ಏಲೂರು ನಿಗೂಢ ಕಾಯಿಲೆಗೆ ಕಲುಷಿತ ಆಹಾರ ಕಾರಣ: ತನಿಖೆ ನಡೆಸಲಿದ್ದಾರೆ ತಜ್ಞರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 10, 2020 | 8:45 PM

ಏಲೂರಿನಲ್ಲಿ ಕಂಡು ಬಂದಿದ್ದ ನಿಗೂಢ ಕಾಯಿಲೆಯ ಕುರಿತಾಗಿ ಆಂಧ್ರಪ್ರದೇಶ ಸರ್ಕಾರವು ಆಹಾರ ಉತ್ಪನ್ನಗಳತ್ತ ಗಮನ ಹರಿಸಿದೆ. ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಕ್ಕೆ 30 ರಕ್ತದ ಮಾದರಿಗಳನ್ನು ಕಳುಹಿಸಲಾಗಿದೆ.

ಏಲೂರು ನಿಗೂಢ ಕಾಯಿಲೆಗೆ ಕಲುಷಿತ ಆಹಾರ ಕಾರಣ: ತನಿಖೆ ನಡೆಸಲಿದ್ದಾರೆ ತಜ್ಞರು
ಏಲೂರಿನಲ್ಲಿ ನಿಗೂಢ ಕಾಯಿಲೆಯಿಂದ ಬಳಲುತ್ತಿರುವ ಮಂದಿ
Follow us on

ಏಲೂರು: ಪಶ್ವಿಮ ಗೋದಾವರಿ ಜಿಲ್ಲೆಯ ಏಲೂರು ಪಟ್ಟಣದಲ್ಲಿ ಕಾಣಿಸಿಕೊಂಡಿರುವ ನಿಗೂಢ ಕಾಯಿಲೆಗೆ ಆಹಾರ ಉತ್ಪನ್ನಗಳ ದೋಷ ಕಾರಣವಿರಬಹುದು ಎಂದು ಶಂಕಿಸಿರುವ ರಾಜ್ಯ ಸರ್ಕಾರ ಸಂಪೂರ್ಣ ಗಮನವನ್ನು ಅತ್ತ ಕೇಂದ್ರೀಕರಿಸಿದೆ.

ಏಲೂರಿನ ನೀರು ಮತ್ತು ಗಾಳಿಯ ಗುಣಮಟ್ಟವನ್ನು ಕಳೆದ ಮೂರು ದಿನಗಳಲ್ಲಿ ಪರೀಕ್ಷಿಸಲಾಯಿತು. ಇದರಲ್ಲಿ ಯಾವುದೇ ಮಾಲಿನ್ಯವಿಲ್ಲ. ನಮ್ಮ ತನಿಖೆಯ ಗಮನವು ಈಗ ಆಹಾರ ಉತ್ಪನ್ನಗಳ ಮೇಲೆ ಕೇಂದ್ರೀಕೃತವಾಗಿದೆ. ನಾವು ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್​ ಪರೀಕ್ಷಾ ಫಲಿತಾಂಶಗಳಿಗಾಗಿ ಕಾಯುತ್ತಿದ್ದೇವೆ ಎಂದು ಆರೋಗ್ಯ ಆಯುಕ್ತ ಭಾಸ್ಕರ್ ಕಟಮ್​ನೇನಿ ಹೇಳಿದರು.

ಅನಾರೋಗ್ಯಕ್ಕೆ ಒಳಗಾದ ಜನರ ಬಗ್ಗೆ ಸಮೀಕ್ಷೆ ನಡೆಯುತ್ತಿದೆ. ಜನರು ಸೇವಿಸುವ ಆಹಾರದ ಕುರಿತು ಆರೋಗ್ಯ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ತಜ್ಞರು ತಿಳಿಸಿದ್ದಾರೆ.

ಬುಧವಾರ ಸಂಜೆ 7ರಿಂದ ಗುರುವಾರ ಬೆಳಿಗ್ಗೆ 7ರವರೆಗೆ ನಾಲ್ಕು ಹೊಸ ಪ್ರಕರಣಗಳು ದಾಖಲಾಗಿವೆ. 544 ಜನರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ಜನರಲ್ಲಿ ಭೀತಿ ಕಡಿಮೆಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ ರೆಡ್ಡಿ WHO, AIIMS, NIN, CCMB ಮತ್ತು IICT ತಜ್ಞರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ತನಿಖೆಯ ಮಾಹಿತಿ ಪಡೆದುಕೊಂಡರು.

ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ 30 ರಕ್ತದ ಮಾದರಿಗಳನ್ನು ಕಳುಹಿಸಲಾಗಿದೆ. ಪರೀಶಿಲನೆಯ ಫಲಿತಾಂಶ ಶೀಘ್ರ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಗೂಢ ಕಾಯಿಲೆಯಿಂದ ಬಳಲುತ್ತಿರುವ ಪಟ್ಟಣದ ನಿವಾಸಿಗಳ ಮೇಲೆ ಗಮನವಿಡಲು ಪಶ್ಚಿಮ ಗೋದಾವರಿ ಜಿಲ್ಲಾಡಳಿತ 62 ವೈದ್ಯಕೀಯ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ. ಜನರ ಸ್ಥಿತಿಗತಿಗಳನ್ನು ಪರೀಕ್ಷಿಸಲು ವೈದ್ಯಕೀಯ ತಂಡಗಳು ಎರಡು ಸುತ್ತಿನಲ್ಲಿ ಮನೆಗಳಿಗೆ ತೆರಳಿ ಪರೀಕ್ಷೆ ನಡೆಸಲಿವೆ. 3ನೇ ಸುತ್ತಿನ ಪರೀಕ್ಷೆ ಇಂದು ಬೆಳಿಗ್ಗೆ ಆರಂಭವಾಗಿದೆ. ರೋಗದಿಂದ ಬಳಲುತ್ತಿರುವವರನ್ನು ಆಸ್ಪತ್ರೆಗೆ ಕರೆದೊಯ್ಯಲು 25 ಆಂಬುಲೆನ್ಸ್​ಗಳನ್ನು ಏಲೂರಿನಲ್ಲಿ ಇರಿಸಲಾಗಿದೆ.

ಆಂಧ್ರಪ್ರದೇಶದ ಏಲೂರು ಪಟ್ಟಣದಲ್ಲಿ ನಿಗೂಢ ಕಾಯಿಲೆ; 227 ಮಂದಿ ಅಸ್ವಸ್ಥ

ಏಲೂರಿನಲ್ಲಿ ನಿಗೂಢ ಕಾಯಿಲೆಗೆ ಸೀಸ ಕಾರಣ: ಏಮ್ಸ್ ವರದಿ ಬಹಿರಂಗ