ಬಂಡಿಪುರ ಅರಣ್ಯದಲ್ಲಿ ಹುಲಿ ಕಳೆಬರ ಪತ್ತೆ: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

ಬಂಡಿಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಮಂಗಳವಾರ (ಸೆ.14) ಹುಲಿಯ ಕಳೆಬರವೊಂದು ಪತ್ತೆಯಾಗಿದೆ. ಬೀಟ್​ ಮಾರ್ಗದಲ್ಲಿ ಸಂಚರಿಸುತ್ತಿದ್ದ ಅರಣ್ಯ ರಕ್ಷಕರಿಗೆ ಈ ಕಳೆಬರ ಗೋಚರಿಸಿದೆ.

ಬಂಡಿಪುರ ಅರಣ್ಯದಲ್ಲಿ ಹುಲಿ ಕಳೆಬರ ಪತ್ತೆ: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಬಂಡಿಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಮಂಗಳವಾರ (ಸೆ.14) ಹುಲಿಯ ಕಳೆಬರವೊಂದು ಪತ್ತೆಯಾಗಿದೆ. ಬೀಟ್​ ಮಾರ್ಗದಲ್ಲಿ ಸಂಚರಿಸುತ್ತಿದ್ದ ಅರಣ್ಯ ರಕ್ಷಕರಿಗೆ ಈ ಕಳೆಬರ ಗೋಚರಿಸಿದೆ. ಹೊಸಹಳ್ಳಿ ಸಮೀಪದ ಅರಣ್ಯ ಗಡಿಯ ಪೊದೆಯೊಂದರಲ್ಲಿ ಹುಲಿಯ ದೇಹವಿತ್ತು ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಹುಲಿಯನ್ನು ಬೇಟೆಯಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕ್ಷೇತ್ರ ನಿರ್ದೇಶಕ ಎಸ್.ಆರ್.ನಟೇಶ್, ಆರೋಪಿಯನ್ನು ಗುರುತಿಸಲಾಗಿದೆ. ಆತ ಈ ಹಿಂದೆಯೂ ಹಲವು ಬಾರಿ ಬೇಟೆಯಂಥ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪಗಳಿದ್ದವು. ಶೀಘ್ರವೇ ಅವನನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ಬಂಡಿಪುರ ಹುಲಿ ಸಂರಕ್ಷಿತ ಅರಣ್ಯದ ಭದ್ರತೆ ಹೆಚ್ಚಿಸಬೇಕು ಎಂಬ ಆಗ್ರಹಗಳು ಈ ಹಿಂದೆಯೂ ಕೇಳಿಬಂದಿತ್ತು. ಅಶಕ್ತ ಚಿರತೆಯೊಂದನ್ನು ಅಲ್ಲಿನ ಸಿಬ್ಬಂದಿ ಹೂತುಹಾಕಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು.

ಈಚೆಗಷ್ಟೇ ಗೊಂಡ್ರೆ ವಲಯದಲ್ಲಿ ಹುಲಿಯೊಂದು ಮೃತಪಟ್ಟಿತ್ತು. ಸತ್ತ ಒಂದು ವಾರದ ನಂತರ ಅದರ ಕಳೆಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವೈದ್ಯಕೀಯ ಆಧಾರಗಳು ಸಾಬೀತಾಗದ ಕಾರಣ ಅದನ್ನು ನೈಸರ್ಗಿಕ ಸಾವು ಎಂದು ಘೋಷಿಸಲಾಗಿತ್ತು.

ಮೊಳೆಯೂರು ವಲಯದಲ್ಲಿ ಸಿಕ್ಕ ಚಿರತೆ ದೇಹದಿಂದ ಪಂಜ ಮತ್ತು ತಲೆಯನ್ನು ಬೇಟೆಗಾರರು ಕದ್ದೊಯ್ದಿದ್ದರು. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಕಳೆಬರವನ್ನು ಸೂಕ್ತ ಕ್ರಮ ಜರುಗಿಸದೆ ದಫನ ಮಾಡಿದ್ದರು. ಈ ವಿಷಯವನ್ನು ಮುಖ್ಯ ವನಪಾಲಕ ವಿಜಯ್ ಕುಮಾರ್ ಗೋಗಿ ಅವರ ಗಮನಕ್ಕೂ ತಂದಿರಲಿಲ್ಲ ಎಂದು ಸ್ಟ್ರಿಪ್ಸ್​ ಅಂಡ್ ಗ್ರೀನ್ ಅರ್ತ್ ಫೌಂಡೇಶನ್​ನ ಎಸ್​.ಸೇನ್​ಗುಪ್ತ ಹೇಳಿದ್ದಾರೆ.

ಬೇಟೆಗಾರರು ಬಂಡೀಪುರ ವಲಯದಲ್ಲಿ ಮುಕ್ತವಾಗಿ ಸಂಚರಿಸುತ್ತಿದ್ದಾರೆ ಎನ್ನುವುದಕ್ಕೆ ಇದೀಗ ಮತ್ತೊಂದು ಪುರಾವೆ ಸಿಕ್ಕಂತೆ ಆಗಿದೆ. ಹುಲಿಯ ಸಾವನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

(Tiger Carcass Found in Bandipur Tiger Reserve Wildlife Activists Accuses Loopholes in Forest Department)

ಇದನ್ನೂ ಓದಿ: ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಏಕಕಾಲಕ್ಕೆ ತಾಯಿ-ಮಕ್ಕಳ ದರ್ಶನ, ಸಫಾರಿಗೆ ಬಂದವರು ಫುಲ್ ಖುಷ್

ಇದನ್ನೂ ಓದಿ: ಕಾಡಂಚಿನಲ್ಲಿ ಎರಡು ಹುಲಿಗಳ ನಡುವೆ ಟೆರಿಟೋರಿಯಲ್ ಕಾದಾಟ; 5 ವರ್ಷದ ಹುಲಿ ಸಾವು

Click on your DTH Provider to Add TV9 Kannada