ಭಾರತ ರತ್ನ ಮತ್ತು ನೊಬೆಲ್ ಪ್ರಶಸ್ತಿ ವಿಜೇತರಿಗೆ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಜೀವನ ಪರ್ಯಂತ ಉಚಿತ ಪ್ರಯಾಣ ಒದಗಿಸುತ್ತಿದ್ದು, ಇವೆರಡೂ ಗೌರವವವನ್ನು ಪ್ರಾಪ್ತವಾಗಿರುವ ಅಮರ್ತ್ಯ ಸೇನ್ ಏರ್ ಇಂಡಿಯಾದ ಉಚಿತ ಸೇವೆಯನ್ನು ಅತಿ ಹೆಚ್ಚು ಬಾರಿ ಬಳಸಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಇಂಡಿಯಾ ಟುಡೇ ಆಂಗ್ಲ ಮಾಧ್ಯಮ ಸಂಸ್ಥೆ ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ ಉತ್ತರ ನೀಡಿರುವ ಏರ್ ಇಂಡಿಯಾ ಈ ವಿಷಯ ತಿಳಿಸಿದೆ. ನೊಬೆಲ್ ಮತ್ತು ಭಾರತ ರತ್ನ ಪ್ರಶಸ್ತಿ ಎರಡೂ ಗೌರವಕ್ಕೆ ಭಾಜನರಾಗಿರುವ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ 2015ರಿಂದ 2019ರ ಅವಧಿಯಲ್ಲಿ ಒಟ್ಟು 21 ಬಾರಿ ಈ ಉಚಿತ ಸೇವೆಯನ್ನು ಬಳಸಿಕೊಂಡಿದ್ದಾರೆ ಎಂದು ಏರ್ ಇಂಡಿಯಾ ತಿಳಿಸಿದೆ.
2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಒಕ್ಕೂಟದ ಸರ್ಕಾರ ಭಾರತ ರತ್ನದಂತಹ ಗೌರವಕ್ಕೆ ಭಾಜನರಾದವರಿಗೆ ಜೀವನಪರ್ಯಂತ ಉಚಿತ ಪ್ರಯಾಣ ಒದಗಿಸಲು ಏರ್ ಇಂಡಿಯಾ ಸಂಸ್ಥೆಗೆ ನಿರ್ದೇಶನ ನೀಡಿತ್ತು ಎಂಬ ಅಂಶವೂ ಆರ್ಟಿಐ ಅರ್ಜಿಯಿಂದ ತಿಳಿದುಬಂದಿದೆ. 25/08/2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಈ ಸೂಚನೆ ನೀಡಿದ್ದು, ಅತ್ಯಂತ ಉನ್ನತ ಗೌರವಕ್ಕೆ ಪ್ರಾಪ್ತವಾದ ವ್ಯಕ್ತಿಗಳಿಗೆ ಈ ಸೇವೆ ಒದಗಿಸಲು ತಿಳಿಸಿದ್ದರು. ಜತೆಗೆ ಪ್ರಯಾಣದಲ್ಲಿ ಅಗತ್ಯವಾದ ಇತರ ಸೇವೆಗಳನ್ನು ಸಹ ಉಚಿತವಾಗಿ ನೀಡುವಂತೆ ಸೂಚಿಸಲಾಗಿತ್ತು.
ಈ ಆದೇಶವನ್ನು ಹೊರಡಿಸುವಾಗ ಎಕನಾಮಿಕ್ ದರ್ಜೆಯ ಟಿಕೆಟ್ಗಳನ್ನು ಒದಗಿಸಲಾಗುತ್ತಿತ್ತು. ತದನಂತರ ಎಕನಾಮಿಕ್ ದರ್ಜೆಯಿಂದ ಎಕ್ಸಿಕ್ಯುಟಿವ್ ದರ್ಜೆಯ ವಿಮಾನ ಟಿಕೆಟ್ಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಪ್ರಯಾಣಕ್ಕೆ ತಗಲುವ ಎಲ್ಲ ಖರ್ಚುವೆಚ್ಚಗಳನ್ನೂ ಏರ್ ಇಂಡಿಯಾವೇ ಭರಿಸುತ್ತಿದೆ ಎಂದು ಆರ್ಟಿಐ ಅರ್ಜಿಗೆ ಉತ್ತರಿಸಲಾಗಿದೆ.
ಸದ್ಯ ಭಾರತ ರತ್ನ ಗೌರವಕ್ಕೆ ಪ್ರಾಪ್ತವಾದವರಲ್ಲಿ ಅಮರ್ತ್ಯ ಸೇನ್ ಒಬ್ಬರೇ ಈ ಉಚಿತ ಪ್ರಯಾಣ ಅವಕಾಶವನ್ನು ಉಪಯೋಗಿಸುತ್ತಿದ್ದಾರೆ. ಭಾರತ ರತ್ನ ಗೌರವಕ್ಕೆ ಭಾಜನರಾದ 48 ವ್ಯಕ್ತಿಗಳಲ್ಲಿ 14 ವ್ಯಕ್ತಿಗಳಿಗೆ ಮರಣೋತ್ತರ ಗೌರ ನೀಡಲಾಗಿದೆ ಉಳಿದ 34 ವ್ಯಕ್ತಿಗಳಲ್ಲಿ ಅಮರ್ತ್ಯ ಸೇನ್ರನ್ನೂ ಸೇರಿ ಒಟ್ಟು ನಾಲ್ವರು ಮಾತ್ರ ಬದುಕಿದ್ದಾರೆ. ಸಂಗೀತ ಕ್ಷೇತ್ರದ ಮಹಾನ್ ಸಾಧಕಿ ಲತಾ ಮಂಗೇಶ್ಕರ್, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮತ್ತು ಪ್ರೊಫೆಸರ್ ಸಿ.ಎನ್.ಆರ್.ರಾವ್ ಅವರುಗಳೇ ಇತರ ಮೂವರು. ಆದರೆ ಅಮರ್ತ್ಯ ಸೇನ್ ಮಾತ್ರ ಉಚಿತ ಪ್ರಯಾಣದ ಆಫರ್ನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಏರ್ ಇಂಡಿಯಾ ತಿಳಿಸಿದೆ.
ಇದನ್ನೂ ಓದಿ: ಕೊವಿಡ್ನಿಂದ ಬೇಗ ಗುಣಮುಖರಾಗೋದು ಹೇಗೆ?; ತಾವು ಉಪಯೋಗಿಸಿದ ತಂತ್ರ ಹೇಳಿದ ಅಭಿಷೇಕ್ ಬಚ್ಚನ್
ದೇಶ ಮತ್ತು ರಾಜ್ಯದಲ್ಲಿ ಕೊವಿಡ್ನಿಂದ ಅನಾಥರಾದ ಮಕ್ಕಳೆಷ್ಟು ಗೊತ್ತೆ? ಇಲ್ಲಿದೆ ಅಂಕಿ ಅಂಶ
(Free Air Tickets to Bharat Ratna Awardee Amartya Sen says In India in RTI)
Published On - 9:26 pm, Tue, 1 June 21