ದೆಹಲಿ: ಭಾರತದ ಬಹುತೇಕ ರಾಜ್ಯಗಳಲ್ಲಿ ಲಾಕ್ಡೌನ್ ಘೋಷಣೆ ಹಿನ್ನೆಲೆಯಲ್ಲಿ ಸಾಲಗಳ ಮಾಸಿಕ ಕಂತು (ಇಎಂಐ) ಮುಂದೂಡಿಕೆಗೆ ಅವಕಾಶ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿತು. ಮುಂದಿನ ಆರು ತಿಂಗಳ ಅವಧಿಗೆ ಅಥವಾ ದೇಶದಲ್ಲಿ ಕೊರೊನಾ ಪರಿಸ್ಥಿತಿ ಸುಧಾರಿಸಿ ಸಹಜಸ್ಥಿತಿ ನೆಲೆಗೊಳ್ಳುವವರೆಗೆ ಮಾರಾಟೋರಿಯಂಗೆ ಅವಕಾಶ ನೀಡಬೇಕು ಎಂದು ಅರ್ಜಿದಾರರು ವಿನಂತಿಸಿದ್ದರು.
ಇವೆಲ್ಲವೂ ಸರ್ಕಾರದ ನೀತಿಗೆ ಸಂಬಂಧಿಸಿದ ವಿಷಯಗಳು. ನಾವು ಹಣಕಾಸಿನ ವಿಷಯದಲ್ಲಿ ತಜ್ಞರಲ್ಲ. ಈ ಬಗ್ಗೆ ಈ ಮೊದಲೂ ಒಮ್ಮೆ ಆದೇಶ ನೀಡಿದ್ದೇವೆ. ಹಣಕಾಸಿನ ರಿಲೀಫ್, ಇತರೆ ಕ್ರಮಗಳು ಸರ್ಕಾರದ ವ್ಯಾಪ್ತಿಯಲ್ಲಿವೆ. ಹೀಗಾಗಿ ಭಾರತ ಸರ್ಕಾರವೇ ಪರಿಸ್ಥಿತಿ ಅವಲೋಕಿಸಿ ಸೂಕ್ತ ಆದೇಶ ಹೊರಡಿಸಲಿ ಎಂದು ಹೇಳಿತು.
ಮೊರಾಟೊರಿಯಂ ಕುರಿತು ಸುಪ್ರೀಂಕೋರ್ಟ್ ಯಾವುದೇ ನಿರ್ದೇಶನ ನೀಡುವುದಿಲ್ಲ ಎನ್ನುವ ಮೂಲಕ ಈ ವರ್ಷವೂ ಸಾಲ ಪಾವತಿಗೆ ಹೆಚ್ಚಿನ ಅವಧಿ ನೀಡುವ ಮಾರಾಟೊರಿಯಂ ಘೋಷಿಸಿ ಸುಪ್ರೀಂಕೋರ್ಟ್ ತನ್ನ ನಿಲುವು ವ್ಯಕ್ತಪಡಿಸಿತು. ಮೊರಾಟೊರಿಯಂ ಘೋಷಿಸುವ ಕುರಿತು ಕೇಂದ್ರ ಸರ್ಕಾರ ಈಗ ತನ್ನ ತೀರ್ಮಾನ ಪ್ರಕಟಿಸಬೇಕಿದೆ.
ಕಳೆದ ವರ್ಷ ಕೇಂದ್ರ ಸರ್ಕಾರವು ದೇಶವ್ಯಾಪಿ ಲಾಕ್ಡೌನ್ ಘೋಷಿಸಿದ ನಂತರ ರಿಸರ್ವ್ ಬ್ಯಾಂಕ್ ಸಾಲ ಮರುಪಾವತಿಗೆ ಅವಧಿ ರಿಯಾಯ್ತಿ ನೀಡುವ ಮೊರಾಟೊರಿಯಂ ಘೋಷಿಸಿತ್ತು. ಗೃಹ ಸಾಲ ಸೇರಿದಂತೆ ಎಲ್ಲ ರೀತಿಯ ಸಾಲಗಳ ಮರುಪಾವತಿಗೆ ಕಾಲಾವಕಾಶ ನೀಡಲಾಗಿತ್ತು. ಈ ವರ್ಷವು ಇಂಥದ್ದೋ ಅವಕಾಶ ನೀಡಬೇಕೆಂದು ಬೇಡಿಕೆ ವ್ಯಕ್ತವಾಗುತ್ತಿದೆ. ಸುಪ್ರೀಂಕೋರ್ಟ್ ಅಂಗಳದಿಂದ ಚೆಂಡು ಈಗ ಕೇಂದ್ರ ಸರ್ಕಾರದ ಅಂಗಳಕ್ಕೆ ಬಿದ್ದಿದೆ. ಕೇಂದ್ರ ಸರ್ಕಾರ ತೆಗೆದುಕೊಳ್ಳುವ ತೀರ್ಮಾನದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.
(Fresh Loan Moratorium Request Rejected by Supreme Court Govt of India have to decide now)
Published On - 10:28 pm, Fri, 11 June 21