ದೆಹಲಿ: ಭಾರತದಲ್ಲಿ ನಿನ್ನೆಯಿಂದ (ಜೂನ್ 21) ಕೊರೊನಾ ಲಸಿಕೆ ವಿತರಣೆ ಮತ್ತಷ್ಟು ಚುರುಕುಗೊಂಡಿದೆ. ನಿನ್ನೆಯೊಂದೇ ದಿನ ದೇಶದಲ್ಲಿ 84.07ಡೋಸ್ ಕೊರೊನಾ ಲಸಿಕೆ ವಿತರಿಸಲಾಗಿದ್ದು, ಹೊಸ ದಾಖಲೆ ನಿರ್ಮಾಣವಾಗಿದೆ. ದೇಶದ ಯುವ ಸಮುದಾಯಕ್ಕೂ ರಕ್ಷಣೆ ನೀಡಬೇಕೆಂಬ ದೃಷ್ಟಿಯಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಲಭ್ಯವಾಗುವಂತೆ ನೋಡಿಕೊಳ್ಳುವುದಾಗಿ ಹೇಳಿರುವ ಭಾರತ ಸರ್ಕಾರ ಈ ವಿಚಾರದಲ್ಲಿ ದಾಪುಗಾಲಿಡಲಾರಂಭಿಸಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕೊರೊನಾ ಲಸಿಕೆ ವಿತರಣೆ ಆರಂಭವಾದ ನಂತರ ಅಂದರೆ 2021ರ ಜನವರಿ 16ರಿಂದ ಇಲ್ಲಿಯ ತನಕ ದಿನವೊಂದರಲ್ಲಿ ನೀಡಲಾದ ಲಸಿಕೆಯ ಪ್ರಮಾಣ ನಿನ್ನೆ ಗರಿಷ್ಠ ಮಟ್ಟವನ್ನು ತಲುಪಿದೆ.
ಗಮನಾರ್ಹ ವಿಚಾರವೆಂದರೆ ಲಸಿಕೆಗೆ ಪ್ರಾಮುಖ್ಯತೆ ನೀಡುತ್ತಿರುವ ಈ ಹಂತದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರವೂ ಇಳಿಕೆಯಾಗುತ್ತಿದ್ದು, ಬರೋಬ್ಬರಿ 88 ದಿನಗಳ ನಂತರ ನಿನ್ನೆ ದೇಶದಲ್ಲಿ ಕನಿಷ್ಠ ಪ್ರಕರಣಗಳು ಹೊಸದಾಗಿ ದಾಖಲಾಗಿವೆ. ನಿನ್ನೆ ಒಟ್ಟು 53,256 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಈವರೆಗೆ ದಾಖಲಾದ ಒಟ್ಟಾರೆ ಪ್ರಕರಣಗಳ ಸಂಖ್ಯೆ 2,99,35,221. ಅಲ್ಲದೇ, ಸುಮಾರು 65 ದಿನಗಳ ನಂತರ ಸೋಂಕಿತರ ಮರಣ ಪ್ರಮಾಣವೂ ಕಡಿಮೆಯಾಗಿದ್ದು ನಿನ್ನೆ 1,422 ಕೊರೊನಾ ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ಆ ಮೂಲಕ ಇದುವರೆಗೆ ಕೊರೊನಾದಿಂದ ಪ್ರಾಣ ತ್ಯಜಿಸಿದವರ ಸಂಖ್ಯೆ 3,88,135ಕ್ಕೆ ತಲುಪಿದೆ.
Today’s record-breaking vaccination numbers are gladdening. The vaccine remains our strongest weapon to fight COVID-19. Congratulations to those who got vaccinated and kudos to all the front-line warriors working hard to ensure so many citizens got the vaccine.
Well done India!
— Narendra Modi (@narendramodi) June 21, 2021
ಪ್ರಸ್ತುತ ಎಲ್ಲರಿಗೂ ಉಚಿತ ಕೊರೊನಾ ಲಸಿಕೆ ಎಂದು ಅಭಿಯಾನ ಆರಂಭಿಸಿರುವ ಭಾರತ ಸರ್ಕಾರ, ಸಂಭವನೀಯ ಮೂರನೇ ಅಲೆಯನ್ನು ಲಸಿಕೆಯ ಮೂಲಕವೇ ಕಟ್ಟಿಹಾಕಲು ಮಹತ್ವದ ಹೆಜ್ಜೆ ಇರಿಸಿದೆ. ಈ ಅಭಿಯಾನದ ಮುಖ್ಯ ಫಲಾನುಭವಿಗಳು ಬಡವರು, ಮಧ್ಯಮ ವರ್ಗದವರು ಹಾಗೂ ಯುವ ಸಮುದಾಯ ಆಗಿರಲಿದ್ದು ಕೊರೊನಾ ವೈರಾಣುವನ್ನು ಮಣಿಸಲು ನಾವೆಲ್ಲರೂ ಲಸಿಕೆ ಪಡೆಯುತ್ತೇವೆ ಎಂಬ ಪ್ರತಿಜ್ಞೆ ಮಾಡಬೇಕು ಎಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ನಿನ್ನೆಯ ದಾಖಲೆ ಪ್ರಮಾಣದ ಕೊರೊನಾ ಲಸಿಕೆ ವಿತರಣೆಗೆ ಮೆಚ್ಚುಗೆ ಸೂಚಿಸಿರುವ ಪ್ರಧಾನ ಮಂತ್ರಿ, ಕೊರೊನಾ ವಿರುದ್ಧದ ಹೋರಾಟದಲ್ಲಿ ಲಸಿಕೆ ಪರಿಣಾಮಕಾರಿ ಅಸ್ತ್ರವಾಗಿದೆ. ಲಸಿಕೆ ಪಡೆದ ಎಲ್ಲರಿಗೂ ಅಭಿನಂದನೆಗಳು. ಜತೆಗೆ, ಸಾರ್ವಜನಿಕರಿಗೆ ಅಧಿಕ ಪ್ರಮಾಣದಲ್ಲಿ ಲಸಿಕೆ ತಲುಪಿಸಲು ಶ್ರಮಿಸುತ್ತಿರುವ ಮುಂಚೂಣಿ ಸಾಲಿನಲ್ಲಿನ ಕಾರ್ಯಕರ್ತರೆಲ್ಲರಿಗೂ ವಂದನೆಗಳು ಎಂದು ಟ್ವೀಟ್ ಮಾಡುವ ಮೂಲಕ ಶ್ಲಾಘಿಸಿದ್ದಾರೆ.
? World’s #LargestVaccineDrive breaking all records!
? Over 8 million #COVID19Vaccine doses administered till 8 PM on Day 1 of implementation of revised guidelines!
Vaccines are our strongest weapon against #COVID19, strengthen this fight, get #Vaccinated! #IndiaFightsCorona pic.twitter.com/XxZUYXo2gW
— MyGovIndia (@mygovindia) June 21, 2021
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದಾಖಲೆ ಪ್ರಮಾಣದಲ್ಲಿ ಲಸಿಕೆ ವಿತರಣೆ ಆಗಿದೆ. ಮಧ್ಯಪ್ರದೇಶ, ಕರ್ನಾಟಕ, ಉತ್ತರಪ್ರದೇಶ, ಗುಜರಾತ್ ಹಾಗೂ ಹರಿಯಾಣ ರಾಜ್ಯಗಳಲ್ಲಿ ವಿಶೇಷ ಲಸಿಕಾ ಅಭಿಯಾನ ಆಯೋಜಿಸುವ ಮೂಲಕ ಹೆಚ್ಚು ಪ್ರಮಾಣದ ಲಸಿಕೆ ನೀಡಲಾಗಿದೆ. ಮಧ್ಯಪ್ರದೇಶದಲ್ಲಿ 15,42,632 ಡೋಸ್, ಕರ್ನಾಟಕದಲ್ಲಿ 10,67,734 ಡೋಸ್ ಹಾಗೂ ಉತ್ತರಪ್ರದೇಶದಲ್ಲಿ 6,74,546 ಡೋಸ್ ಲಸಿಕೆ ನಿನ್ನೆ ವಿತರಿಸಲ್ಪಟ್ಟಿದೆ. ಇದೇ ಸಂದರ್ಭದಲ್ಲಿ ಪಂಜಾಬ್, ಜಾರ್ಖಂಡ್, ಚತ್ತೀಸ್ಗಡ, ದೆಹಲಿಯಲ್ಲಿ ನಿನ್ನೆ ವಿತರಿಸಲ್ಪಟ್ಟ ಕೊರೊನಾ ಲಸಿಕೆಯ ಪ್ರಮಾಣ 1 ಲಕ್ಷ ಡೋಸ್ ಕೂಡಾ ದಾಟಿಲ್ಲ ಎನ್ನುವುದು ಗಮನಾರ್ಹ.
ಇದನ್ನೂ ಓದಿ:
Explainer: ಡೆಲ್ಟಾ ಪ್ಲಸ್ ಕೊರೊನಾ ವೈರಸ್ ಎಂದರೇನು? ರೂಪಾಂತರಿ ವೈರಾಣು ಎಷ್ಟು ಅಪಾಯಕಾರಿ, ಇದರಿಂದ ರಕ್ಷಣೆ ಹೇಗೆ?