ಹಾರ್ವರ್ಡ್ ವಿಶ್ವವಿದ್ಯಾಲ: ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ(Harvard University) ನಡೆಯಲಿರುವ 20ನೇ ಭಾರತೀಯ ಸಮ್ಮೇಳನಕ್ಕೆ ಇದೇ ಮೊದಲ ಬಾರಿಗೆ ಭಾರತೀಯ ತೃತೀಯ ಲಿಂಗಿ ಸುಶಾಂತ್ ದಿವ್ಗಿಕರ್ (Sushant Divgikar) ರನ್ನು ಆಹ್ವಾನಿಸಲಾಗಿದೆ. ಹಾರ್ವರ್ಡ್ ವಿಶ್ವವಿದ್ಯಾಲದ ವಿದ್ಯಾರ್ಥಿಗಳಿಂದ ಫೆಬ್ರವರಿ 11, 12ರಂದು ಎರಡು ದಿನಗಳ ಕಾಲ ಹಾರ್ವರ್ಡ್ ಕೆನಡಿ ಸ್ಕೂಲ್ ಮತ್ತು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿದೆ. ಹೈಬ್ರಿಡ್/ವರ್ಚುವಲ್ ಪ್ಲಾಟ್’ಫಾರಂ ಮೂಲಕ ಕೆಲವು ಅತಿಥಿಗಳು ಕಾನ್ಫರೆನ್ಸ್’ನಲ್ಲಿ ಪಾಲ್ಗೊಳ್ಳಲಿದ್ದಾರೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್, ಉತ್ತರಾಖಂಡ್ ಮೂಲದ ಐಪಿಎಸ್ ಅಭಿನವ್ ಕುಮಾರ್ ಕೂಡ ಈ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.
ಭಾರತವು 75 ವರ್ಷಗಳ ಸ್ವಾತಂತ್ರ್ಯವನ್ನು ಪೂರ್ಣಗೊಳಿಸಿ ಮುಂದಿನ 25 ವರ್ಷಗಳನ್ನು ಎದುರು ನೋಡುತ್ತಿರುವುದರಿಂದ, ಸಮ್ಮೇಳನದ ವಿಷಯವು ‘ವಿಷನ್ 2047: ಭಾರತದ 100 ವರ್ಷಗಳ ಸ್ವಾತಂತ್ರ್ಯ‘ ಆಗಿದೆ. ಭಾರತವು ತನ್ನ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಹೇಗೆ ಬಿಂಬಿಸುತ್ತದೆ ಎಂಬುದನ್ನು ಅರ್ಥಪೂರ್ಣವಾಗಿ ಚರ್ಚಿಸಲು ನೀತಿ ನಿರೂಪಕರು, ಉದ್ಯಮಿಗಳಿಗೆ, ಕಾರ್ಯಕರ್ತರು ಮತ್ತು ಶೈಕ್ಷಣಿಕ ತಜ್ಞರಿಗೆ ಈ ಸಮ್ಮೇಳನವು ವೇದಿಕೆಯಾಗಲಿದೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ವಸುಂಧರಾ ರಾಜೇ ಸಿಂಧಿಯಾ, ಅಮರ್ತ್ಯ ಸೇನ್, ಸುಗತ ಬೋಸ್, ಜೋಯಾ ಅಖ್ತರ್, ರಾಕೇಶ್ ಮೋಹನ್, ಎಸ್‌ವೈ ಖುರೈಶಿ, ವಿನೋದ್ ರೈ, ಅಜೀಂ ಪ್ರೇಮ್‌ಜಿ, ಶಶಿ ತರೂರ್, ಪಿ.ಚಿದಂಬರಂ. ಹೀಗೆ ಹಲವು ಗಣ್ಯಾತಿ ಗಣ್ಯರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾರತದಲ್ಲಿ ರಾಣಿ ಕೊ–ಹೆ–ನೂರ್ ಎಂದು ಪ್ರಸಿದ್ದವಾಗಿರುವ ತೃತೀಯ ಲಿಂಗಿ 38 ವರ್ಷದ ಸುಶಾಂತ್ ದಿವ್ಗಿಕರ್ ಮೂಲತಃ ಮುಂಬೈಯವರು. ಸುಶಾಂತ್ ಭಾರತೀಯ ರೂಪದರ್ಶಿ, ನಟ, ಗಾಯಕ, ಅಂಕಣಕಾರ, ಮನಶ್ಶಾಸ್ತ್ರಜ್ಞ, ಭಾಷಣಕಾರ, ಡ್ರ್ಯಾಗ್ ಕ್ವೀನ್, ಪೇಜೆಂಟ್ ಡೈರೆಕ್ಟರ್ ಮತ್ತು ವಿಡಿಯೋ ಜಾಕಿ. 2014 ರಲ್ಲಿ ಇವರು ‘ಮಿಸ್ಟರ್ ಗೇ ಇಂಡಿಯಾ’ (Mr. Gay India) ಟೈಟಲ್ ಗೆದ್ದಿದ್ದರು. ಇವರು ‘ಮಿಸ್ಟರ್ ಗೇ ವರ್ಲ್ಡ್’ (Mr. Gay World) 2014 ರ ಸಮಯದಲ್ಲಿ ವಿವಿಧ ವಿಶೇಷ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮೂರು ಉಪ ಪ್ರಶಸ್ತಿಗಳನ್ನು ಗೆದ್ದ ಏಕೈಕ ಪ್ರತಿನಿಧಿ ಸುಶಾಂತ್ ದಿವ್ಗಿಕರ್ ಆಗಿದ್ದಾರೆ.
ಇದನ್ನೂ ಓದಿ: ‘ಯುವ ಸಂಗಮ’ ಪೋರ್ಟಲ್ ಅನಾವರಣಗೊಳಿಸಿದ ಧರ್ಮೇಂದ್ರ ಪ್ರಧಾನ್; ಏನಿದು?
2018 ರಲ್ಲಿ ಡ್ರ್ಯಾಗ್ ಕ್ವೀನ್ ಅವತಾರದ ರಾಣಿ ಕೊ–ಹೆ–ನೂರ್ ಆಗಿ ಸರಿಗಮಪ ಹಿಂದಿ ಮ್ಯೂಸಿಕ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಗೋಲ್ಡನ್ ಬಜರ್ ಗೆದ್ದು, ನೇರವಾಗಿ ಅಗ್ರ 18 ಸ್ಪರ್ಧಿಗಳಲ್ಲಿ ಒಬ್ಬರಾಗಿ ಇತಿಹಾಸ ಸೃಷ್ಟಿಸಿದರು. ದಿವ್ಗಿಕರ್ ಅನೇಕ ದೂರದರ್ಶನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಚಾನೆಲ್, ಏಜೆನ್ಸಿ ಮತ್ತು ನಿರ್ಮಾಣ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದಾರೆ. ಟೈಮ್ಸ್ ಸ್ಕ್ವೇರ್(Times Square)ನಲ್ಲಿ ಮೂರನೇ ಅತಿ ದೊಡ್ಡ ಬಿಲ್‌ಬೋರ್ಡ್‌ನಲ್ಲಿ ಕಾಣಿಸಿಕೊಂಡಿರುವ ಭಾರತದ ಮೊದಲ ಟ್ರಾನ್ಸ್ ಕಲಾವಿದ/ಪ್ರದರ್ಶಕ/ನಟ/ಡ್ರ್ಯಾಗ್ ಕ್ವೀನ್ ಎಂಬ ಹೆಗ್ಗಳಿಕೆ ಸುಶಾಂತ್ ದಿವ್ಗಿಕರ್ ರದ್ದು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು: https://tv9kannada.com/national
Published On - 3:53 pm, Tue, 7 February 23