ನಿರ್ದಿಷ್ಟ ಧರ್ಮದ ವಿರುದ್ಧ ಅಸಾದುದ್ದೀನ್ ಓವೈಸಿ ಹೇಳಿಕೆಯಿಂದ ನೋವಾಗಿದೆ: ಗುಂಡಿನ ದಾಳಿ ಪ್ರಕರಣದ ಆರೋಪಿ
Asaduddin Owaisi ಪೊಲೀಸರ ಪ್ರಕಾರ ಓವೈಸಿ ಮತ್ತು ಅವರ ಸಹೋದರ ಮತ್ತು ಶಾಸಕ ಅಕ್ಬರುದ್ದೀನ್ ಓವೈಸಿ ಮಾಡಿದ ಹೇಳಿಕೆಗಳಿಂದ ತಾವು ಅಸಮಾಧಾನಗೊಂಡಿದ್ದೇವೆ ಎಂದು ಇಬ್ಬರು ವಿಚಾರಣೆಯ ಸಮಯದಲ್ಲಿ ಹೇಳಿದ್ದಾರೆ.
ದೆಹಲಿ: ಉತ್ತರ ಪ್ರದೇಶದ (Uttar Pradesh) ಮೀರತ್‌ನಲ್ಲಿ ಚುನಾವಣಾ ಪ್ರಚಾರ ಮುಗಿಸಿ ಗುರುವಾರ ದೆಹಲಿಗೆ ವಾಪಸಾಗುತ್ತಿದ್ದ ವೇಳೆ ಸಂಸದ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಅವರ ಬೆಂಗಾವಲು ಪಡೆ ಮೇಲೆ ಗುಂಡಿನ ದಾಳಿ ನಡೆಸಿದ ಇಬ್ಬರನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ ಒವೈಸಿಯ ಬೆಂಗಾವಲು ಪಡೆ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಯೊಬ್ಬ “ಒಂದು ನಿರ್ದಿಷ್ಟ ಧರ್ಮದ ವಿರುದ್ಧ ಟೀಕೆಗಳಿಂದ” ತಮಗೆ ನೋವಾಗಿದೆ ಎಂದು ವಿಚಾರಣೆಯ ಸಮಯದಲ್ಲಿ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ಓವೈಸಿ ಕಳೆದ ರಾತ್ರಿ ತಮ್ಮ ಬಿಳಿ ಎಸ್ ಯುವಿನನಲ್ಲಿ ಎರಡು ಬುಲೆಟ್ ರಂಧ್ರಗಳನ್ನು ತೋರಿಸುವ ದೃಶ್ಯಗಳನ್ನು ಟ್ವೀಟ್ ಮಾಡಿದ್ದಾರೆ. ಮೂರನೇ ಬುಲೆಟ್ ಟೈರ್‌ಗೆ ತಗುಲಿದೆ ಎನ್ನಲಾಗಿದೆ. ನನಗೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಿದ ಸಂಸದರು ಮತ್ತು ಇನ್ನೊಂದು ಕಾರಿನಲ್ಲಿ ಅಲ್ಲಿಂದ ಹೊರಟು ಹೋಗಿದ್ದರು. ಆರೋಪಿಗಳಲ್ಲಿ ಒಬ್ಬನಾದ ಸಚಿನ್ ನೋಯ್ಡಾ ನಿವಾಸಿಯಾಗಿದ್ದು, ಈತನ ವಿರುದ್ಧ ಈ ಹಿಂದೆ ಕೊಲೆ ಯತ್ನ ಪ್ರಕರಣವಿದೆ. ತಾನು ಕಾನೂನು ಪದವಿ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದು, ಪೊಲೀಸರು ಅದನ್ನು ಪರಿಶೀಲಿಸುತ್ತಿದ್ದಾರೆ. ತನ್ನ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ, ಸಚಿನ್ ತಾನು ಹಿಂದೂ ಬಲಪಂಥೀಯ ಸಂಘಟನೆಯ ಸದಸ್ಯ ಎಂದು ಹೇಳಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಇನ್ನೊಬ್ಬ ಆರೋಪಿ ಸಹಾರನ್‌ಪುರದ ರೈತ ಶುಭಂ, ಯಾವುದೇ ಅಪರಾಧ ದಾಖಲೆ ಹೊಂದಿಲ್ಲ. ಪೊಲೀಸರ ಪ್ರಕಾರ ಓವೈಸಿ ಮತ್ತು ಅವರ ಸಹೋದರ ಮತ್ತು ಶಾಸಕ ಅಕ್ಬರುದ್ದೀನ್ ಓವೈಸಿ ಮಾಡಿದ ಹೇಳಿಕೆಗಳಿಂದ ತಾವು ಅಸಮಾಧಾನಗೊಂಡಿದ್ದೇವೆ ಎಂದು ಇಬ್ಬರು ವಿಚಾರಣೆಯ ಸಮಯದಲ್ಲಿ ಹೇಳಿದ್ದಾರೆ. “ನಿರ್ದಿಷ್ಟ ಧರ್ಮದ ವಿರುದ್ಧ (ಅಸಾದುದ್ದೀನ್ ಓವೈಸಿ) ಹೇಳಿಕೆಯಿಂದ ತಮಗೆ ನೋವಾಗಿದೆ ಎಂದು ಆರೋಪಿಗಳು ಹೇಳಿದ್ದಾರೆ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು” ಎಂದು ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ.
कुछ देर पहले छिजारसी टोल गेट पर मेरी गाड़ी पर गोलियाँ चलाई गयी। 4 राउंड फ़ायर हुए। 3-4 लोग थे, सब के सब भाग गए और हथियार वहीं छोड़ गए। मेरी गाड़ी पंक्चर हो गयी, लेकिन मैं दूसरी गाड़ी में बैठ कर वहाँ से निकल गया। हम सब महफ़ूज़ हैं। अलहमदु’लिलाह। pic.twitter.com/Q55qJbYRih
— Asaduddin Owaisi (@asadowaisi) February 3, 2022
ಇವರಿಂದ ಇತ್ತೀಚೆಗೆ ಖರೀದಿಸಿದ್ದ ಕಂಟ್ರಿಮೇಡ್ ಪಿಸ್ತೂಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೀಗ ಬಂದೂಕು ಖರೀದಿಸಿದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಯನ್ನು ಈಗ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆರೋಪಿಗಳಿಬ್ಬರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಉತ್ತರಪ್ರದೇಶದ ಹಾಪುರ್ ಎಸ್‌ಪಿ ದೀಪಕ್ ಭುಕರ್ ಹೇಳಿದ್ದಾರೆ.
ಕಳೆದ ರಾತ್ರಿಯ ದಾಳಿ ನಂತರ ಸರ್ಕಾರವು ಓವೈಸಿ ಅವರಿಗೆ ಇಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಯಿಂದ Z ವರ್ಗದ ಭದ್ರತೆಯನ್ನು ಒದಗಿಸಲಾಗಿದೆ.
ಇದನ್ನೂ ಓದಿ: UP Election 2022: ಗೋರಖ್‌ಪುರದಿಂದ ನಾಮಪತ್ರ ಸಲ್ಲಿಸಿದ ಯೋಗಿ ಆದಿತ್ಯನಾಥ