Odisha Train Accident: ಒಡಿಶಾ ರೈಲು ದುರಂತ; ದೇವರಂತೆಯೇ ಬಂದು ಸುಮಾರು 300 ಜನರ ರಕ್ಷಣೆಗೆ ಕಾರಣನಾದ ಸ್ಥಳೀಯ ವ್ಯಕ್ತಿ

ಅಪಘಾತ ಸಂಭವಿಸಿದ ಕ್ಷಣಮಾತ್ರದಲ್ಲಿ ಸ್ಥಳಕ್ಕೆ ಧಾವಿಸಿ ಸುಮಾರು 200 - 300 ಜನರ ಜೀವ ಉಳಿಸಲು ಕಾರಣವಾಗಿದ್ದಾರೆ ಸ್ಥಳೀಯ ನಿವಾಸಿ ಗಣೇಶ್. ಇವರ ಸಾಹಸಕ್ಕೆ ಇದೀಗ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Odisha Train Accident: ಒಡಿಶಾ ರೈಲು ದುರಂತ; ದೇವರಂತೆಯೇ ಬಂದು ಸುಮಾರು 300 ಜನರ ರಕ್ಷಣೆಗೆ ಕಾರಣನಾದ ಸ್ಥಳೀಯ ವ್ಯಕ್ತಿ
ಗಣೇಶ್Image Credit source: ANI
Follow us
|

Updated on:Jun 03, 2023 | 1:34 PM

ಬಾಲಸೋರ್: ಒಡಿಶಾದ ಬಾಲಸೋರ್ ಬಳಿ ಸಂಭವಿಸಿದ ಭೀಕರ ರೈಲು ಅಪಘಾತ(Odisha Train Accident) ಸುದ್ದಿ ಕೇಳಿ ದೇಶವೇ ಬೆಚ್ಚಿಬಿದ್ದಿದೆ, ಮೌನವಾಗಿದೆ. ಜನರ ಕಣ್ಣುಗಳು ತೇವಗೊಂಡಿವೆ. ಎಲ್ಲಿಗೋ ಹೊರಟು ಆಸ್ಪತ್ರೆ ಸೇರಿದವರು ಒಂದು ಕಡೆಯಾದರೆ, ನೆಚ್ಚಿನವರನ್ನು ಕಾಣಲೆಂದೋ, ಕಾರ್ಯನಿಮಿತ್ತವೋ ಪ್ರಯಾಣ ಆರಂಭಿಸಿದ ಅನೇಕರು ಮರಳಿ ಬಾರದ ಲೋಕಕ್ಕೆ ಹೋಗಿದ್ದಾರೆ. ಇನ್ನೇನಿದ್ದರೂ ಅವರ ವಿರೂಪಗೊಂಡ ಮೃತ ದೇಹಗಳಷ್ಟೇ ಗಮ್ಯ ತಲುಪಬೇಕು. ಅಪಘಾತದಲ್ಲಿ 250ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದು, 900ಕ್ಕೂ ಹೆಚ್ಚು ಜನರು ಇನ್ನೂ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಅಪಘಾತದ ಸ್ಥಳಕ್ಕೆ ಧಾವಿಸಿದ ಎಲ್ಲರಲ್ಲಿಯೂ ಇದ್ದುದು ಒಂದೇ ಧ್ಯೇಯ. ಪ್ರತಿಯೊಂದು ಜೀವವನ್ನೂ ಉಳಿಸಬೇಕು, ಸಾವಿನ ಸಂಖ್ಯೆ ಹೆಚ್ಚಾಗಬಾರದು ಎಂಬುದು. ಈ ಮಧ್ಯೆ, ಅಪಘಾತ ಸಂಭವಿಸಿದ ಕ್ಷಣಮಾತ್ರದಲ್ಲಿ ಸ್ಥಳಕ್ಕೆ ಧಾವಿಸಿ ಸುಮಾರು 200 – 300 ಜನರ ಜೀವ ಉಳಿಸಲು ಕಾರಣವಾಗಿದ್ದಾರೆ ಸ್ಥಳೀಯ ನಿವಾಸಿ ಗಣೇಶ್. ಇವರ ಸಾಹಸಕ್ಕೆ ಇದೀಗ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: Train Accident: ವಾಶ್​​ ರೂಂಗೆ ಹೋಗಿದ್ದರಿಂದ ಉಳಿಯಿತು ಪ್ರಾಣ, ಕಾಣಿಸಿತು ಮೃತದೇಹಗಳ ರಾಶಿ; ಪ್ರತ್ಯಕ್ಷದರ್ಶಿಗಳ ಭಯಾನಕ ಅನುಭವ

ಘಟನಾ ಸ್ಥಳದ ಸಮೀಪವೇ ಗಣೇಶ್ ಎಂಬ ವ್ಯಕ್ತಿ ಇದ್ದರು. ಮೊದಲಿಗೆ ಭಯಂಕರವಾದ ಶಬ್ದವು ಕೇಳಿ ಕೈಕಾಲುಗಳು ನಡುಗಿದವು. ಇದಾದ ನಂತರ ದೊಡ್ಡ ಅಪಘಾತ ಸಂಭವಿಸಿದೆ ಎಂದು ಅರ್ಥವಾಯಿತು. ಓಡಿಕೊಂಡು ಘಟನಾ ಸ್ಥಳಕ್ಕೆ ತಲುಪಿದಾಗ ಕೆಲಕಾಲ ಎಲ್ಲಿಗೆ ಹೋಗಬೇಕು, ಯಾರಿಗೆ ಸಹಾಯ ಮಾಡಬೇಕೆಂದು ಎಂಬುದೇ ಅರ್ಥವಾಗಲಿಲ್ಲ. ಎಲ್ಲೆಲ್ಲೂ ಮಂಜು ಕವಿದಿತ್ತು. ರಕ್ತದ ಓಕುಳಿ ಹರಿದಿತ್ತು. ಅಲ್ಲಿ ಜನರು ನರಳುತ್ತಿದ್ದರು. ತಡ ಮಾಡದೆ ಬೋಗಿಯೊಂದಕ್ಕೆ ನುಗ್ಗಿ ಜನರನ್ನು ಹೊರತರಲು ಆರಂಭಿಸಿದೆ. ಸಿಕ್ಕಿಬಿದ್ದವರನ್ನು ಹೇಗೋ ಹೊರಗೆ ತರಲಾಯಿತು ಎಂದು ಗಣೇಶ್ ತಿಳಿಸಿದ್ದಾರೆ.

ಇದನ್ನೂ ಓದಿ: Odisha Train Accident: ಒಡಿಶಾ ರೈಲು ದುರಂತ; ಗಾಯಾಳುಗಳಿಗಾಗಿ ಮಿಡಿದ ಹೃದಯಗಳು, ರಕ್ತ ನೀಡಲು ಮುಂದೆ ಬಂದ ಸಾಲು ಸಾಲು ಜನ

ಅಷ್ಟರಲ್ಲಾಗಲೇ ಇನ್ನೂ ಅನೇಕರು ಬಂದರು. ಎಲ್ಲರೂ ರಕ್ಷಣೆಗೆ ಕೈಜೋಡಿಸಿದರು ಎಂದು ಅವರು ಹೇಳಿದ್ದಾರೆ. ಈ ಮೂಲಕ ಗಣೇಶ್ ಅವರು 200-300 ಜನರ ಪ್ರಾಣ ರಕ್ಷಣೆಗೆ ನೆರವಾಗಿದ್ದಾರೆ ಎಂದು ಎಎನ್​​ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ಈ ಮಧ್ಯೆ, ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ರಕ್ತದ ಅಗತ್ಯವಿದ್ದು, ರಕ್ತ ನೀಡಲು ಜನ ಸಾಲು ಸಾಲಾಗಿ ಮುಂದೆ ಬಂದಿದ್ದಾರೆ. ಈ ಮೂಲಕ ನೋವಿನಲ್ಲೂ ಮಾನವೀಯತೆ ಮೆರೆದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:33 pm, Sat, 3 June 23