ಹೈದರಾಬಾದ್: ಹೈದರಾಬಾದ್ (Hyderabad) ಸಾಮೂಹಿಕ ಅತ್ಯಾಚಾರ (Gang Rape) ಪ್ರಕರಣದ ನಾಲ್ವರು ಅಪ್ರಾಪ್ತ ಆರೋಪಿಗಳಿಗೆ ಜಾಮೀನು (Bail) ಸಿಕ್ಕಿದೆ. ಜೂನ್ ಮೊದಲ ವಾರದಲ್ಲಿ ಈ ಆರೋಪಿಗಳನ್ನು ಬಂಧಿಸಿ ಜುವೇನೆಲ್ ಹೋಂನಲ್ಲಿರಿಸಲಾಗಿತ್ತು. ತಿಂಗಳ ಹಿಂದೆ ಹೈದರಾಬಾದ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ತೆಲಂಗಾಣ ದಲ್ಲಿ ಭಾರೀ ಆಕ್ರೋಶ ಮಾತ್ರವಲ್ಲದೆ, ರಾಜಕೀಯ ಜಟಾಪಟಿಗೂ ಕಾರಣವಾಗಿತ್ತು. ಜುವೇನೇಲ್ ಜಸ್ಟೀಸ್ ಬೋರ್ಡ್ ಆರೋಪಿಗಳಿಗೆ ಜಾಮೀನು ನೀಡಿದೆ. ಪ್ರತಿ ತಿಂಗಳ ಮೊದಲ ಭಾನುವಾರ ಜಿಲ್ಲಾ ಪ್ರೊಬೇಷನ್ ಅಧಿಕಾರಿ ಮುಂದೆ ಹಾಜರಾತಿ ಹಾಕಬೇಕು, ತನಿಖಾ ಅಧಿಕಾರಿಗಳಿಗೆ ಸಹಕರಿಸಬೇಕು ಎಂಬ ಷರತ್ತು ಅಡಿಯಲ್ಲಿ ನಾಲ್ವರು ಆರೋಪಿಗಳಿಗೆ ಜಾಮೀನು ನೀಡಲಾಗಿದೆ. ಅಪ್ರಾಪ್ತ, ಐದನೇ ಆರೋಪಿ ಜಾಮೀನಿಗಾಗಿ ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದು ಆತ ಇನ್ನೂ ಜುವೇನೇಲ್ ಹೋಂನಲ್ಲೇ ಇದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಕರಣದಲ್ಲಿ ಸಾದುದ್ದೀನ್ ಮಲಿಕ್ ಎಂಬಾತ ಮಾತ್ರ ಅಪ್ರಾಪ್ತನಲ್ಲ. ಅವನು ಇನ್ನೂ ಜೈಲಿನಲ್ಲಿದ್ದಾನೆ.
ಮೇ 28ರಂದು ಹೈದರಾಬಾದ್ ನ ಜುಬಿಲೀ ಹಿಲ್ಸ್ ನಲ್ಲಿ 17ರ ಹರೆಯದ ಯುವತಿಯನ್ನು ಕಾರಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ 6 ಮಂದಿಯನ್ನು ಬಂಧಿಸಲಾಗಿತ್ತು. ಬಂಧಿತ ಅಪ್ರಾಪ್ತ ಆರೋಪಿಗಳು 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಾಗಿದ್ದು, ರಾಜಕೀಯ ಪ್ರಭಾವಿ ಕುಟುಂಬದವರಾಗಿದ್ದಾರೆ.
ಪಬ್ ನಲ್ಲಿ ಪಾರ್ಟಿ ಮುಗಿದ ನಂತರ ಐದು ಯುವಕರಿರುವ ಕಾರಿಗೆ ಯುವತಿ ಹತ್ತಿದ್ದು ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದುಸಂತ್ರಸ್ತೆ ದೂರು ನೀಡಿದ್ದಳು. ಯುವತಿ ಜತೆ ಒಬ್ಬ ಹುಡುಗ ಕೆಟ್ಟದಾಗಿ ವರ್ತಿಸುತ್ತಿರುವುದು ವಿಡಿಯೊದಲ್ಲಿದ್ದರೂ ಆತ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ