ದೇಶ ಮತ್ತು ರಾಜ್ಯದಲ್ಲಿ ಕೊವಿಡ್​ನಿಂದ ಅನಾಥರಾದ ಮಕ್ಕಳೆಷ್ಟು ಗೊತ್ತೆ? ಇಲ್ಲಿದೆ ಅಂಕಿ ಅಂಶ

ದೇಶ ಮತ್ತು ರಾಜ್ಯದಲ್ಲಿ ಕೊವಿಡ್​ನಿಂದ ಅನಾಥರಾದ ಮಕ್ಕಳೆಷ್ಟು ಗೊತ್ತೆ? ಇಲ್ಲಿದೆ ಅಂಕಿ ಅಂಶ
ಪ್ರಾತಿನಿಧಿಕ ಚಿತ್ರ

Orphaned Children Due to Covid: ಕರ್ನಾಟಕದಲ್ಲಿ ಕೊವಿಡ್​ನಿಂದ 21 ಮಕ್ಕಳು ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ. 15 ಮಕ್ಕಳು ತಂದೆ ಇಲ್ಲವೇ ತಾಯಿಯನ್ನು ಕಳೆದುಕೊಂಡಿದ್ದು, ಒಟ್ಟು 36 ಮಕ್ಕಳು ತಮ್ಮ ಪಾಲಕರನ್ನು ಕಳೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

guruganesh bhat

|

Jun 01, 2021 | 6:59 PM

ಕೊವಿಡ್ 3ನೇ ಅಲೆ ಮಕ್ಕಳಿಗೆ ಅಪಾಯಕಾರಿ ಎಂಬ ವರದಿಯ ನಡುವೆಯೇ ಈಗಾಗಲೇ ಕೊವಿಡ್​ನಿಂದ ತಮ್ಮ ತಂದೆ ತಾಯಂದಿರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಸಂಖ್ಯೆ ಬಹಿರಂಗಗೊಂಡಿದೆ. ಇಡೀ ದೇಶದಲ್ಲಿ ಈವರೆಗೆ 1,742 ಮಕ್ಕಳು ತಂದೆ ಮತ್ತು ತಾಯಂದಿರನ್ನು ಕಳೆದುಕೊಂಡಿದ್ದಾರೆ. 7,464 ಮಕ್ಕಳು ತಂದೆ ಅಥವಾ ತಾಯಿ, ಅಂದರೆ ಓರ್ವ ಪಾಲಕರನ್ನು ಕಳೆದುಕೊಂಡಿದ್ದು, 140 ಮಕ್ಕಳು ನಿರ್ಗತಿಕರಾಗಿದ್ದಾರೆ. ಈ ಮೂಲಕ ಒಟ್ಟು 9,346 ಮಕ್ಕಳು ಕೊವಿಡ್​ನಿಂದ ಅನಾಥರಾಗಿದ್ದಾರೆ ಎಂಬ ಅತ್ಯಂತ ಆಘಾತಕಾರಿ ಮಾಹಿತಿಯನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸುಪ್ರೀಂಕೋರ್ಟ್​ಗೆ ತಿಳಿಸಿದೆ.

ಕೊವಿಡ್ ಪಿಡುಗಿನಲ್ಲಿ ಮಕ್ಕಳ ರಕ್ಷಣೆಯ ಬಗ್ಗೆ ಸುಪ್ರೀಂಕೋರ್ಟ್ ದಾಖಲಿಸಿಕೊಂಡಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ಮತ್ತು ಅನಿರುದ್ಧ ಬೋಸ್ ಅವರುಗಳಿದ್ದ ಪೀಠಕ್ಕೆ ಈ ಮಾಹಿತಿ ಸಲ್ಲಿಸಲಾಗಿದೆ. ಈ ವೇಳೆ ಅಮಿಕಸ್ ಕ್ಯೂರಿ ಅವರೊಂದಿಗೆ ಅನಾಥ ಮಕ್ಕಳ ಪಾಲನೆಯ ಕುರಿತು ಚರ್ಚೆ ನಡೆಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲು ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.

ಕರ್ನಾಟಕದಲ್ಲಿ ಅನಾಥರಾದ ಮಕ್ಕಳೆಷ್ಟು? ದೇಶದ ವಿವಿಧ ರಾಜ್ಯಗಳಲ್ಲಿ ಕೊವಿಡ್​ನಿಂದ ಅನಾಥರಾದ ಮಕ್ಕಳ ವರದಿಯನ್ನು ಸುಪ್ರೀಂಕೋರ್ಟ್​ಗೆ ಸಲ್ಲಿಸಲಾಗಿದೆ. ಅಂದಹಾಗೆ ಕರ್ನಾಟಕದಲ್ಲಿ ಕೊವಿಡ್​ನಿಂದ 21 ಮಕ್ಕಳು ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ. 15 ಮಕ್ಕಳು ತಂದೆ ಇಲ್ಲವೇ ತಾಯಿಯನ್ನು ಕಳೆದುಕೊಂಡಿದ್ದು, ಒಟ್ಟು 36 ಮಕ್ಕಳು ತಮ್ಮ ಪಾಲಕರನ್ನು ಕಳೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ದೇಶದಲ್ಲಿ ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು, ಅಂದರೆ ಒಟ್ಟು 318 ಮಕ್ಕಳು ತಮ್ಮ ತಂದೆ ಮತ್ತು ತಾಯಂದಿರಿಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಓರ್ವ ಪಾಲಕರನ್ನು ಕಳೆದುಕೊಂಡ ಮಕ್ಕಳ ಸಂಖ್ಯೆ ಹೆಚ್ಚಿದ್ದು, 1830 ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದಾರೆ. ಅತಿ ಹೆಚ್ಚು ಮಕ್ಕಳು ಅನಾಥರಾದ ರಾಜ್ಯಗಳ ಪೈಕಿ ಉತ್ತರ ಪ್ರದೇಶವೇ ಮೊದಲ ಸ್ಥಾನದಲ್ಲಿದ್ದು, ಈವರೆಗೆ 2110 ಮಕ್ಕಳು ಅನಾಥರಾಗಿದ್ದಾರೆ.

ಗಂಡೆಷ್ಟು ಹೆಣ್ಣೆಷ್ಟು? ಕೊವಿಡ್​ನಿಂದ ಅನಾಥರಾದ ಮಕ್ಕಳ ಪೈಕಿ ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳ ಸಂಖ್ಯೆಯ ನಡುವೆ ಅಷ್ಟೇನೂ ಅಂತರವಿಲ್ಲ. 4,860 ಗಂಡು ಮಕ್ಕಳು ಮತ್ತು 4,486 ಹೆಣ್ಣು ಮಕ್ಕಳು ತಮ್ಮ ಪಾಲಕರನ್ನು ಕಳೆದುಕೊಂಡಿದ್ದಾರೆ.3 ವರ್ಷದ ಒಳಗಿನ 788 ಮಕ್ಕಳು, 4ರಿಂದ 7 ವರ್ಷದ ಒಳಗಿನ 1515 ಮಕ್ಕಳು, 8 ರಿಂದ 13 ವರ್ಷದ ಒಳಗಿನ 3711 ಮಕ್ಕಳು ಮತ್ತು 16ರಿಂದ 17 ವರ್ಷದ ಒಳಗಿನ 1712 ಮಕ್ಕಳು ಅನಾಥರಾಗಿದ್ದಾರೆ.

ಅನಾಥ ಮಕ್ಕಳ ವಾಸವೆಲ್ಲಿ? ಸದ್ಯ ಕೊವಿಡ್​ನಿಂದ ಅನಾಥರಾದ ಮಕ್ಕಳು ಎಲ್ಲಿ ವಾಸಿಸುತ್ತಿದ್ದಾರೆ ಎಂಬುದು ಅತ್ಯಂತ ಪ್ರಮುಖ ಸಂಗತಿ. ಬಾಲ್ ಸ್ವರಾಜ್ ಪೋರ್ಟಲ್​ನಲ್ಲಿ ನಮೂದಿಸಿರುವಂತೆ ಪಾಲಕರನ್ನು ಕಳೆದುಕೊಂಡ 275 ಮಕ್ಕಳು ತಮ್ಮ ಮನೆಗಳಲ್ಲಿ ಇತರ ಪೋಷಕರ ಆಶ್ರಯದಲ್ಲಿದ್ದು, 19 ಮಕ್ಕಳು ಸಹಾಯ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ. ಒಂದು ಮಗು ಆರೋಗ್ಯ ವೀಕ್ಷಣಾ ಕೇಂದ್ರದಲ್ಲಿದ್ದು, 38 ಮಕ್ಕಳು ಅನಾಥಾಶ್ರಮದಲ್ಲಿ ವಾಸಿಸುತ್ತಿದ್ದಾರೆ. ವಿಶೇಷ ದತ್ತು ನಿರ್ವಹಣಾ ಏಜೆನ್ಸಿಗಳು 31 ಮಕ್ಕಳಿಗೆ ಆಶ್ರಯ ನೀಡಿದ್ದು, 1221 ಮಕ್ಕಳು ತಮ್ಮ ಪೋಷಕರ ಜತೆ ಉಳಿದುಕೊಂಡಿದ್ದಾರೆ. 985 ಮಕ್ಕಳು ಕುಟುಂಬದ ಇತರ ಸದಸ್ಯರ ಜತೆ ಇದ್ದು, 6612 ಮಕ್ಕಳು ಸಿಂಗಲ್ ಪೆರೆಂಟ್​ಗಳ ಜತೆಗಿದ್ದಾರೆ.

ಇದನ್ನೂ ಓದಿ: ಕೊವಿಡ್ ತಡೆಗೆ ಮೈಸೂರಿನಲ್ಲಿ ಮತ್ತೊಂದು ಪ್ರಯೋಗ; ರಿವರ್ಸ್ ಐಸೋಲೇಷನ್​ ಮೂಲಕ ಸೋಂಕಿತರ ಕಾಳಜಿ

ಸುಪ್ರೀಂಕೋರ್ಟ್​ನಲ್ಲಿ ದೇವರಿಗೆ ಮೊರೆ, ಏಕೆ ಗೊತ್ತೆ? 

(Total 9,346 children orphaned due to covid 19 says NCPCR says to Supreme Court)

Follow us on

Related Stories

Most Read Stories

Click on your DTH Provider to Add TV9 Kannada