ದೇಶದ ಮೊದಲ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ(International Arbitration Center)ವನ್ನು ಇಂದು ಹೈದರಾಬಾದ್ನಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮುರ್ತಿ ಎನ್.ವಿ.ರಮಣ (CJI N V Ramana) ಉದ್ಘಾಟಿಸಿದರು. ಈ ವೇಳೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್, ನ್ಯಾಯಮೂರ್ತಿ ಎಲ್.ನಾಗೇಶ್ವರ್ರಾವ್ ಕೂಡ ಇದ್ದರು. ಈ ಅಂತರಾಷ್ಟ್ರೀಯ ಪಂಚಾಯಿತಿ ಮತ್ತು ಮಧ್ಯಸ್ಥಿಕೆ ಕೇಂದ್ರವನ್ನು ನಾನಕ್ ರಾಮ್ ಗುಡಾದ ವಿ.ಕೆ.ಟವರ್ಸ್ನಲ್ಲಿ ನಿರ್ಮಿಸಲಾಗಿದೆ. ಸದ್ಯ ಅಲ್ಲಿ ಒಂದು ತಾತ್ಕಾಲಿಕ ಕಟ್ಟಡದಲ್ಲಿ ಈ ಕೇಂದ್ರ ಸ್ಥಾಪಿಸಲಾಗಿದ್ದು, ಶೀಘ್ರದಲ್ಲೇ ಶಾಶ್ವತ ಕಟ್ಟಡ ನಿರ್ಮಾಣವಾಗಲಿದೆ. ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವನ್ನು ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ಈ ಮಧ್ಯಸ್ಥಿಕೆ ಕೇಂದ್ರಗಳು ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಆಸರೆಯಾಗುತ್ತವೆ. ಅದೆಷ್ಟೋ ವಿವಾದಗಳೆಲ್ಲ ಕೋರ್ಟ್ ಮೆಟ್ಟಿಲೇರುವುದು ತಪ್ಪುತ್ತದೆ ಎಂದು ಹೇಳಿದರು.
ಭಾರತದಲ್ಲಿ ಇಂಥ ರಾಜಿ ಪಂಚಾಯಿತಿ ಕೇಂದ್ರಗಳಿಗೆ ಪುರಾತನಕಾಲದ ಇತಿಹಾಸವಿದೆ. ಈಗೀಗ ಇಂಥ ಕೇಂದ್ರಗಳನ್ನು ಜಗತ್ತಿನ ಹಲವು ದೇಶಗಳಲ್ಲಿ ಸ್ಥಾಪಿಸಲಾಗಿದ್ದು, ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿವೆ ಎಂದು ಹೇಳಿದ ಸಿಜೆಐ ಎನ್.ವಿ.ರಮಣ, ನಾನು ಇಂಥ ಮಧ್ಯಸ್ಥಿಕೆ ಕೇಂದ್ರಗಳಿಗೆ ಬೆಂಬಲ ಘೋಷಿಸುತ್ತೇನೆ. ಅದೆಷ್ಟೋ ವಿಚಾರಗಳೆಲ್ಲ ನ್ಯಾಯಾಲಯದ ಮೆಟ್ಟಿಲು ಹತ್ತುವುದು ತಪ್ಪುತ್ತದೆ. ಹಾಗಾಗಿ ಸಾಮಾನ್ಯ ಜನರೂ ಕೂಡ ಇಂಥ ಮಧ್ಯಸ್ಥಿಕೆ ಕೇಂದ್ರಗಳಿಗೆ ಮೊದಲ ಆದ್ಯತೆ ನೋಡಿ, ಕೊನೇ ಆಯ್ಕೆಯಾಗಿ ಕೋರ್ಟ್ಗಳನ್ನು ಆರಿಸಿಕೊಳ್ಳಬೇಕು ಎಂದು ಹೇಳಿದರು. ಹಾಗೇ, ಜನರು ವಿವಾದ ಪರ್ಯಾಯ ಪರಿಹಾರದಂಥ ಇಂಥ ವಿಧಾನಗಳಿಗೆ ತೆರೆದುಕೊಳ್ಳುವುದರಿಂದ ಇದರ ವ್ಯಾಪ್ತಿಯೂ ವಿಸ್ತಾರವಾಗುತ್ತ ಹೋಗುತ್ತದೆ. ಈಗಾಗಲೇ ಮುಂಬೈ ಮತ್ತು ದೆಹಲಿಯಲ್ಲಿ ಮಧ್ಯಸ್ಥಿಕೆ ಕೇಂದ್ರಗಳು ಇವೆ. ಇದೀಗ ಹೈದರಾಬಾದ್ನಲ್ಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಸ್ಥಾಪನೆಯಾಗಿದ್ದರಿಂದ ವಿದೇಶಿ ಕಕ್ಷಿದಾರರಿಗೂ ತಮ್ಮ ವ್ಯಾಜ್ಯ, ವಿವಾದ ಪರಿಹರಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.
1926ರಲ್ಲಿ ವಿಶ್ವದ ಮೊದಲ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಸ್ಥಾಪಿತವಾಯಿತು. ಆದರೆ ಅಂತಾರಾಷ್ಟ್ರೀಯ ವ್ಯಾಜ್ಯಗಳ ಪರಿಹಾರಕ್ಕಾಗಿ ದುಬೈ, ಸಿಂಗಪೂರ್ಗಳಿಗೆ ಹೋಗಬೇಕಾಗಿತ್ತು. ಇದೀಗ ಹೈದರಾಬಾದ್ಗೂ ಬರಬಹುದಾಗಿದೆ. ಅಂತಾರಾಷ್ಟ್ರೀಯ ಮಧ್ಯಸ್ಥಿಕೆಗಾರರು ಇಲ್ಲಿಗೂ ಬರುತ್ತಾರೆ ಎಂದು ಹೇಳಿದ ಸಿಜೆಐ ಎನ್.ವಿ.ರಮಣ, ಈ ಕೇಂದ್ರಕ್ಕೆ ಸಂಬಂಧಪಟ್ಟ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ನ್ಯಾಯಮೂರ್ತಿ ನಾಗೇಶ್ವರ್ ರಾವ್ಗೆ ತಿಳಿಸಿದರು. ಇದೇ ವೇಳೆ ಪಿ.ವಿ.ನರಸಿಂಹ ರಾವ್ ಅವರು, ಮಧ್ಯಸ್ಥಿಕೆ ಕೇಂದ್ರಗಳಿಗೆ ಎಷ್ಟು ಒತ್ತು ಕೊಡುತ್ತಿದ್ದರು ಎಂಬುದನ್ನು ತಿಳಿಸಿದ ಅವರು, ಆರ್ಬಿಟ್ರೇಷನ್ ಕಾಯ್ದೆಗೆ ಒಂದು ರೂಪುರೇಷೆ ಸಿಕ್ಕಿದ್ದು ಪಿ.ವಿ.ನರಸಿಂಹ ರಾವ್ ಆಡಳಿತದಲ್ಲಿಯೇ ಎಂದು ಹೇಳಿದರು.
ಇದನ್ನೂ ಓದಿ: IPL 2022: ಯಾವ ತಂಡದ ಪರ ಆಡುತ್ತೀರಿ? ಸುಳಿವು ನೀಡಿದ ಅಶ್ವಿನ್