ಒಡಿಶಾ ರೈಲು ದುರಂತ; 26/11ರ ದಾಳಿ ವೇಳೆ ಮುಂಬೈ ತಲುಪಲು 10 ಗಂಟೆ ತೆಗೆದುಕೊಂಡಿದ್ದ ಎನ್ಎಸ್ಜಿ, ಕಾಂಗ್ರೆಸ್ಗೆ ಹರ್ದೀಪ್ ತಿರುಗೇಟು
26/11 ರ ಭಯೋತ್ಪಾದಕ ದಾಳಿ ನಡೆದಿದ್ದಾಗ ಮುಂಬೈ ತಲುಪಲು ಎನ್ಎಸ್ಜಿಗೆ 10 ಗಂಟೆಗಳಿಗೂ ಹೆಚ್ಚು ಸಮಯ ಬೇಕಾಗಿತ್ತು. ಆದರೆ, ಬಾಲಸೋರ್‌ನಲ್ಲಿ ರೈಲು ಅಪಘಾತ ಸಂಭವಿಸಿದ ನಂತರ ಮೂವರು ಸಚಿವರು ಮಾತ್ರವಲ್ಲದೆ ಪ್ರಧಾನಿ ಕೂಡ ಘಟನಾ ಸ್ಥಳಕ್ಕೆ ತೆರಳಿದ್ದಾರೆ ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ನವದೆಹಲಿ: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ದುರಂತಕ್ಕೆ (Odisha Train Accident) ಸಂಬಂಧಿಸಿದಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ವಾಗ್ದಾಳಿ ನಡೆಸಿದ್ದಾರೆ. ದುರಂತದ ಹೊಣೆ ಹೊತ್ತು ಅಶ್ವಿನಿ ವೈಷ್ಣವ್ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಭಾನುವಾರ ಆಗ್ರಹಿಸಿತ್ತು. ಜತೆಗೆ, ಭಾರತೀಯ ರೈಲ್ವೆಯ ಮೂಲಸೌಕರ್ಯವನ್ನು ಸರ್ಕಾರ ನಿರ್ಲಕ್ಷಿಸಿದ್ದು, ಇದರ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೂ ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿತ್ತು.
ಇಂತಹ ದುರಂತದ ಹೊಣೆಗಾರಿಕೆಯಿಂದ ಮೋದಿ ಸರ್ಕಾರ ನುಣುಚಿಕೊಳ್ಳುವಂತಿಲ್ಲ. ಪ್ರಧಾನಿಯವರು ಕೂಡಲೇ ರೈಲ್ವೇ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹರ್ದೀಪ್ ಸಿಂಗ್ ಪುರಿ, ಘಟನಾ ಸ್ಥಳಕ್ಕೆ ಧಾವಿಸಿ 36 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ವ್ಯಕ್ತಿಯ ರಾಜೀನಾಮೆ ಪಡೆಯಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, 26/11ರ ಮುಂಬೈ ದಾಳಿಯ ಸಂದರ್ಭ ಸರ್ಕಾರ ಕೈಗೊಂಡಿದ್ದ ಕ್ರಮಗಳ ಜತೆ ಹೋಲಿಕೆ ಮಾಡಿದ್ದಾರೆ.
26/11 ರ ಭಯೋತ್ಪಾದಕ ದಾಳಿ ನಡೆದಿದ್ದಾಗ ಮುಂಬೈ ತಲುಪಲು ಎನ್ಎಸ್ಜಿಗೆ 10 ಗಂಟೆಗಳಿಗೂ ಹೆಚ್ಚು ಸಮಯ ಬೇಕಾಗಿತ್ತು. ಆದರೆ, ಬಾಲಸೋರ್‌ನಲ್ಲಿ ರೈಲು ಅಪಘಾತ ಸಂಭವಿಸಿದ ನಂತರ ಮೂವರು ಸಚಿವರು ಮಾತ್ರವಲ್ಲದೆ ಪ್ರಧಾನಿ ಕೂಡ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಭೀಕರ ದುರಂತ ಸಂಭವಿಸಿದ 51 ಗಟೆಗಳ ಒಳಗಾಗಿ ಹಳಿ ದುರಸ್ತಿ ಕಾರ್ಯವೂ ಮುಗಿದಿದ್ದು, ರೈಲು ಸಂಚಾರ ಆರಂಭಗೊಂಡಿದೆ ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
A little correction. It took the NSG more than 10 hours to reach Mumbai in response to the dastardly 26/11 terrorist attack.@ANI @PIB_India @PIBHomeAffairs https://t.co/ucXjdvjPD9
— Hardeep Singh Puri (@HardeepSPuri) June 5, 2023
ಇದನ್ನೂ ಓದಿ: Odisha Train Accident: ಒಡಿಶಾ ರೈಲು ದುರಂತ; ದೇವರಂತೆಯೇ ಬಂದು ಸುಮಾರು 300 ಜನರ ರಕ್ಷಣೆಗೆ ಕಾರಣನಾದ ಸ್ಥಳೀಯ ವ್ಯಕ್ತಿ
ಒಂದು ದೊಡ್ಡ ಅಪಘಾತದ ನಂತರ ದೇಶವು ಇನ್ನೂ ಸಾವು-ನೋವಿನ ದುಃಖದಿಂದ ಹೊರಬರದ ಈ ಸಮಯದಲ್ಲಿ, ಕೆಲವು ರಾಜಕೀಯ ಪಕ್ಷಗಳು ಮಾನವ ದುರಂತದಿಂದ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿವೆ. ಇನ್ನು ಕೆಲವರು ವಿದೇಶಿ ನೆಲದಿಂದ ಭಾರತದ ವಿರುದ್ಧ ವಿಫಲ ಅಭಿಯಾನವನ್ನು ಆಯೋಜಿಸುವಲ್ಲಿ ನಿರತರಾಗಿದ್ದಾರೆ ಎಂದು ಪುರಿ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ