ಇಂಫಾಲ್: ಮಣಿಪುರದ ಇಂಫಾಲ್ (Imphal) ಪಶ್ಚಿಮ ಜಿಲ್ಲೆಯಲ್ಲಿ ಎರಡು ಸಶಸ್ತ್ರ ಗುಂಪುಗಳ ನಡುವೆ ಸೋಮವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ (violence) ಮೂವರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ಕಾಂಗ್‌ಚುಪ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಗಾಯಗೊಂಡವರನ್ನು ಇಂಫಾಲ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಕ್ಚಿಂಗ್ ಜಿಲ್ಲೆಯ ಸೆರೋದಲ್ಲಿ ಎರಡು ಗುಂಪುಗಳ ನಡುವಿನ ಗುಂಡಿನ ಚಕಮಕಿಯಲ್ಲಿ ನಾಲ್ಕು ಜನರು ಗಾಯಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಹುಸಂಖ್ಯಾತ ಮೈತೇಯಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸರಕಾರ ನಿರ್ಧಾರ ಕೈಗೊಂಡಿದ್ದನ್ನು ವಿರೋಧಿಸಿ ಕುಕಿ ಸೇರಿದಂತೆ ಕೆಲ ಬುಡಕಟ್ಟು ಸಮುದಾಯಗಳ ಸದಸ್ಯರು ನಡೆಸಿದ ಪ್ರತಿಭಟನೆ ಕಳೆದ ವಾರ ಹಿಂಸಾಚಾರಕ್ಕೆ ತಿರುಗಿತ್ತು. ಹಲವು ದಿನಗಳ ಕಾಲ ಮಣಿಪುರ ಹೊತ್ತಿ ಉರಿದಿತ್ತು. ಹಿಂಸಾಚಾರದಲ್ಲಿ 80ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
ಇದನ್ನೂ ಓದಿ: Manipur violence: ಮಣಿಪುರ ಹಿಂಸಾಚಾರ, ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಿದ ಕೇಂದ್ರ ಸರ್ಕಾರ
ಜೂನ್ 1 ರಂದು ಮಣಿಪುರಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸರಣಿ ಭದ್ರತಾ ಸಭೆಗಳು ಹಾಗೂ ಕುಕಿ ಮತ್ತು ಮೈತೇಯಿ ಸಮುದಾಯಗಳ ಮುಖಂಡರ ನಡುವೆ ಸಂಧಾನ ಸಭೆಗಳನ್ನು ನಡೆಸಿದ್ದರು. ಸಭೆಗಳ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಅಮಿತ್ ಶಾ, ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆ, ಕಾನೂನು ಸುವ್ಯವಸ್ಥೆ ಪಾಲನೆ ಸರಕಾರದ ಪ್ರಮುಖ ಆದ್ಯತೆಯಾಗಿದೆ. ಜನಾಂಗೀಯ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸದ್ಯದಲ್ಲೇ ಸಮಿತಿ ರಚಿಸಲಾಗುವುದು ಎಂದು ಹೇಳಿದ್ದರು.
ಈ ಎಲ್ಲ ಬೆಳವಣಿಗೆಗಳ ನಂತರ ಇದೀಗ ಮತ್ತೆ ಹಿಂಸಾಚಾರ ನಡೆದಿರುವುದು ಆತಂಕ ಸೃಷ್ಟಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:25 pm, Mon, 5 June 23