ಮೊಲ್ನುಪಿರಾವಿರ್ ಮಾತ್ರೆಗಳಿಂದ ಕೊವಿಡ್​ ಸೋಂಕಿತರಿಗೆ ಚಿಕಿತ್ಸೆ ನೀಡಲು 2000-3000 ರೂ.ವೆಚ್ಚವಾಗಬಹುದು

| Updated By: Lakshmi Hegde

Updated on: Dec 30, 2021 | 12:07 PM

ಯುಎಸ್​ ಮೂಲದ ಬಯೋಟೆಕ್ನಾಲಜಿ ಕಂಪನಿ ರೆಡ್ಜ್​ಬ್ಯಾಕ್​ ಬಯೋಥೆರಪಿಟಿಕ್ಸ್​ ಕಂಪನಿಯು ಯುಎಸ್ ಫಾರ್ಮಾ ದೈತ್ಯ ಮೆರ್ಕ್​ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದ  ಈ ಮೊಲ್ನುಪಿರಾವಿರ್ ಆ್ಯಂಟಿವೈರಲ್​ ಮಾತ್ರೆಯನ್ನು ಸದ್ಯ ಭಾರತದ 13 ಕಂಪನಿಗಳು ತಯಾರಿಸುತ್ತಿವೆ.

ಮೊಲ್ನುಪಿರಾವಿರ್ ಮಾತ್ರೆಗಳಿಂದ ಕೊವಿಡ್​ ಸೋಂಕಿತರಿಗೆ ಚಿಕಿತ್ಸೆ ನೀಡಲು 2000-3000 ರೂ.ವೆಚ್ಚವಾಗಬಹುದು
ಮೊಲ್ನುಪಿರಾವಿರ್
Follow us on

ಕೊವಿಡ್​ 19 ಚಿಕಿತ್ಸೆ ಬಳಕೆಗೆ ಇತ್ತೀಚೆಗಷ್ಟೇ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (DCGI)ದ ಅನುಮೋದನೆ ಪಡೆದಿರುವ ಆ್ಯಂಟಿ ವೈರಲ್​ ಮಾತ್ರೆ ಮೊಲ್ನುಪಿರಾವಿರ್ (Molnupiravir)​ನಿಂದಲೇ ಒಬ್ಬ ಕೊವಿಡ್​ 19 ಸೋಂಕಿತನಿಗೆ ಚಿಕಿತ್ಸೆ ನೀಡಬೇಕು ಎಂದರೆ, ಒಟ್ಟಾರೆ 2000 ರೂ.ದಿಂದ 3000 ರೂ.ವರೆಗೆ ಖರ್ಚು ಬರುತ್ತದೆ ಎಂದು ಹೇಳಲಾಗಿದೆ. ಈ ಮಾತ್ರೆಯನ್ನು ಅಭಿವೃದ್ಧಿಪಡಿಸಿದ ಮೆರ್ಕ್​ ಕಂಪನಿ,  ವಿಶ್ವಬ್ಯಾಂಕ್​ ದೇಶಗಳ ಆದಾಯ ಮಾನದಂಡಗ ಆಧಾರದ ಮೇಲೆ, ಶ್ರೇಣೀಕೃತ ಬೆಲೆಯನ್ನು ಜಾರಿಗೆ ತರಲು ಯೋಜಿಸಿರುವುದಾಗಿ ಹೇಳಿತ್ತು. ಪ್ರಪಂಚದ ಪ್ರತಿ ಪ್ರದೇಶಕ್ಕೂ ಔಷಧವನ್ನು ತಲುಪಿಸುವುದು ನಮ್ಮ ಉದ್ದೇಶ. ಹೀಗಾಗಿ ಸಂಬಂಧಪಟ್ಟ ಜನರಿಕ್​ ಔಷಧ ತಯಾರಕರೊಟ್ಟಿಗೆ ಪರವಾನಗಿ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದೂ ತಿಳಿಸಿತ್ತು. 

ಯುಎಸ್​ ಮೂಲದ ಬಯೋಟೆಕ್ನಾಲಜಿ ಕಂಪನಿ ರೆಡ್ಜ್​ಬ್ಯಾಕ್​ ಬಯೋಥೆರಪಿಟಿಕ್ಸ್​ ಕಂಪನಿಯು ಯುಎಸ್ ಫಾರ್ಮಾ ದೈತ್ಯ ಮೆರ್ಕ್​ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದ  ಈ ಮೊಲ್ನುಪಿರಾವಿರ್ ಆ್ಯಂಟಿವೈರಲ್​ ಮಾತ್ರೆಯನ್ನು ಸದ್ಯ ಭಾರತದ ಟೊರೆಂಟ್​, ಸಿಪ್ಲಾ, ಸನ್ ಫಾರ್ಮಾ, ಡಾ. ರೆಡ್ಡೀಸ್, ನ್ಯಾಟ್ಕೋ, ಮೈಲಾನ್, ಹೆಟೆರೊ, ಆಪ್ಟಿಮಸ್ ಸೇರಿ ಒಟ್ಟು 13 ಪ್ರಮುಖ ಔಷಧ ಕಂಪನಿಗಳು ತಯಾರಿಸುತ್ತಿವೆ. ಸದ್ಯ ಈ ಮಾತ್ರೆಯನ್ನು 18ವರ್ಷ ಮೇಲ್ಪಟ್ಟ, ಕೊವಿಡ್​ 19 ಸೋಂಕಿತರ ಚಿಕಿತ್ಸೆಗೆ ಮಾತ್ರ ಬಳಕೆ ಮಾಡಬಹುದು ಎಂದು ಡಿಸಿಜಿಐ ಹೇಳಿದ್ದು, 18 ವರ್ಷದ ಕೆಳಗಿನವರಿಗೆ ಚಿಕಿತ್ಸೆ ನೀಡುವಂತಿಲ್ಲ. ಕೊವಿಡ್​ 19 ಸೋಂಕಿನಿಂದ ಬಳಲುತ್ತಿರುವವರು ಐದು ದಿನಗಳ ಕಾಲ ಎರಡು ಹೊತ್ತೂ, 800 ಮಿಲಿಗ್ರಾಂನಷ್ಟು ಈ ಔಷಧ ತೆಗೆದುಕೊಳ್ಳಬೇಕು ಎಂಬುದು ವೈದ್ಯರ ಶಿಫಾರಸ್ಸು. ಚಿಕಿತ್ಸೆ ಸಂದರ್ಭದಲ್ಲಿ ಒಬ್ಬ ರೋಗಿ 40 ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಮಾತ್ರೆ ತಯಾರಕ ಕಂಪನಿಗಳು 200 ಮಿಲಿಗ್ರಾಂ ಮಾತ್ರೆಗಳನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸುತ್ತಿವೆ.  ಆದರೆ ಈ ಮಾತ್ರೆಯನ್ನು  5 ದಿನಗಳಿಗಿಂತ ಹೆಚ್ಚಿನ ದಿನ ತೆಗೆದುಕೊಳ್ಳುವಂತಿಲ್ಲ. ಹಾಗೇ, ಕೊರೊನಾ ಗಂಭೀರವಾಗಿದ್ದು, ಆಸ್ಪತ್ರೆ ಸೇರಲೇಬೇಕಾದವರು ಈ ಮಾತ್ರೆ ತೆಗೆದುಕೊಳ್ಳುತ್ತ ಸಮಯ ಹಾಳು ಮಾಡುವಂತಿಲ್ಲ. ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂದೂ ವೈದ್ಯರು ತಿಳಿಸಿದ್ದಾರೆ.

ಅಮೆರಿಕ ಔಷಧ ಕಂಪನಿಯ ಈ ಮಾತ್ರೆಯನ್ನು ಭಾರತದಲ್ಲೂ ಬಳಕೆ ಮಾಡಲು ಇತ್ತೀಚೆಗೆಷ್ಟೇ ಅನುಮೋದನೆ ದೊರೆತಿದೆ. ಇದರೊಂದಿಗೆ ಕಾರ್ಬೆವ್ಯಾಕ್ಸ್ ಮತ್ತು ಕೊವಾವ್ಯಾಕ್ಸ್ ಕೊವಿಡ್​ 19 ಲಸಿಕೆಗಳ ತುರ್ತು ಬಳಕೆಗೂ ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟಿದೆ. ಈ ಮಾತ್ರೆಗಳು ಮನುಷ್ಯನ ದೇಹ ಹೊಕ್ಕಿರುವ ಕೊವಿಡ್​ 19 ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಿ, ರೋಗದ ಗಂಭೀರತೆ ಹೆಚ್ಚುವುದನ್ನು ತಪ್ಪಿಸುತ್ತವೆ. ಈ ಮೂಲಕ ಆಸ್ಪತ್ರೆಗ ಸೇರುವ ಪ್ರಮಾಣವನ್ನೂ ಕಡಿಮೆ ಮಾಡುತ್ತವೆ ಎಂದು ಹೇಳಲಾಗಿದೆ.

ಇದನ್ನೂ ಓದಿ:  ಏರ್​​ಪೋರ್ಟ್​​ನಲ್ಲಿ ಚೆಕಿಂಗ್ ವೇಳೆ 40 ಲಕ್ಷದ ವಾಚ್ ತೆಗೆಯಲು ಪ್ರಯಾಣಿಕನ ಕಿರಿಕ್: ಮುಂದೇನಾಯ್ತು?

Published On - 12:06 pm, Thu, 30 December 21