಹಿಮನದಿಗಳಿಗೆ ಹಾನಿಯನ್ನು ಎತ್ತಿ ತೋರಿಸುತ್ತದೆ. ವಾಂಗ್‌ಚುಕ್ ಅವರು ಆರಂಭದಲ್ಲಿ ಯೋಜಿಸಿದಂತೆ ಇನ್ನೂ ಮೂರು ದಿನಗಳವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದ್ದಾರೆ. ಶನಿವಾರ ತಮ್ಮ ಬೆಂಬಲವನ್ನು ತೋರಿಸಲು ಲೇಹ್ ನಗರದಲ್ಲಿನ ಅವರ ಪ್ರತಿಭಟನಾ ಸ್ಥಳಕ್ಕೆ ಸುಮಾರು 2,000 ಜನರು ಬಂದಿದ್ದಾರೆ ಎಂದು ಸೋನಮ್ ವಾಂಗ್‌ಚುಕ್ ಹೇಳಿದ್ದಾರೆ.

ಪ್ರತಿಭಟನೆಯ ಉದ್ದೇಶವೇನು?

ಸೋನಮ್ ವಾಂಗ್‌ಚುಕ್ ಅವರು ಲಡಾಖ್‌ಗೆ ರಾಜ್ಯ ಸ್ಥಾನಮಾನ ಮತ್ತು ಆರನೇ ಶೆಡ್ಯೂಲ್ ಅನುಷ್ಠಾನಕ್ಕೆ ಒತ್ತಾಯಿಸುತ್ತಿದ್ದಾರೆ. ಆರನೇ ಶೆಡ್ಯೂಲ್ ಬುಡಕಟ್ಟು ಪ್ರದೇಶಗಳಿಗೆ ಭೂ ರಕ್ಷಣೆ ಮತ್ತು ಸ್ವಾಯತ್ತತೆಯನ್ನು ಖಾತ್ರಿಗೊಳಿಸುತ್ತದೆ. ಲಡಾಖ್ ದಕ್ಷಿಣಕ್ಕೆ ಬೃಹತ್ ಕೈಗಾರಿಕಾ ಸ್ಥಾವರ ಮತ್ತು ಉತ್ತರಕ್ಕೆ ಚೀನಾದ ಅತಿಕ್ರಮಣದಿಂದ ಪ್ರಧಾನ ಹುಲ್ಲುಗಾವಲು ಭೂಮಿಯನ್ನು ಕಳೆದುಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ನೆಲದ ವಾಸ್ತವತೆಯನ್ನು ತೋರಿಸಲು ನಾವು ಶೀಘ್ರದಲ್ಲೇ 10,000 ಲಡಾಕಿ ಕುರುಬರು ಮತ್ತು ರೈತರ ಗಡಿ ಮಾರ್ಚ್ ಅನ್ನು ಯೋಜಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಲೇಹ್ ಮತ್ತು ಕಾರ್ಗಿಲ್‌ಗೆ ಪ್ರತ್ಯೇಕ ಲೋಕಸಭಾ ಸ್ಥಾನಗಳು, ಸ್ಥಳೀಯರಿಗೆ ಉದ್ಯೋಗಾವಕಾಶಗಳು ಮತ್ತು ಲಡಾಖ್‌ನಲ್ಲಿ ಲೇಹ್ ಮತ್ತು ಕಾರ್ಗಿಲ್ ಜಿಲ್ಲೆಗಳಿಗೆ ಸಾರ್ವಜನಿಕ ಸೇವಾ ಆಯೋಗವನ್ನು ಬೇಕು ಎಂದು ವಾಂಗ್‌ಚುಕ್ ಒತ್ತಾಯಿಸಿದ್ದಾರೆ.

ಕೈಗಾರಿಕೀಕರಣದಿಂದ ಉಂಟಾದ ಪರಿಸರ ಹಾನಿಯ ಕಳವಳ ವ್ಯಕ್ತಪಡಿಸಿದ ಅವರು ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸದೆ 13 ಗಿಗಾವ್ಯಾಟ್ ಯೋಜನೆಯನ್ನು ಸರ್ಕಾರ ಹೇರುತ್ತಿದೆ ಎಂದು ಟೀಕಿಸಿದ್ದಾರೆ.

ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ಭಾಗವಾಗಿದ್ದ ಲಡಾಖ್ ಈಗ ಅಸೆಂಬ್ಲಿ ಇಲ್ಲದೆ ಕೇಂದ್ರಾಡಳಿತ ಪ್ರದೇಶವಾಗಿ ನಿಂತಿದೆ. ಈ ಪ್ರದೇಶವು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ನಾಲ್ಕು ಪ್ರತಿನಿಧಿಗಳನ್ನು ಹೊಂದಿತ್ತು. ಪ್ರಸ್ತುತ, ಲಡಾಖ್ ಒಂದೇ ಲೋಕಸಭಾ ಕ್ಷೇತ್ರವನ್ನು ಹೊಂದಿದೆ.

ಭರವಸೆಗಳನ್ನು ಈಡೇರಿಸುವಂತೆ ಮೋದಿ, ಅಮಿತ್ ಶಾಗೆ ಒತ್ತಾಯ

ಸೋನಮ್ ವಾಂಗ್‌ಚುಕ್ ಅವರ ‘ಆಮರಣಾಂತ ಉಪವಾಸ’ ಪ್ರತಿಭಟನೆ ಇಂದು (ಮಂಗಳವಾರ) 21 ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಲ್ಲಿ ಭಗವಾನ್ ರಾಮ ಮತ್ತು ಹಿಂದೂ ವೈಷ್ಣವರ ಆದರ್ಶಗಳನ್ನು ಅನುಸರಿಸುವಂತೆ ಒತ್ತಾಯಿಸಿದ್ದಾರೆ.


ಸೋಮವಾರ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ವಾಂಗ್‌ಚುಕ್, “ಇಂದು, ಲಡಾಖ್‌ನ ಹವಾಮಾನ ಬಿಕ್ಕಟ್ಟಿನ ವಿರುದ್ಧ ಪ್ರತಿಭಟನೆಯಲ್ಲಿ ಸುಮಾರು 2500 ಜನರು ನನ್ನೊಂದಿಗೆ ಸೇರಿಕೊಂಡರು. ಇಲ್ಲಿ ಜನಸಂಖ್ಯೆಯು 300,000 ಆಗಿದ್ದರೂ ಸಹ ಈ 20 ದಿನಗಳಲ್ಲಿ, ಲೇಹ್ ಮತ್ತು ಕಾರ್ಗಿಲ್‌ನಲ್ಲಿ, ಸುಮಾರು 60,000 ಜನರು ಪ್ರತಿಭಟನೆಯಲ್ಲಿ ಕುಳಿತಿದ್ದರು.

“ನಾನು ಎರಡು ಸಂದೇಶಗಳನ್ನು ಕಳುಹಿಸಲು ಬಯಸುತ್ತೇನೆ – ಒಂದು ಪ್ರಧಾನಿ ಮೋದಿಗೆ ಮತ್ತು ಎರಡನೆಯದು ಗೃಹ ಸಚಿವ ಅಮಿತ್ ಶಾ ಅವರಿಗೆ. ಸಂದರ್ಶನವೊಂದರಲ್ಲಿ ಅಮಿತ್ ಶಾ ಅವರು ಜೈನರಲ್ಲ, ಅವರು ಹಿಂದೂ ವೈಷ್ಣವ ಎಂದು ಹೇಳಿರುವುದನ್ನು ನಾನು ನೋಡಿದೆ. ಹಿಂದೂ ವೈಷ್ಣವರ ಬಗ್ಗೆ ವಿಭಿನ್ನ ವ್ಯಾಖ್ಯಾನಗಳು ಇರಬಹುದು, ಆದರೆ ನಾನು ಹೆಚ್ಚು ಇಷ್ಟಪಟ್ಟದ್ದು ಇದು. ‘ವೈಷ್ಣವನಾದವನು, ಇತರರ ನೋವನ್ನು ತಿಳಿದಿರುತ್ತಾನೆ, ಇತರರಿಗೆ ಒಳ್ಳೆಯದನ್ನು ಮಾಡುತ್ತಾನೆ, ತನ್ನ ಮನಸ್ಸಿನಲ್ಲಿ ಗತ್ತು ಪ್ರವೇಶಿಸಲು ಬಿಡುವುದಿಲ್ಲ,’

ಇದನ್ನೂ ಓದಿ: ಲಡಾಖ್​ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಕಾಶ್ ರಾಜ್; ವಾಂಗ್​ಚುಕ್ ಸತ್ಯಾಗ್ರಹಕ್ಕೆ ಬೆಂಬಲ

“ಎರಡನೆಯದಾಗಿ ರಾಮನ ಭಕ್ತ ಮೋದಿಜಿ ರಾಮಮಂದಿರ ಕಟ್ಟಿದರು, ಆದರೆ ರಾಮನ ಮೌಲ್ಯಗಳೇನು? ರಾಮಚರಿತಮಾನಸದಲ್ಲಿ, ರಘುಕುಲ ರೀತ್ ಸದಾ ಚಲಿ ಆಯೇ, ಪ್ರಾಣ ಜಾಯೇ ಪರ ವಚನ ನಾ ಜಾಯೇ. ಭಗವಾನ್ ರಾಮನು ತನ್ನ ವಾಗ್ದಾನವನ್ನು ಮುರಿಯಲು ಬಯಸದ ಕಾರಣ 14 ವರ್ಷಗಳ ಕಾಲ ವನವಾಸದಲ್ಲಿದ್ದನು. ಈ ಆದರ್ಶಗಳನ್ನು ಅನುಸರಿಸಲು ಮತ್ತು ಲಡಾಖ್‌ನ ಜನರಿಗೆ ಅವರು ನೀಡಿದ ಭರವಸೆಯನ್ನು ಈಡೇರಿಸಲು ನಾನು ಮೋದಿ ಜಿ ಅವರಲ್ಲಿ ವಿನಂತಿಸುತ್ತೇನೆ. ಭರವಸೆಗಳ ಆಧಾರದ ಮೇಲೆ ಅವರು ಕಳೆದ ಎರಡು ಚುನಾವಣೆಗಳಲ್ಲಿ ಬಹುಮತವನ್ನು ಗಳಿಸಿದರು. ಆ ಭರವಸೆಗಳನ್ನು ಈಡೇರಿಸಲು ಮತ್ತು ರಾಮನ ನಿಜವಾದ ಭಕ್ತ ಎಂದು ಸಾಬೀತುಪಡಿಸಲು ನಾನು ಅವರನ್ನು ವಿನಂತಿಸುತ್ತೇನೆ. ಇಲ್ಲದಿದ್ದರೆ ಯಾರೂ ಈ ರಾಜಕೀಯ ನಾಯಕರನ್ನು, ಅವರ ಭರವಸೆಗಳನ್ನು ನಂಬುವುದಿಲ್ಲ. ಅಮಿತ್ ಶಾ ಮತ್ತು ಮೋದಿ ಅವರ ಆದರ್ಶಗಳನ್ನು ಮುರಿಯುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ