ದೆಹಲಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಬಾರಿ ಸ್ವಯಂ ದೃಢೀಕರಣಕ್ಕೂ ಅವಕಾಶ ಇರುತ್ತದೆ ಎಂದು ಕೇಂದ್ರ ಸರ್ಕಾರವು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಹೇಳಿಕೆಗೆ ಉತ್ತರವಾಗಿ ಸಂಸತ್ತಿಗೆ ಮಾಹಿತಿ ನೀಡಿದೆ. 2021ರ ಜನಗಣತಿಗೆ ಸಂಬಂಧಿಸಿದಂತೆ ಏನಾದರೂ ಬದಲಾವಣೆ ಅಥವಾ ಹೆಚ್ಚುವರಿ ಮಾಹಿತಿ ಇದೆಯೆ ಎಂದು ಶಶಿ ತರೂರ್ ಪ್ರಶ್ನಿಸಿದ್ದರು.
ದತ್ತಾಂಶ ಸಂಗ್ರಹಕ್ಕಾಗಿ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗುವುದು. ಗಣತಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಿರ್ವಹಿಸಲು ಮತ್ತು ನಿಗಾವಣೆಗಾಗಿ ಪೋರ್ಟಲ್ ಅಭಿವೃದ್ಧಿಪಡಿಸಲಾಗುವುದು. ಈ ಪೋರ್ಟಲ್ಗೆ ಲಾಗಿನ್ ಆಗಲು ಮೊಬೈಲ್ ಸಂಖ್ಯೆ ಮತ್ತು ಇತರ ವೈಯಕ್ತಿಕ ಮಾಹಿತಿ ನೀಡಬೇಕಾಗುತ್ತದೆ. ಸ್ವಯಂ ದೃಢೀಕರಣದ ಮೂಲಕ ಮಾಹಿತಿ ನೀಡಲು ಮುಂದಾಗುವವರು ಪ್ರತಿ ಹಂತದಲ್ಲಿಯೂ ನಿರ್ದಿಷ್ಟ ಸಂಕೇತಗಳನ್ನು ನೀಡಬೇಕಾಗುತ್ತದೆ. ಸ್ವಯಂ ದೃಢೀಕರಣಕ್ಕಾಗಿ ಮಾಹಿತಿ ಒದಗಿಸಿದ ನಂತರ ಗಣತಿಗೆ ಮಾಹಿತಿ ನೀಡುವವರ ಮೊಬೈಲ್ಗೆ ಸಂಕೇತ ಸಂಖ್ಯೆಯೊಂದು ಬರುತ್ತದೆ. ಈ ಸಂಖ್ಯೆಯನ್ನು ಗಣತಿದಾರರಿಗೆ ನೀಡಿದರೆ ಎಲ್ಲ ದತ್ತಾಂಶಗಳು ತನ್ನಿಂತಾನೆ ಭರ್ತಿಯಾಗುತ್ತವೆ ಎಂದು ಕೇಂದ್ರ ಸರ್ಕಾರವು ಲಿಖಿತ ಉತ್ತರದಲ್ಲಿ ತಿಳಿಸಿದೆ.
ಜನಗಣತಿಯಿಂದ ಸಂಗ್ರಹಿಸುವ ಮಾಹಿತಿಯನ್ನು ರಾಷ್ಟ್ರೀಯ ನಾಗರಿಕ ನೋಂದಣಿ ಸೇರಿದಂತೆ ಯಾವುದೇ ದತ್ತಾಂಶ ರೂಪಿಸಲು ಬಳಸುವುದಿಲ್ಲ. ಜನಗಣತಿ ಕಾಯ್ದೆ 1948ರ ಪ್ರಕಾರ ಈ ವೇಳೆ ಸಂಗ್ರಹಿಸುವ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಅವಕಾಶ ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಸಹ ಈ ಹಂತದಲ್ಲಿ ಜಾತಿ ಮಾಹಿತಿ ಬಹಿರಂಗಪಡಿಸುವ ಉದ್ದೇಶವಿಲ್ಲ ಎಂದು ಹೇಳಿದ್ದಾರೆ. ನಮ್ಮ ದೇಶದಲ್ಲಿ ಪ್ರತಿ 10 ವರ್ಷಗಳಿಗೆ ಒಮ್ಮೆ ಜನಗಣತಿ ಪ್ರಕ್ರಿಯೆ ನಡೆಯುತ್ತದೆ.
(Forthcoming Census to go digital Centre informs Lok Sabha over a question of Shahi Tharoor)
ಇದನ್ನೂ ಓದಿ: ಡಿಐಸಿಜಿಸಿ ಕಾಯ್ದೆ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಸ್ತು; ಕೋಟ್ಯಂತರ ಬ್ಯಾಂಕ್ ಠೇವಣಿದಾರರ ಹಣಕ್ಕೆ ಸಿಕ್ತು ಗ್ಯಾರಂಟಿ
ಇದನ್ನೂ ಓದಿ: Parliament Monsoon Session: ಲೋಕಸಭೆಯಲ್ಲಿ ಸಂವಿಧಾನದ 127 ನೇ ತಿದ್ದುಪಡಿ ಮಸೂದೆ ಮಂಡನೆ
Published On - 7:45 pm, Tue, 10 August 21