ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಸಿಜೆಐ ಸೇರಿದಂತೆ ಸುಪ್ರೀಂ ನ್ಯಾಯಾಧೀಶರಿಗೆ ಆಹ್ವಾನ

ಸಿಜೆಐ ಚಂದ್ರಚೂಡ್, ಮಾಜಿ ಸಿಜೆಐಗಳಾದ ರಂಜನ್ ಗೊಗೊಯ್ ಮತ್ತು ಎಸ್ ಎ ಬೊಬ್ಡೆ ಮತ್ತು ಮಾಜಿ ನ್ಯಾಯಾಧೀಶರಾದ ಅಶೋಕ್ ಭೂಷಣ್ ಮತ್ತು ಎಸ್ ಅಬ್ದುಲ್ ನಜೀರ್ ಅವರು ನವೆಂಬರ್ 9, 2019 ರಂದು ಐತಿಹಾಸಿಕ ತೀರ್ಪು ನೀಡಿದ ಪೀಠದ ಭಾಗವಾಗಿದ್ದರು. ಅವರೆಲ್ಲರಿಗೂ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ.

ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಸಿಜೆಐ ಸೇರಿದಂತೆ ಸುಪ್ರೀಂ ನ್ಯಾಯಾಧೀಶರಿಗೆ ಆಹ್ವಾನ
ಸಿಜೆಐ ಡಿ ವೈ ಚಂದ್ರಚೂಡ್

Updated on: Jan 20, 2024 | 4:09 PM

ದೆಹಲಿ ಜನವರಿ 20: ಅಯೋಧ್ಯೆಯ (Ayodhya) ವಿವಾದಿತ ಸ್ಥಳದಲ್ಲಿ ರಾಮಮಂದಿರ (Ram mandir)ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟ ಸಂವಿಧಾನ ಪೀಠದ ಭಾಗವಾಗಿದ್ದ ಈಗಿನ ಸಿಜೆಐ ಡಿ ವೈ ಚಂದ್ರಚೂಡ್ (CJI D Y Chandrachud) ಸೇರಿದಂತೆ ಐವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಜನವರಿ 22 ರಂದು ನಡೆಯುವ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಸಿಜೆಐ ಚಂದ್ರಚೂಡ್, ಮಾಜಿ ಸಿಜೆಐಗಳಾದ ರಂಜನ್ ಗೊಗೊಯ್ ಮತ್ತು ಎಸ್ ಎ ಬೊಬ್ಡೆ ಮತ್ತು ಮಾಜಿ ನ್ಯಾಯಾಧೀಶರಾದ ಅಶೋಕ್ ಭೂಷಣ್ ಮತ್ತು ಎಸ್ ಅಬ್ದುಲ್ ನಜೀರ್ ಅವರು ನವೆಂಬರ್ 9, 2019 ರಂದು ಐತಿಹಾಸಿಕ ತೀರ್ಪು ನೀಡಿದ ಪೀಠದ ಭಾಗವಾಗಿದ್ದರು.

ಸರ್ವಾನುಮತದ ಮತ್ತು ಅನಾಮಧೇಯ ತೀರ್ಪು ಅಯೋಧ್ಯೆಯಲ್ಲಿ ವಿವಾದಿತ ಸ್ಥಳದಲ್ಲಿ ಸರ್ಕಾರಿ ಟ್ರಸ್ಟ್‌ನಿಂದ ರಾಮಮಂದಿರ ನಿರ್ಮಾಣವನ್ನು ಬೆಂಬಲಿಸಿದೆ. ಅದೇ ವೇಳೆ ಅಯೋಧ್ಯೆಯಲ್ಲಿ ಮಸೀದಿಗಾಗಿ ಪರ್ಯಾಯ ಐದು ಎಕರೆ ಜಾಗವನ್ನು ಕಂಡುಹಿಡಿಯಬೇಕು ಎಂದು ಹೇಳಿತ್ತು.

ಉತ್ತರ ಪ್ರದೇಶ ಸರ್ಕಾರದ ಆಹ್ವಾನಿತರ ಪಟ್ಟಿಯಲ್ಲಿ ಮಾಜಿ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಾಧೀಶರು ಮತ್ತು ಉನ್ನತ ವಕೀಲರು ಸೇರಿದಂತೆ 50 ಕ್ಕೂ ಹೆಚ್ಚು ನ್ಯಾಯಶಾಸ್ತ್ರಜ್ಞರು ಮತ್ತು ‘ರಾಮ್ ಲಲ್ಲಾ’ ಪರ ವಕೀಲ ಕೆ ಪರಾಸರನ್ ಸೇರಿದ್ದಾರೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಮಾಜಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಕೂಡ ಆಹ್ವಾನಿತರಲ್ಲಿ ಸೇರಿದ್ದಾರೆ.

ದೇವಾಲಯದ ಟ್ರಸ್ಟ್ ಪ್ರಕಾರ, ರಾಜಕಾರಣಿಗಳು, ಸೆಲೆಬ್ರಿಟಿಗಳು, ಕೈಗಾರಿಕೋದ್ಯಮಿಗಳು, ಸಂತರು ಸೇರಿದಂತೆ 7,000 ಕ್ಕೂ ಹೆಚ್ಚು ಜನರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿಶೇಷ ಕಾರ್ಯದರ್ಶಿ ಪ್ರೋಟೋಕಾಲ್ ಮೂಲಕ ಆಹ್ವಾನವನ್ನು ಕಳುಹಿಸಲಾಗಿದೆ.

ಜನವರಿ 22 ರಂದು ಅಯೋಧ್ಯೆಯಲ್ಲಿ ಇನ್ನೂ ನಿರ್ಮಾಣ ಹಂತದಲ್ಲಿರುವ ಮಂದಿರದಲ್ಲಿ ರಾಮ ಲಲ್ಲಾನ ವಿಗ್ರಹದ ‘ಪ್ರಾಣ ಪ್ರತಿಷ್ಠೆ’ಯೊಂದಿಗೆ ರಾಮಮಂದಿರ ಉದ್ಘಾಟನಾ ಸಮಾರಂಭ ನಡೆಯಲಿದೆ.

ಇದನ್ನೂ ಓದಿ:ರಾಮಮಂದಿರ ಉದ್ಘಾಟನೆ: ಸೋಮವಾರ ರಜೆ ಘೋಷಿಸುವ ಬಗ್ಗೆ ಸಿದ್ದರಾಮಯ್ಯ ಸರ್ಕಾರ ಇನ್ನೂ ಯೋಚನೆ ಮಾಡಿಲ್ಲ!

ಅಯೋಧ್ಯೆ ರಾಮಮಂದಿರ ಹೇಗಿದೆ?

ಅಯೋಧ್ಯೆಯ  ರಾಮ ಮಂದಿರದ  ಉದ್ಘಾಟನೆಗ ಇನ್ನೆರಡು ದಿನಗಳು ಬಾಕಿ ಉಳಿದಿದ್ದು, ಭಗವಾನ್ ರಾಮಲಲ್ಲಾ ಅವರ ಭವ್ಯವಾದ ದೇಗುವ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಸಜ್ಜಾಗುತ್ತಿದೆ. ಡಿಡಿ ನ್ಯೂಸ್‌ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಭವ್ಯವಾದ ದೇವಾಲಯದ ಒಳಗಿನ ನೋಟವನ್ನು ಕಾಣಬಹುದು, ಅದರ ಕಂಬಗಳು ಮತ್ತು ಕಾಲಮ್‌ಗಳನ್ನು ಹೂವಿನ ಬೊಕೆಗಳಿಂದ ಅಲಂಕರಿಸಲಾಗಿರುವುದರಿಂದ ಭವ್ಯವಾದ ಅಮೃತಶಿಲೆಯ ರಚನೆ ಬೆಳಕಿನಿಂದಾಗಿ ಹೊಳೆಯುತ್ತಿರುವುದನ್ನು ವಿಡಿಯೊ ತೋರಿಸುತ್ತದೆ. ದೇವಾಲಯದ ಒಳಗೆ, ಏಣಿ ಮೇಲೆ ನಿಂತು ಕೆಲಸಗಾರರು ಸೀಲಿಂಗ್‌ನಿಂದ ಬಹುವರ್ಣದ ಹೂವಿನ ಹಾರಗಳನ್ನು ನೇತುಹಾಕುತ್ತಿರುವುದನ್ನು ಕಾಣಬಹುದು.

ಭವ್ಯವಾದ ರಾಮ ಮಂದಿರದ ಒಳಗೆ ವಿಶೇಷವಾದ ಮೊದಲ ನೋಟ ! ಕರಕುಶಲತೆಯು ವಿಸ್ಮಯಕಾರಿಯಾಗಿದೆ, ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ” ಎಂದು ಡಿಡಿ ನ್ಯೂಸ್ ಈ ವಿಡಿಯೊಗೆ ಶೀರ್ಷಿಕೆ ನೀಡಿದೆ. ಜನವರಿ 22 ರಂದು ಮಧ್ಯಾಹ್ನ 12.30 ಕ್ಕೆ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವು ಪ್ರಾರಂಭವಾಗಲಿದೆ. ಪ್ರಾಣ ಪ್ರತಿಷ್ಠೆಗೆ ಪೂರ್ವಭಾವಿಯಾಗಿ ಒಂದು ವಾರದಿಂದ ಧಾರ್ಮಿಕ ವಿಧಿ ವಿಧಾನಗಳು ನಡೆದು ಬರುತ್ತಿವೆ. ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದ ಅರ್ಚಕರ ತಂಡ ಸಮಾರಂಭದ ಪ್ರಮುಖ ವಿಧಿವಿಧಾನಗಳನ್ನು ನೆರವೇರಿಸಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ