ಚೆನ್ನೈ: ತಮಿಳುನಾಡಿನ ನೀಲಗಿರಿ ಜಿಲ್ಲೆಯ ನರಹಂತಕ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಅರಣ್ಯ ಇಲಾಖೆ, ಎಸ್.ಟಿ.ಎಫ್. ನಿಂದ 22 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಹುಲಿ ಸೆರೆ ಹಿಡಿಯಲಾಗಿದೆ. ಇದುವರೆಗೂ ನಾಲ್ವರನ್ನು ಹತ್ಯೆ ಮಾಡಿರುವ MDT-23 ಹುಲಿ ಸೆರೆಯಾಗಿದೆ. ಭಾರೀ ಆತಂಕ ಸೃಷ್ಟಿಸಿದ್ದ ಎಮ್ಡಿಟಿ-23 ಹುಲಿ ಕೊನೆಗೂ ಜೀವಂತ ಸೆರೆ ಸಿಕ್ಕಿದೆ. ಇದರಿಂದ ನೀಲಗಿರಿ ಜಿಲ್ಲೆಯ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಹುಲಿಯ ಹತ್ಯೆಗೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ನೀಡಿದ್ದರು. ಆದರೆ ಹೈಕೋರ್ಟ್ ಹುಲಿ ಕೊಲ್ಲಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿತ್ತು. ಇದೀಗ ಕೊನೆಗೆ ಜೀವಂತವಾಗಿ ಹುಲಿಯನ್ನು ಸೆರೆ ಹಿಡಿಯಲಾಗಿದೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ನರಭಕ್ಷಕ ಹುಲಿಯ ಕಾಟ ಮಿತಿಮೀರಿತ್ತು. ಕಳೆದ ಕೆಲ ದಿನಗಳಿಂದ ನಾಲ್ವರು ವ್ಯಕ್ತಿಗಳನ್ನು ಹುಲಿ ಕೊಂದು ಹಾಕಿತ್ತು. 20 ಜಾನುವಾರುಗಳನ್ನು ತಿಂದು ಹಾಕಿತ್ತು. ಇದರಿಂದಾಗಿ ತಮಿಳುನಾಡಿನ ಪ್ರಧಾನ ಮುಖ್ಯ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ವಾರ್ಡನ್ ಈ ನರಭಕ್ಷಕ ಹುಲಿಯನ್ನು ಬೇಟೆಯಾಡಿ ಕೊಲ್ಲಲು ಆದೇಶ ಹೊರಡಿಸಿದ್ದರು. ಆದರೂ, ಅರಣ್ಯ ಇಲಾಖೆಯ ಅಧಿಕಾರಿಗಳು ಸಂಯಮದಿಂದ ಹುಲಿ ಸೆರೆಗೆ ಆದ್ಯತೆ ನೀಡಿ ಕಾರ್ಯಾಚರಣೆ ನಡೆಸಿದ್ದರು.
ನರಭಕ್ಷಕ ಹುಲಿಗೆ MDT-23 ಎಂದು ಹೆಸರಿಡಲಾಗಿತ್ತು. ಹುಲಿ ಬೇಟೆಯ ಸಂಪೂರ್ಣ ಅಪರೇಷನ್ ಅನ್ನು ವಿಡಿಯೋ ರೆಕಾರ್ಡ್ ಮತ್ತು ಪೋಟೋಗ್ರಾಫ್ನಲ್ಲಿ ರೆಕಾರ್ಡ್ ಮಾಡಬೇಕು. ಅಪರೇಷನ್ ಮುಗಿದ ಬಳಿಕ ಅವರ ವಿಸ್ತೃತ ವರದಿಯನ್ನು ತಮಗೆ ಸಲ್ಲಿಸಬೇಕೆಂದು ಪ್ರಧಾನ ಮುಖ್ಯ ಅರಣ್ಯ, ವನ್ಯಜೀವಿ ಸಂರಕ್ಷಣೆಯ ವಾರ್ಡನ್ ಶೇಖರ್ ಕುಮಾರ್ ನೀರಜ್ ಆದೇಶ ಹೊರಡಿಸಿದ್ದರು.
ಟಿ23 ಹುಲಿಯನ್ನು ಅನಸ್ತೇಶಿಯಾ ಬಳಸಿ ಮಯಾರ್ ರಸ್ತೆಯ ಬಳಿ ಜೀವಂತವಾಗಿ ಸೆರೆಹಿಡಿಯಲಾಗಿದೆ ಎಂದು ಈ ಕೆಳಗಿನ ಟ್ವೀಟ್ನಲ್ಲಿ ಬರೆಯಲಾಗಿದೆ.
நீலகிரி – T23 புலி மாயார் சாலை கூட்டுபாறை பகுதியில் மயக்க ஊசி செலுத்தி பிடிக்கப்பட்டது.#MDT23 pic.twitter.com/SGYH7oNT0o
— Satheesh lakshmanan ?சதீஷ் லெட்சுமணன் (@Saislakshmanan) October 15, 2021
ತಮಿಳುನಾಡು ಅರಣ್ಯ ಇಲಾಖೆಯ ಅಧಿಕಾರಿಗಳ ಮನವಿ ಮೇರೆಗೆ ಕೇರಳ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಹುಲಿ ಬೇಟೆಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ತಮಿಳುನಾಡಿನ ಈರೋಡ್ ಜಿಲ್ಲೆಯ ಅರಣ್ಯಾಧಿಕಾರಿಗಳು ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಆದರೆ, ಹುಲಿಯನ್ನು ಸೆರೆ ಹಿಡಿಯಲು ಮಾತ್ರ ಸಾಧ್ಯವಾಗಿಲ್ಲ. ದೇವನ್ ಎಸ್ಟೇಟ್ ನಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಲೇ ಇದೆ. ದಟ್ಟವಾದ ಕಾಫಿ ಎಸ್ಟೇಟ್ನ ಗಿಡ ಮರಗಳು, ಬೆಟ್ಟಗುಡ್ಡಗಳ ಭೂಪ್ರದೇಶ, ಸ್ಥಳೀಯರಿಂದ ಎದುರಾಗುತ್ತಿರುವ ಅಡ್ಡಿಗಳಿಂದ ಹುಲಿಯನ್ನು ಸೆರೆ ಹಿಡಿಸಲು ಸಾಧ್ಯವಾಗುತ್ತಿಲ್ಲ ಎಂದು ಶೇಖರ್ ಕುಮಾರ್ ನೀರಜ್ ತಮ್ಮ ಆದೇಶದಲ್ಲಿ ಹೇಳಿದ್ದರು.
ಇದನ್ನೂ ಓದಿ: ನಾಲ್ಕು ವ್ಯಕ್ತಿಗಳು, 20 ಜಾನುವಾರುಗಳನ್ನು ಕೊಂದ ನರಭಕ್ಷಕ ಹುಲಿಯ ಬೇಟೆಗೆ ಅರಣ್ಯ ಇಲಾಖೆ ಆದೇಶ
ಇದನ್ನೂ ಓದಿ: ಬಂಡಿಪುರ ಅರಣ್ಯದಲ್ಲಿ ಹುಲಿ ಕಳೆಬರ ಪತ್ತೆ: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
Published On - 3:36 pm, Fri, 15 October 21