ಲಕ್ನೊ: ಉತ್ತರ ಪ್ರದೇಶದ ರಾಜಧಾನಿ ಲಕ್ನೊದಿಂದ 40ಕಿಮಿ ದೂರದಲ್ಲಿರುವ ಉನ್ನಾವ್ ಜಿಲ್ಲೆಯ ಗ್ರಾಮೀಣ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 14 ಸರ್ಕಾರಿ ವೈದ್ಯರು ಗುರುವಾರ ರಾಜೀನಾಮೆ ನೀಡಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಕೊವಿಡ್ ಪ್ರಕರಣ ಹೆಚ್ಚಳಕ್ಕೆ ನಮ್ಮನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಆರೋಪಿಸಿ ವೈದ್ಯರು ರಾಜೀನಾಮೆ ನೀಡಿದ್ದಾರೆ. ಉನ್ನಾವ್ ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉಸ್ತುವಾರಿಯನ್ನು ವೈದ್ಯರು ವಹಿಸಿಕೊಂಡಿದ್ದಾರೆ. ಈ ಎರಡೂ ಸ್ಥಳಗಳು ಗ್ರಾಮೀಣ ಆಸ್ಪತ್ರೆಗಳಾಗಿವೆ. ಇವು ಹಳ್ಳಿಯ ಜನರಿಗೆ ಆರೋಗ್ಯ ವ್ಯವಸ್ಥೆ ಒದಗಿಸುತ್ತವೆ.
ಜಂಟಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ 14 ವೈದ್ಯರಲ್ಲಿ 11 ಮಂದಿ ಬುಧವಾರ ಸಂಜೆ ಉನ್ನಾವ್ ನ ಮುಖ್ಯ ವೈದ್ಯಾಧಿಕಾರಿ ಕಚೇರಿಗೆ ಭೇಟಿ ನೀಡಿ ಪತ್ರವನ್ನು ತಮ್ಮ ಡೆಪ್ಯುಟಿ ವೈದ್ಯಾಧಿಕಾರಿಗೆ ಹಸ್ತಾಂತರಿಸಿದರು. ಸಾಂಕ್ರಾಮಿಕ ರೋಗ ನಿಯಂತ್ರಿಸಲು ಶ್ರಮವಹಿಸಿದ್ದರೂ ಕೊವಿಡ್ ಪ್ರಕರಣದ ಹೆಚ್ಚಳಕ್ಕೆ ವೈದ್ಯರನ್ನೇ ದೂಷಿಸಲಾಗಿದೆ ಎಂದು ರಾಜೀನಾಮೆ ಪತ್ರದಲ್ಲಿ ಬರೆದಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
Fourteen doctors working at community and primary health centres in UP’s Unnao resign alleging misbehaviour, mental harassment by administration officers
— Press Trust of India (@PTI_News) May 13, 2021
ಉನ್ನಾವ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಇಂದು ಮಧ್ಯಾಹ್ನ ಹೊಸ ಹೇಳಿಕೆ ನೀಡಿದ್ದು ಸಮಸ್ಯೆ ಪರಿಹರಿಸಲಾಗಿದೆ ವೈದ್ಯರು ತಮ್ಮ ರಾಜೀನಾಮೆಯನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ನಾವು ನಿನ್ನೆ ಸಂಜೆ ಅವರೊಂದಿಗೆ ಮಾತನಾಡಿದ್ದೆವು ಮತ್ತು ಅವರು ರಾತ್ರಿಯೇ ತಮ್ಮ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಂಡರು. ಅವರು ಇಂದು ನನ್ನೊಂದಿಗೆ ಭೇಟಿಯಾದರು. ನಾನು ಅವರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಪರಿಹಾರಗಳನ್ನು ನೀಡಿದ್ದೇನೆ. ನಾವು ಸೌಹಾರ್ದಯುತವಾಗಿ ಮಾತನಾಡಿದ್ದು ಇದು ಆಂತರಿಕ ವಿಷಯವಾಗಿದೆ “ಎಂದು ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಮ್ಮ ತಂಡಗಳು ಇಡೀ ದಿನ ಮಾಡುತ್ತಿರುವುದು ಸಮಸ್ಯೆಯಾಗಿದೆ, ಆದರೆ ನಾವು ‘ಕೆಲಸ ಮಾಡುತ್ತಿಲ್ಲ’ ಎಂದು ಬಿಂಬಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳು , ಇತರ ಅಧಿಕಾರಿಗಳು, ಎಸ್‌ಡಿಎಂ ಮತ್ತು ತಹಶೀಲ್ದಾರ್ ಕೂಡ ನಮ್ಮನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಮತ್ತು ಅವಲೋಕನ ಸಭೆಗಳನ್ನು ನಡೆಸುತ್ತಿದ್ದಾರೆ. ನಮ್ಮ ತಂಡಗಳು ಮಧ್ಯಾಹ್ನ ಹೊರಟು ಕೊವಿಡ್ ಪಾಸಿಟಿವ್ ರೋಗಿಗಳನ್ನು ಪತ್ತೆಹಚ್ಚಿ ಮತ್ತು ಪ್ರತ್ಯೇಕಿಸಿ, ಸ್ಯಾಂಪಲಿಂಗ್ ಮಾಡಿ, ಔಷಧಿಗಳನ್ನು ವಿತರಿಸಿದ ನಂತರ ಎಸ್‌ಡಿಎಂನಿಂದ ಅವಲೋಕನ ಸಭೆಗಳಿಗೆ ಬರಲು ಕರೆಯುತ್ತಾರೆ. ಸುಮಾರು30 ಕಿ.ಮೀ ಪ್ರಯಾಣಿಸಲು ನಾವು ಬದ್ಧರಾಗಿದ್ದೇವೆ. ನಾವು ಕೆಲಸ ಮಾಡಿದ್ದೇವೆ ಎಂದು ನಾವು ಸಾಬೀತುಪಡಿಸಬೇಕು. ನಾವು ಕೆಲಸ ಮಾಡದ ಕಾರಣ ಕೋವಿಡ್ ಸೋಂಕು ಹರಡುತ್ತಿದೆ ಎಂದು ದೂರಲಾಗಿದ ಎಂದು ವೈದ್ಯರಲ್ಲಿ ಒಬ್ಬರಾದ ಡಾ.ಶರದ್ ವೈಶ್ಯ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: Unnao: ಉತ್ತರ ಪ್ರದೇಶದ ಉನ್ನಾವ್ನ ಗಂಗಾ ನದಿ ತೀರದಲ್ಲಿ ಹೂತಿಟ್ಟ ಮೃತದೇಹಗಳು ಪತ್ತೆ
Published On - 6:20 pm, Thu, 13 May 21