‘ಒಮಿಕ್ರಾನ್ ಗಂಭೀರವಾದ ಸೋಂಕಲ್ಲ, ಆದರೆ…’: ದೇಶದ ಜನರಿಗೆ ಮಹತ್ವದ ಮಾಹಿತಿ ನೀಡಿದ ಡಾ ರಣದೀಪ್ ಗುಲೇರಿಯಾ
Dr Randeep Guleria: AIIMS ದೆಹಲಿಯ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಹೊಸ ವರ್ಷಾಚರಣೆಗೂ ಮುನ್ನ ದೇಶದ ಜನರಿಗೆ ಮಹತ್ವದ ಸಂದೇಶ ನೀಡಿದ್ದಾರೆ. ವಿಡಿಯೋ ಮೂಲಕ ಅವರು ಸಂದೇಶ ನೀಡಿದ್ದು, ಆ ಕುರಿತ ಮಾಹಿತಿ ಇಲ್ಲಿದೆ.
ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ದೆಹಲಿಯ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ (Dr Randeep Guleria) ಹೊಸ ವರ್ಷದ ಸಂದೇಶ ನೀಡಿದ್ದಾರೆ. ಅದರಲ್ಲಿ ಅವರು ಜನರಿಗೆ ಎಚ್ಚರಿಕೆ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದು, ಒಮಿಕ್ರಾನ್ ರೂಪಾಂತರದ ಕುರಿತು ಭಯಬೇಡ, ಆದರೆ ಜಾಗರೂಕರಾಗಿರಿ ಎಂದು ಕಿವಿಮಾತು ಹೇಳಿದ್ದಾರೆ. ಒಮಿಕ್ರಾನ್ ಲಕ್ಷಣಗಳು ಹಾಗೂ ಪರಿಣಾಮದ ಕುರಿತು ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಲಭ್ಯವಾಗಿರುವ ಅಧ್ಯಯನಗಳ ಪ್ರಕಾರ ಒಮಿಕ್ರಾನ್ ರೂಪಾಂತರದ ಪರಿಣಾಮಗಳು ಸೌಮ್ಯವಾಗಿದ್ದು, ಗಂಭೀರವಾದ ಸೋಂಕಲ್ಲ. ಎರಡನೇ ಅಲೆಯಲ್ಲಿ ಉಂಟಾಗಿದ್ದಂತೆ ಆಮ್ಲಜನಕದ ಅವಶ್ಯಕತೆ ಹೆಚ್ಚು ಬೇಕಾಗುವುದಿಲ್ಲ. ಜನರು ಆಮ್ಲಜನಕ ಸಿಲಿಂಡರ್ ಹಾಗೂ ಔಷಧಗಳನ್ನು ಸಂಗ್ರಹಿಸಲು ಮುಂದಾಗಬೇಡಿ ಎಂದು ಅವರು ಸಲಹೆ ನೀಡಿದ್ದಾರೆ. ಇದರಿಂದ ಒಂದು ರಾಷ್ಟ್ರವಾಗಿ ಸಮಸ್ಯೆಯನ್ನು ಸಮರ್ಥವಾಗಿ ಹಾಗೂ ವ್ಯವಸ್ಥಿತವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಸಂದೇಶದಲ್ಲಿ ಡಾ.ಗುಲೇರಿಯಾ ಜನರಿಗೆ 2022ರ ಶುಭಾಶಯ ಕೋರಿದ್ದಾರೆ. ಎಲ್ಲರಿಗೂ ಸಂತೋಷ, ಆರೋಗ್ಯಕರ ಮತ್ತು ಸಮೃದ್ಧ 2022 ಅನ್ನು ಹಾರೈಸುತ್ತೇನೆ ಎಂದು ಸಂದೇಶದಲ್ಲಿ ತಿಳಿಸಿರುವ ಗುಲೇರಿಯಾ, ಸಾಂಕ್ರಮಿಕ ರೋಗ ಕೊನೆಗೊಂಡಿಲ್ಲ. ಆದರೆ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದಿದ್ದಾರೆ. ಭಾರತದಲ್ಲಿ ಹೆಚ್ಚಿನ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದು, ಜನಸಂದಣಿ ತಪ್ಪಿಸುವುದು ಮೊದಲಾದ ಎಚ್ಚರಿಕೆ ತೆಗೆದುಕೊಳ್ಳುವುದು ಮುಖ್ಯ ಎಂದು ಅವರು ಹೇಳಿದ್ದಾರೆ.
We’re also prepared from the point of view of individual immunity. A large number of us have either got immunity because of vaccination or due to natural infection. Don’t panic, stay alert: AIIMS Director Dr Guleria in a video message
(Source: AIIMS New Delhi Twitter handle) pic.twitter.com/8RLQ5b3764
— ANI (@ANI) December 29, 2021
ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳು ಎಷ್ಟಿವೆ? ಭಾರತದಲ್ಲಿ ಪ್ರಕರಣಗಳು ನಿಧಾನವಾಗಿ ಹೆಚ್ಚಾಗುತ್ತಿರುವ ಕಾರಣ ರಾಜ್ಯಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಹಲವು ರಾಜ್ಯಗಳು ಕಠಿಣ ಕ್ರಮಗಳನ್ನೂ ಘೋಷಿಸಿವೆ. ಇದುವರೆಗೆ ಒಟ್ಟು 961 ಒಮಿಕ್ರಾನ್ ಪ್ರಕರಣ ವರದಿಯಾಗಿದ್ದು 320 ಜನರು ಗುಣಮುಖರಾಗಿದ್ದಾರೆ. ಪ್ರಸ್ತುತ ದೇಶದ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಮಿಕ್ರಾನ್ ರೂಪಾಂತರ ಕಂಡುಬಂದಿದೆ. ದೆಹಲಿಯಲ್ಲಿ 263 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದರೆ ಮಹಾರಾಷ್ಟ್ರದಲ್ಲಿ 252 ಮತ್ತು ಗುಜರಾತ್ನಲ್ಲಿ 97 ಪ್ರಕರಣಗಳು ವರದಿಯಾಗಿವೆ.
ರಾಜಸ್ಥಾನ ಮತ್ತು ಕೇರಳದಲ್ಲಿ ಕ್ರಮವಾಗಿ 69 ಮತ್ತು 65 ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ತೆಲಂಗಾಣದಲ್ಲಿ 62 ಜನರಿಗೆ, ತಮಿಳುನಾಡಿನಲ್ಲಿ 45 ಜನರಿಗೆ ಒಮಿಕ್ರಾನ್ ಸೋಂಕು ತಗುಲಿದೆ. ಕರ್ನಾಟಕದಲ್ಲಿ 34 ಪ್ರಕರಣಗಳು ದಾಖಲಾಗಿವೆ. ಆಂಧ್ರಪ್ರದೇಶ (16 ಪ್ರಕರಣಗಳು), ಹರಿಯಾಣ (12 ಪ್ರಕರಣಗಳು) ಮತ್ತು ಪಶ್ಚಿಮ ಬಂಗಾಳಗಳಲ್ಲಿ (11 ಪ್ರಕರಣಗಳು) ಇದುವರೆಗೆ 20 ಕ್ಕಿಂತ ಕಡಿಮೆ ಪ್ರಕರಣಗಳು ಕಂಡುಬಂದಿವೆ.
ಮಧ್ಯಪ್ರದೇಶ (9 ಪ್ರಕರಣಗಳು), ಒಡಿಶಾ (9 ಪ್ರಕರಣಗಳು), ಉತ್ತರಾಖಂಡ (4 ಪ್ರಕರಣಗಳು), ಚಂಡೀಗಢ (3 ಪ್ರಕರಣಗಳು), ಜಮ್ಮು ಮತ್ತು ಕಾಶ್ಮೀರ (3 ಪ್ರಕರಣಗಳು), ಉತ್ತರ ಪ್ರದೇಶ (2 ಪ್ರಕರಣಗಳು), ಗೋವಾ, ಹಿಮಾಚಲ ಪ್ರದೇಶ, ಲಡಾಖ್, ಮಣಿಪುರ ಮತ್ತು ಪಂಜಾಬ್ಗಳಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ:
ಮುಂಬೈನಲ್ಲಿ ಹೊಸ ವರ್ಷಾಚರಣೆಗೆ ಫುಲ್ ಬ್ರೇಕ್; ನಗರಾದ್ಯಂತ ಇಂದಿನಿಂದಲೇ ಸೆಕ್ಷನ್ 144 ಜಾರಿ
ಮೊಲ್ನುಪಿರಾವಿರ್ ಮಾತ್ರೆಗಳಿಂದ ಕೊವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು 2000-3000 ರೂ.ವೆಚ್ಚವಾಗಬಹುದು
Published On - 1:20 pm, Thu, 30 December 21