‘ರಾಹುಲ್ ಗಾಂಧಿಯ ಫಾರ್ಮ್ 6 ಆರೋಪ ದಾರಿ ತಪ್ಪಿಸುವಂತಿದೆ’; ಚುನಾವಣಾ ಆಯೋಗ ತಿರುಗೇಟು

ಮತದಾರರ ನೋಂದಣಿಗೆ ಬಳಸಲಾಗುವ 'ಫಾರ್ಮ್ 6'ನಲ್ಲಾಗಿರುವ ಬದಲಾವಣೆಗಳಿಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪಗಳನ್ನು ಭಾರತೀಯ ಚುನಾವಣಾ ಆಯೋಗವು ತೀವ್ರವಾಗಿ ಖಂಡಿಸಿದ್ದು, ಅವುಗಳನ್ನು ಸಂಪೂರ್ಣವಾಗಿ ದಾರಿ ತಪ್ಪಿಸುವಂತಿದೆ ಎಂದು ಟೀಕಿಸಿದೆ. ಚುನಾವಣಾ ಆಯೋಗವು ನಿಯಮಾವಳಿಗಳನ್ನು ಮೀರಿ ಆನ್‌ಲೈನ್ ಫಾರ್ಮ್ 6ರಲ್ಲಿ ಏಕಪಕ್ಷೀಯವಾಗಿ ಹೊಸ ಷರತ್ತುಗಳನ್ನು ಹಾಗೂ ಪೋಷಕರ ವಿವರಗಳನ್ನು ಕೇಳುವ ವಿಭಾಗಗಳನ್ನು ಸೇರ್ಪಡೆಗೊಳಿಸಿ ಅನಧಿಕೃತ ಬದಲಾವಣೆಗಳನ್ನು ಮಾಡಿದೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು.

‘ರಾಹುಲ್ ಗಾಂಧಿಯ ಫಾರ್ಮ್ 6 ಆರೋಪ ದಾರಿ ತಪ್ಪಿಸುವಂತಿದೆ’; ಚುನಾವಣಾ ಆಯೋಗ ತಿರುಗೇಟು
ಜ್ಞಾನೇಶ್ ಕುಮಾರ್- ರಾಹುಲ್ ಗಾಂಧಿ
Image Credit source: PTI

Updated on: Oct 05, 2026 | 9:29 PM

ನವದೆಹಲಿ, ಅಕ್ಟೋಬರ್ 5: ಎಸ್​ಐಆರ್​ನ ‘ಫಾರ್ಮ್ 6’ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಆರೋಪಗಳನ್ನು ಭಾರತೀಯ ಚುನಾವಣಾ ಆಯೋಗವು ತೀವ್ರವಾಗಿ ಖಂಡಿಸಿದ್ದು, ಅವುಗಳನ್ನು “ದಾರಿ ತಪ್ಪಿಸುವಂತಿದೆ” ಎಂದು ಟೀಕಿಸಿದೆ. ರಾಹುಲ್ ಗಾಂಧಿ ಅವರ ಹೇಳಿಕೆಗಳು ಸತ್ಯಕ್ಕೆ ದೂರವಾಗಿದ್ದು, ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಪ್ರಯತ್ನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಬಿಹಾರದಲ್ಲಿ ನಡೆದ ಎಸ್​ಐಆರ್ ಸಂದರ್ಭದಲ್ಲಿ ಫಾರ್ಮ್ 6ನೊಂದಿಗೆ ಲಗತ್ತಿಸಲಾದ ಸ್ವಯಂ ಘೋಷಣಾಪತ್ರವನ್ನು ಸುಪ್ರೀಂ ಕೋರ್ಟ್ ತನ್ನ ಆದೇಶದ ಮೂಲಕ ಸಮ್ಮತಿಸಿ ಎತ್ತಿಹಿಡಿದಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಎಸ್‌ಐಆರ್ ಪ್ರಕ್ರಿಯೆ ಚಾಲ್ತಿಯಲ್ಲಿರುವ ಪ್ರದೇಶಗಳಲ್ಲಿ ಮಾತ್ರವೇ ಈ ಹೆಚ್ಚುವರಿ ಘೋಷಣಾಪತ್ರ ಅನ್ವಯವಾಗುತ್ತದೆ. ಎಸ್‌ಐಆರ್ ಮುಕ್ತಾಯಗೊಂಡಿರುವ ರಾಜ್ಯಗಳಲ್ಲಿ 1960ರ ‘ಮತದಾರರ ನೋಂದಣಿ ನಿಯಮಾವಳಿಗಳ’ ಪ್ರಕಾರವೇ ಸಾಮಾನ್ಯ ಫಾರ್ಮ್ 6 ಅನ್ನು ಬಳಸಲಾಗುತ್ತಿದೆ ಎಂದು ಚುನಾವಣಾ ಆಯೋಗ ಪುನರುಚ್ಚರಿಸಿದೆ.

ಇದನ್ನೂ ಓದಿ: ‘ಪರಿಷ್ಕೃತ ಫಾರ್ಮ್ 6ಗೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿಲ್ಲ’; ಸಿಜೆಐ ಸೂರ್ಯ ಕಾಂತ್ ಸ್ಪಷ್ಟನೆ

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಕುರಿತು ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ, “ಜೂನ್ 25, 2025ರಂದು ಬಿಹಾರದಲ್ಲಿ ಎಸ್‌ಐಆರ್ ನಡೆಸಲು ಹೊರಡಿಸಲಾದ ಆದೇಶವನ್ನು ಪೂರ್ಣ ಆಯೋಗದ ಸರ್ವಸಮ್ಮತಿಯ ಅನುಮೋದನೆಯೊಂದಿಗೆ ನೀಡಲಾಗಿತ್ತು. ಈ ಆದೇಶವನ್ನು ಮೇ 27, 2026ರ ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು” ಎಂದು ತಿಳಿಸಿದೆ.


ರಾಹುಲ್ ಗಾಂಧಿ ಗಂಭೀರ ಆರೋಪ:

ಇದಕ್ಕೂ ಮುನ್ನ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಫಾರ್ಮ್ 6 ಅನ್ನು ಉದ್ದೇಶಪೂರ್ವಕವಾಗಿ ಮತ್ತು ಕಾನೂನುಬಾಹಿರವಾಗಿ ಬದಲಾಯಿಸಿದ್ದಾರೆ ಎಂದು ಆರೋಪಿಸಿದ್ದರು. “ಜ್ಞಾನೇಶ್ ಕುಮಾರ್ ಅವರು ಫಾರ್ಮ್ 6 ಅನ್ನು ಏಕಪಕ್ಷೀಯವಾಗಿ ಮತ್ತು ಅಕ್ರಮವಾಗಿ ಬದಲಾಯಿಸಿದ್ದಾರೆ ಎಂಬುದು ಈಗ ಸಾಬೀತಾಗಿದೆ. ಬಿಜೆಪಿಗೆ ಸಹಾಯ ಮಾಡಲು ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇದು ಮತ್ತೊಂದು ಸಾಕ್ಷಿಯಾಗಿದೆ. ನಮ್ಮ ಪ್ರಜಾಪ್ರಭುತ್ವದ ಮೇಲಿನ ಈ ಕ್ರಿಮಿನಲ್ ದಾಳಿಯಲ್ಲಿ ಭಾಗಿಯಾಗಿರುವ ಜ್ಞಾನೇಶ್ ಕುಮಾರ್ ಮತ್ತು ಪ್ರತಿಯೊಬ್ಬರನ್ನೂ ಉತ್ತರದಾಯಿಗಳನ್ನಾಗಿ ಮಾಡಲಾಗುವುದು” ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು.


ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅಮಾನತಿಗೆ ಸುಪ್ರೀಂ ಕೋರ್ಟ್ ನಕಾರ: ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್

ಸುಪ್ರೀಂ ಕೋರ್ಟ್‌ನಿಂದ ನೋಟಿಸ್ ಜಾರಿ:

ಚುನಾವಣಾ ಆಯುಕ್ತರಾದ ಸುಖ್‌‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಅನುಮೋದನೆಯಿಲ್ಲದೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದರು. ಸುಪ್ರೀಂ ಕೋರ್ಟ್ ನೋಟಿಸ್‌ಗೆ ಉತ್ತರಿಸಲು ಆಯೋಗ ಹಾಗೂ ಕೇಂದ್ರಕ್ಕೆ ಒಂದು ವಾರದ ಕಾಲಾವಕಾಶ ನೀಡಲಾಗಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಮೂವರು ನ್ಯಾಯಮೂರ್ತಿಗಳ ಪೀಠ ಈ ನೋಟಿಸ್ ಜಾರಿಗೊಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us