ಪುಲ್ವಾಮಾದಲ್ಲಿ ಮಾಜಿ ಪೊಲೀಸ್ ಅಧಿಕಾರಿ, ಅವರ ಪತ್ನಿ, ಪುತ್ರಿಯನ್ನೂ ಕೊಂದ ಉಗ್ರರು; ಮನೆಗೇ ನುಗ್ಗಿ ಗುಂಡಿನ ದಾಳಿ

Terror Attack: ಆವಂತಿಪೊರಾದ ಹರಿಪರಿಗಂನಲ್ಲಿರುವ ಮಾಜಿ ಎಸ್​​ಪಿಒ ಫಯಾಜ್​ ಅಹ್ಮದ್​ ಮನೆಗೆ ನುಗ್ಗಿದ ಉಗ್ರರು ನಂತರ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಇವರಲ್ಲಿ ಫಯಾಜ್​ ಸ್ಥಳದಲ್ಲೇ ಮೃತಪಟ್ಟಿದ್ದರು. ಪತ್ನಿ ರಾಜಾ ಬೇಗಂ ಮತ್ತು ಪುತ್ರಿ ರಫಿಯಾ ಗಂಭೀರವಾಗಿ ಗಾಯಗೊಂಡಿದ್ದರು.

ಪುಲ್ವಾಮಾದಲ್ಲಿ ಮಾಜಿ ಪೊಲೀಸ್ ಅಧಿಕಾರಿ, ಅವರ ಪತ್ನಿ, ಪುತ್ರಿಯನ್ನೂ ಕೊಂದ ಉಗ್ರರು; ಮನೆಗೇ ನುಗ್ಗಿ ಗುಂಡಿನ ದಾಳಿ
ಪ್ರಾತಿನಿಧಿಕ ಚಿತ್ರ
Edited By:

Updated on: Jun 28, 2021 | 7:51 AM

ಪುಲ್ವಾಮಾ: ಇಲ್ಲಿನ ಮಾಜಿ ಪೊಲೀಸ್ ಅಧಿಕಾರಿ, ಅವರ ಪತ್ನಿ ಮತ್ತು ಪುತ್ರಿಯನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಜಮ್ಮುಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಹರಿಪರಿಗಂ​ ಗ್ರಾಮದಲ್ಲಿರುವ ಮಾಜಿ ಪೊಲೀಸ್​ ಅಧಿಕಾರಿಯ ಮನೆಗೇ ಬಂದು ಉಗ್ರರು ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ರಕ್ಷಣಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಆವಂತಿಪೊರಾದ ಹರಿಪರಿಗಂನಲ್ಲಿರುವ ಮಾಜಿ ಎಸ್​​ಪಿಒ ಫಯಾಜ್​ ಅಹ್ಮದ್​ ಮನೆಗೆ ನುಗ್ಗಿದ ಉಗ್ರರು ನಂತರ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಇವರಲ್ಲಿ ಫಯಾಜ್​ ಸ್ಥಳದಲ್ಲೇ ಮೃತಪಟ್ಟಿದ್ದರು. ಪತ್ನಿ ರಾಜಾ ಬೇಗಂ ಮತ್ತು ಪುತ್ರಿ ರಫಿಯಾ ಗಂಭೀರವಾಗಿ ಗಾಯಗೊಂಡಿದ್ದರು. ಇವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ಸೇರಿಸಿದ ಕೆಲವೇ ಹೊತ್ತಲ್ಲಿ ಪತ್ನಿ ರಾಜಾ ಬೇಗಂ ಕೂಡ ಸಾವನ್ನಪ್ಪಿದ್ದಾರೆ. ಪುತ್ರಿ ರಫಿಯಾಗೆ ಚಿಕಿತ್ಸೆ ಮುಂದುವರಿಸಲಾಗಿತ್ತಾದರೂ ಅವರೂ ಬದುಕಲಿಲ್ಲ. ನಾಪತ್ತೆಯಾದ ಉಗ್ರರ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಜಮ್ಮು-ಕಾಶ್ಮೀರ ವಲಯದ ಪೊಲೀಸರು ತಿಳಿಸಿದ್ದಾರೆ. ಈ ಅಧಿಕಾರಿಯ ಪುತ್ರ ಸೈನ್ಯದ ಪ್ರಾದೇಶಿಕ ಪಡೆಯಲ್ಲಿ ಸೈನಿಕನಾಗಿದ್ದಾನೆ. ಎರಡು ವರ್ಷಗಳ ಹಿಂದೆ ಫಯಾಜ್​​ಗೆ ರಾಜೀನಾಮೆ ನೀಡುವಂತೆ ಒತ್ತಡ ಬಂದಿತ್ತು. ಆದರೆ ಅವರದನ್ನು ಮಾಡಿರಲಿಲ್ಲ.

ನಿನ್ನೆ ಅದೇನೋ ಜಮ್ಮು-ಕಾಶ್ಮೀರದಲ್ಲಿ ಉಗ್ರಕೃತ್ಯ ಮಿತಿಮೀರಿತ್ತು. ಮೊದಲು ಜಮ್ಮು ಏರ್​ಪೋರ್ಟ್​​ನಲ್ಲಿ ಅವಳಿ ಸ್ಫೋಟಗಳು ನಡೆದವು. ಬಳಿಕ ಸುಮಾರು 6 ಕೆಜಿ ತೂಕದ ಐಇಡಿಯನ್ನು ಪೊಲೀಸರು ವಶಪಡಿಸಿಕೊಂಡರು. ಸದ್ಯ ಜಮ್ಮು-ಕಾಶ್ಮೀರದ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.

ಇದನ್ನೂ ಓದಿ: ‘ಹೊರಗೆ ಕಾಲ್​ ಕಟ್​ ಮಾಡುತ್ತಿದ್ದ ಹುಡುಗಿ, ಈಗ ಅವನಿಗೆ ಊಟ ಮಾಡಿಸುತ್ತಿದ್ದಾಳೆ’