ಮಳೆ ಇರಲಿ, ಪ್ರವಾಹವೇ ಬರಲಿ ಪರೀಕ್ಷೆ ಬರೀತೀವಿ, ಪರೀಕ್ಷಾ ಕೇಂದ್ರಕ್ಕೆ ಹೆಲಿಕಾಪ್ಟರ್​ ಬಾಡಿಗೆ ಪಡೆದ ಬಿ.ಇಡಿ ವಿದ್ಯಾರ್ಥಿಗಳು

ಸಾಮಾನ್ಯವಾಗಿ ಒಂದು ಕಾರಣ ಸಿಕ್ಕರೆ ಸಾಕು ಪರೀಕ್ಷೆ ಬರೆಯುವುದನ್ನು ತಪ್ಪಿಸಿ, ಮುಂದಿನ ವರ್ಷ ಓದಿದ್ರಾಯ್ತು ಎಂದುಕೊಳ್ಳುವ ವಿದ್ಯಾರ್ಥಿಗಳು ಒಂದು ಕಡೆಯಾದರೆ, ಮಳೆ ಇರಲಿ, ಪ್ರವಾಹವೇ ಬರಲಿ ಪರೀಕ್ಷೆ ಬರೆಯುವುದು ಮಾತ್ರ ಬಿಡುವುದಿಲ್ಲ ಎಂದು ಪಣ ತೊಟ್ಟಿರುವ ಈ ವಿದ್ಯಾರ್ಥಿಗಳು ಇನ್ನೊಂದು ಕಡೆ. ಉತ್ತರಾಖಂಡದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ರಸ್ತೆಗಳೆಲ್ಲಾ ಮುಚ್ಚಿದ್ದವು. ಅಲ್ಲಿಯೇ ಬಿ.ಎಡ್ ಪರೀಕ್ಷೆ ಬರೆಯಬೇಕಿದ್ದ ರಾಜಸ್ಥಾನದ ವಿದ್ಯಾರ್ಥಿಗಳು ಹೆಲಿಕಾಪ್ಟರ್ ಬಾಡಿಗೆ ಪಡೆದು ಪರೀಕ್ಷೆ ಕೇಂದ್ರಕ್ಕೆ ತಲುಪಿರುವ ಘಟನೆ ನಡೆದಿದೆ.

ಮಳೆ ಇರಲಿ, ಪ್ರವಾಹವೇ ಬರಲಿ ಪರೀಕ್ಷೆ ಬರೀತೀವಿ, ಪರೀಕ್ಷಾ ಕೇಂದ್ರಕ್ಕೆ ಹೆಲಿಕಾಪ್ಟರ್​ ಬಾಡಿಗೆ ಪಡೆದ ಬಿ.ಇಡಿ ವಿದ್ಯಾರ್ಥಿಗಳು
ವಿದ್ಯಾರ್ಥಿಗಳು

Updated on: Sep 07, 2025 | 8:30 AM

ಪಿಥೋರ್​​ಗಢ, ಸೆಪ್ಟೆಂಬರ್ 07: ಮಳೆ, ಪ್ರವಾಹ, ಭೂಕುಸಿತ ಏನೇ ಬರಲಿ ಕಾರಣವಿಟ್ಟುಕೊಂಡು ವರ್ಷಪೂರ್ತಿ ಓದಿದ್ದನ್ನು ನೀರಿನಲ್ಲಿ ಹೋಮ ಮಾಡಲು ವಿದ್ಯಾರ್ಥಿಗಳಿಗೆ ಇಷ್ಟವಿರಲಿಲ್ಲ. ಕಳೆದ ಒಂದು ತಿಂಗಳಿನಿಂದ ದೇಶದೆಲ್ಲೆಡೆ ಪ್ರವಾಹದಂಥಾ ಮಳೆಯಾಗುತ್ತಿದೆ. ಅಲ್ಲಲ್ಲಿ ಭೂಕುಸಿತ, ರಸ್ತೆಗಳು ಬಂದ್ ಆಗಿವೆ. ಹಾಗೆಯೇ ಪಿಥೋರ್ಗಢದ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಬಿ.ಇಡಿ ಪರೀಕ್ಷೆ(Exam) ಬರೆಯಬೇಕಿತ್ತು. ಅದಕ್ಕೆ ಎಲ್ಲಾ ತಯಾರಿಯೂ ನಡೆದಿತ್ತು.

ಆದರೆ ಮಳೆಯಿಂದಾಗಿ ಉತ್ತರಾಖಂಡದಲ್ಲಿ ಎಲ್ಲಾ ರಸ್ತೆಗಳು ಬಂದ್ ಆಗಿದ್ದವು. ಹಾಗಾದರೆ ಪರೀಕ್ಷಾ ಕೇಂದ್ರಕ್ಕೆ ಹೋಗುವುದಾದರೂ ಹೇಗೆ ಎಂದು ಆಲೋಚಿಸಿದ ರಾಜಸ್ಥಾನದ ನಾಲ್ವರು ವಿದ್ಯಾರ್ಥಿಗಳು, ಹೆಲಿಕಾಪ್ಟರ್​​ನ್ನು ಬಾಡಿಗೆ ಪಡೆದು ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಬರೆದ ನಂತರ, ನಾಲ್ವರೂ ಹೆಲಿಕಾಪ್ಟರ್ ಮೂಲಕ ಹಿಂತಿರುಗಿದ್ದಾರೆ. ಆದರೆ ಈ ಪರೀಕ್ಷೆಗೆ ಬರಲು ಮತ್ತು ಹೋಗಲು ಅವರು 40 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡಬೇಕಾಯಿತು. ಹಣ ಖರ್ಚು ಮಾಡಲಾಗಿತ್ತು, ಆದರೆ ಒಂದು ವರ್ಷ ವ್ಯರ್ಥವಾಗದಂತೆ ಉಳಿಸಲಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಉತ್ತರಾಖಂಡ ಮುಕ್ತ ವಿಶ್ವವಿದ್ಯಾಲಯದ ಬಿ.ಇಡಿ ಪರೀಕ್ಷೆ ಬುಧವಾರ ನಡೆಯಬೇಕಿತ್ತು. ಇದಕ್ಕಾಗಿ, ರಾಜಸ್ಥಾನದ ಬಲೋತ್ರಾ ನಿವಾಸಿಗಳಾದ ಒಮರಮ್ ಜಾಟ್, ಮಗರಂ ಜಾಟ್, ಪ್ರಕಾಶ್ ಗೋದಾರ ಜಾಟ್ ಮತ್ತು ನರಪತ್ ಕುಮಾರ್ ಪರೀಕ್ಷಾ ಕೇಂದ್ರವಾದ ಮುನ್ಸಾರಿ ಮಹಾವಿದ್ಯಾಲಯಕ್ಕೆ ತಲುಪಬೇಕಾಯಿತು. ಎರಡು ದಿನಗಳ ಹಿಂದೆ ಅವರು ಹಲ್ದ್ವಾನಿ ತಲುಪಿದಾಗ, ಭೂಕುಸಿತದ ನಂತರ ಅನೇಕ ಸ್ಥಳಗಳಲ್ಲಿ ರಸ್ತೆಗಳು ಮುಚ್ಚಲ್ಪಟ್ಟಿವೆ ಎಂಬುದು ಅವರಿಗೆ ಅರಿವಾಗಿತ್ತು.

ಪರೀಕ್ಷೆ ಬರೆಯದಿದ್ದರೆ ಒಂದು ವರ್ಷ ಕಷ್ಟಪಟ್ಟಿದ್ದೆಲ್ಲಾ ವ್ಯರ್ಥವಾಗುತ್ತದೆ ಎಂದು ಚಿಂತಿಸಲಾರಂಭಿಸಿದರು, ಹಲ್ದ್ವಾನಿ-ಮುನ್ಸಾರಿ ಹೆಲಿಕಾಪ್ಟರ್ ಸೇವೆಯನ್ನು ನಿರ್ವಹಿಸುವ ಕಂಪನಿಯನ್ನು ಸಂಪರ್ಕಿಸಿ ತಮ್ಮ ಪರೀಕ್ಷೆಯ ಬಗ್ಗೆ ತಿಳಿಸಿದರು. ಕಂಪನಿಯ ಸಹಕಾರದೊಂದಿಗೆ, ಅವರು ಬುಧವಾರ ಮುನ್ಸಾರಿಗೆ ಬಂದು ಪರೀಕ್ಷೆಗೆ ಹಾಜರಾಗಿರುವುದಾಗಿ ಒಮರಮ್ ಜಾಟ್ ಹೇಳಿದರು. ಗುರುವಾರ, ನಾಲ್ವರೂ ಹೆಲಿಕಾಪ್ಟರ್ ಮೂಲಕ ಹಲ್ದ್ವಾನಿಗೆ ಮರಳಿದರು.

ಮತ್ತಷ್ಟು ಓದಿ:  SBI PO Main Exam 2025: ಎಸ್‌ಬಿಐ ಪಿಒ ಮುಖ್ಯ ಪರೀಕ್ಷೆಯ ದಿನಾಂಕ ಪ್ರಕಟ, ಪರೀಕ್ಷಾ ಮಾದರಿಯನ್ನು ಪರಿಶೀಲಿಸಿ

ಹೆಲಿಕಾಪ್ಟರ್ ಸೇವೆಯನ್ನು ಒದಗಿಸಿದ್ದಕ್ಕಾಗಿ ಅವರು ಸಿಇಒ ರೋಹಿತ್ ಮಾಥುರ್ ಮತ್ತು ಪೈಲಟ್ ಪ್ರತಾಪ್ ಸಿಂಗ್ ಅವರಿಗೆ ಧನ್ಯವಾದ ಅರ್ಪಿಸಿದರು. ಏತನ್ಮಧ್ಯೆ, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರವನ್ನು ತಾವೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಯುಒಯು ಪರೀಕ್ಷಾ ಉಸ್ತುವಾರಿ ಸೋಮೇಶ್ ಕುಮಾರ್ ಹೇಳಿದರು. ಪರೀಕ್ಷೆ ಬರೆಯಲು ಒಬ್ಬ ವಿದ್ಯಾರ್ಥಿ ಸುಮಾರು 10 ಸಾವಿರ ರೂ. ಖರ್ಚು ಮಾಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:29 am, Sun, 7 September 25