Pegasus Spyware: ನ್ಯೂಯಾರ್ಕ್ ಟೈಮ್ಸ್ ವರದಿ ಬೆನ್ನಲ್ಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ವಕೀಲ; ಎಫ್ಐಆರ್ ದಾಖಲಿಸಲು ಆಗ್ರಹ
ನಿನ್ನೆ ನ್ಯೂಯಾರ್ಕ್ ಟೈಮ್ಸ್ ವರದಿಯೊಂದನ್ನು ಮಾಡಿದೆ. The Battle for the World’s Most Powerful Cyberweapon ಎಂಬ ಹೆಡ್ಲೈನ್ನಲ್ಲಿ ವರದಿ ಪ್ರಕಟಿಸಿದೆ. 2017ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಸ್ರೇಲ್ಗೆ ಭೇಟಿ ಕೊಟ್ಟಿದ್ದ ವೇಳೆ ನಡೆದ ಒಪ್ಪಂದದ ಭಾಗವಾಗಿ ಪೆಗಾಸಸ್ ಸ್ಪೈವೇರ್ ಖರೀದಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
2017ರಲ್ಲಿ ಕೇಂದ್ರ ಸರ್ಕಾರ ಇಸ್ರೇಲ್ನೊಂದಿಗೆ ಮಾಡಿಕೊಂಡ ಒಂದು ಆಧುನಿಕ ಶಸ್ತ್ರಾಸ್ತ್ರಗಳ ಒಪ್ಪಂದದ ಭಾಗವಾಗಿ ಪೆಗಾಸಸ್ ಸ್ಪೈವೇರ್ (Pegasus spyware)ನ್ನು ಖರೀದಿ ಮಾಡಿತ್ತು ಎಂದು ನಿನ್ನೆ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ ಬೆನ್ನಲ್ಲೇ, ಹಿರಿಯ ವಕೀಲರೊಬ್ಬರು ಸುಪ್ರೀಂಕೋರ್ಟ್ಗೆ ಹೊಸದಾಗಿ ಅರ್ಜಿ ಸಲ್ಲಿಸಿ, ಈ ವಿಚಾರವನ್ನು ಸುಪ್ರೀಂಕೋರ್ಟ್ ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಹೇಳಿದ್ದಾರೆ. ಅಂದಹಾಗೇ, ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಹಿರಿಯ ವಕೀಲರ ಹೆಸರು ಎಂ.ಎಲ್. ಶರ್ಮಾ ಎಂದಾಗಿದ್ದು, ಪೆಗಾಸಸ್ ಸ್ಪೈವೇರ್ ಖರೀದಿಯಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳು, ಆಡಳಿತಗಳ ವಿರುದ್ಧ ಕೂಡಲೇ ಎಫ್ಐಆರ್ ದಾಖಲು ಮಾಡಬೇಕು. ತನಿಖೆಯೂ ಪ್ರಾರಂಭವಾಗಬೇಕು ಎಂದೂ ಆಗ್ರಹಿಸಿದ್ದಾರೆ.
ಈ ಪೆಗಾಸಸ್ ಸ್ಪೈವೇರ್ 2021ರಲ್ಲಿ ಭರ್ಜರಿ ಸುದ್ದಿ ಮಾಡಿತ್ತು. ಭಾರತದಲ್ಲಿ ಇಸ್ರೇಲಿ ಮೂಲದ ಪೆಗಾಸಸ್ ಬಳಸಿ, ರಾಜಕಾರಣಿಗಳು, ಪತ್ರಕರ್ತರು, ಮತ್ತಿತರ ಗಣ್ಯರೆಲ್ಲ ಸೇರಿ 300ಕ್ಕೂ ಹೆಚ್ಚು ಜನರ ಫೋನ್ ಟ್ಯಾಪ್ ಮಾಡಲಾಗಿದೆ ಎಂದು ದಿ ವೈರ್ ಪ್ರಕಟಿಸಿತ್ತು. ಹಾಗೇ ಬಹುಮುಖ್ಯವಾಗಿ ಯಾರೆಲ್ಲರ ಫೋನ್ ಟ್ಯಾಪ್ ಆಗಿದೆ ಎಂಬ ಹೆಸರುಗಳನ್ನೂ ಬಹಿರಂಗಪಡಿಸಲಾಗಿತ್ತು. ಅದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಸೇರಿ ಅನೇಕರ ಹೆಸರುಗಳು ಇದ್ದವು. ಪೆಗಾಸಸ್ ಸ್ನೂಪಿಂಗ್ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್ನಿಂದ ಸಮಿತಿ ರಚಿಸಲಾಗಿದ್ದು, ತನಿಖೆ ನಡೆಯುತ್ತಲೂ ಇದೆ.
ಇದೆಲ್ಲದರ ಮಧ್ಯೆ ನಿನ್ನೆ ನ್ಯೂಯಾರ್ಕ್ ಟೈಮ್ಸ್ ವರದಿಯೊಂದನ್ನು ಮಾಡಿದೆ. The Battle for the World’s Most Powerful Cyberweapon ಎಂಬ ಹೆಡ್ಲೈನ್ನಲ್ಲಿ ವರದಿ ಪ್ರಕಟಿಸಿದೆ. 2017ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಸ್ರೇಲ್ಗೆ ಭೇಟಿ ಕೊಟ್ಟಿದ್ದರು. ಇಸ್ರೇಲ್ಗೆ ಭೇಟಿ ನೀಡಿದ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಎಂಬ ಹೆಗ್ಗಳಿಕೆಯೊಂದಿಗೆ ಇತಿಹಾಸ ಸೃಷ್ಟಿಸಿದರು. ಇದೇ ಭೇಟಿ ವೇಳೆ ಭಾರತ -ಇಸ್ರೇಲ್ ನಡುವೆ 2 ಬಿಲಿಯನ್ ಯುಎಸ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದ ನಡೆಯಿತು. ಅದಕ್ಕೆ ಎರಡೂ ದೇಶಗಳು ಸಹಿ ಹಾಕಿದವು. ಇದೇ ವೇಳೆ ಪೆಗಾಸಸ್ ಸ್ಪೈವೇರ್ನ್ನು ಕೂಡ ಭಾರತದ ಕೇಂದ್ರ ಸರ್ಕಾರ ಇಸ್ರೇಲ್ನಿಂದ ಖರೀದಿ ಮಾಡಿದೆ. ಈ ಸ್ಪೈವೇರ್ನ್ನು ಎನ್ಎಸ್ಒ ಎಂಬ ಇಸ್ರೇಲ್ ಸಂಸ್ಥೆ ಉತ್ಪಾದಿಸಿದ್ದು, ಇದು ಮಿಲಿಟರಿ ದರ್ಜೆಯ ಸಾಫ್ಟ್ವೇರ್ ಆಗಿದೆ ಎಂದು ವಿವರಿಸಿದೆ.
ಪೆಗಾಸಸ್ ಬಗ್ಗೆ ಹೀಗೊಂದು ವರದಿ ಹೊರಬೀಳುತ್ತಿದ್ದಂತೆ ಪ್ರತಿಪಕ್ಷಗಳೂ ಕೂಡ ಮತ್ತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಿಡಿಕಾರುತ್ತಿವೆ. ನಿನ್ನೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಸೇರಿ ಅನೇಕರು ಟ್ವೀಟ್ ಮಾಡಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶದ್ರೋಹವನ್ನು ಎಸಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಕನ್ನಡಿಗನ ಕಥೆಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್? ಅಕ್ಕಿ ಪಾಲಿಗೆ ಮತ್ತೊಂದು ಬಯೋಪಿಕ್