ಗಾಂಧಿ ಕುಟುಂಬದವರು ಕಾಂಗ್ರೆಸ್ ಅಧ್ಯಕ್ಷರಾಗಬಾರದು ಎಂದು ಜಿ 23 ಗುಂಪಿನ ನಾಯಕರು ಎಂದಿಗೂ ಹೇಳಿಲ್ಲ: ಮಾಜಿ ಸಿಎಂ ಕಮಲನಾಥ್​

ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಸೋತು ನೆಲಕಚ್ಚಿದೆ. ಅದರ ಬಳಿಕ ಪಕ್ಷವನ್ನು ಇನ್ನಷ್ಟು ಬಲಗೊಳಿಸಬೇಕು. ಬುಡದಿಂದ ಸಂಘಟನೆ ಮಾಡಬೇಕು ಎಂಬ ಬೇಡಿಕೆ ಹೆಚ್ಚಾಗಿದೆ.

ಗಾಂಧಿ ಕುಟುಂಬದವರು ಕಾಂಗ್ರೆಸ್ ಅಧ್ಯಕ್ಷರಾಗಬಾರದು ಎಂದು ಜಿ 23 ಗುಂಪಿನ ನಾಯಕರು ಎಂದಿಗೂ ಹೇಳಿಲ್ಲ: ಮಾಜಿ ಸಿಎಂ ಕಮಲನಾಥ್​
ಕಮಲನಾಥ್​
Edited By:

Updated on: Mar 31, 2022 | 8:36 PM

ಭೋಪಾಲ್​: ಕಾಂಗ್ರೆಸ್​ಗೆ ನೂತನ ಅಧ್ಯಕ್ಷರ ನೇಮಕವಾಗಬೇಕು ಎಂಬುದು ಜಿ 23 ಗುಂಪಿನ ನಾಯಕರ ಬೇಡಿಕೆ ಹೌದು. ಆದರೆ ಗಾಂಧಿ ಕುಟುಂಬದ ಹೊರಗಿನವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಎಂದಿಗೂ ಆಗ್ರಹ ಮುಂದಿಟ್ಟಿಲ್ಲ ಎಂದು ಕಾಂಗ್ರೆಸ್​ ಹಿರಿಯ ನಾಯಕ ಕಮಲನಾಥ್​ ಹೇಳಿದ್ದಾರೆ. ಮಧ್ಯಪ್ರದೇಶದ ಭೋಪಾಲ್​​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ 23 ಗುಂಪಿನ ನಾಯಕರು ನನಗೆ ತುಂಬ ಆಪ್ತರು. ಹಲವು ವರ್ಷಗಳಿಂದಲೂ ನನ್ನ ಸಹೋದ್ಯೋಗಿಗಳು. ಗಾಂಧಿ ಕುಟುಂಬದವರ ಹೊರತಾಗಿ ಬೇರೆಯವರು ಕಾಂಗ್ರೆಸ್​ ನಾಯಕತ್ವ ವಹಿಸಿಕೊಳ್ಳಬೇಕು ಎಂಬ ಬೇಡಿಕೆಯನ್ನು ಇದುವರೆಗೂ ಇಟ್ಟಿಲ್ಲ. ಅಷ್ಟೇ ಅಲ್ಲ, ಅವರ ಇದುವರೆಗಿನ ಬೇಡಿಕೆಗಳನ್ನೆಲ್ಲ ಈಗಾಗಲೇ ಈಡೇರಿಸಲಾಗಿದೆ. ಇನ್ನು ಮೂರು ತಿಂಗಳೊಳಗೆ ಪಕ್ಷದ ಸಾಂಸ್ಥಿಕ ಚುನಾವಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಸೋತು ನೆಲಕಚ್ಚಿದೆ. ಅದರ ಬಳಿಕ ಪಕ್ಷವನ್ನು ಇನ್ನಷ್ಟು ಬಲಗೊಳಿಸಬೇಕು. ಬುಡದಿಂದ ಸಂಘಟನೆ ಮಾಡಬೇಕು, ಪಕ್ಷದೊಳಗೆ ಇನ್ನೂ ಅನೇಕ ರೀತಿಯ ಸುಧಾರಣೆಗಳನ್ನು ಮಾಡಬೇಕು ಎಂಬ ಮನವಿ ಹೆಚ್ಚಾಗಿದೆ. ಅದೂ ಕೂಡ ಜಿ 23 ನಾಯಕರು ಒಂದೇಸಮ ಒತ್ತಾಯ ಮಾಡುತ್ತಲೇ ಇದ್ದಾರೆ. ಸೋನಿಯಾಗಾಂಧಿಯವರೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳುವುದಲ್ಲದೆ, ತಮ್ಮಲ್ಲೇ ಸಭೆಯನ್ನೂ ನಡೆಸುತ್ತಿದ್ದಾರೆ.

ಇಂದು ಜಿ 23 ನಾಯಕರ ಬಗ್ಗೆ ಮಾತನಾಡಿದ ಕಮಲನಾಥ್​, ಕೇಂದ್ರ ಸರ್ಕಾರ ಮತ್ತು ಮಧ್ಯಪ್ರದೇಶ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ದಿನನಿತ್ಯದ ಬೆಲೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರಿಗೆ ತೀವ್ರ ಸಂಕಷ್ಟವಾಗಿದೆ. ಹಾಲು ದುಬಾರಿಯಾಗುತ್ತಿದೆ, ಮದ್ಯದ ಬೆಲೆ ಇಳಿಕೆಯಾಗುತ್ತಿದೆ. ಪೆಟ್ರೋಲ್​, ಡೀಸೆಲ್​, ತರಕಾರಿಗಳು, ಔಷಧಿಗಳು, ದೈನಂದಿನ ಬಳಕೆ ವಸ್ತುಗಳ ಬೆಲೆಯೆಲ್ಲ ಗಗನಕ್ಕೇರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಉಕ್ರೇನ್​​ನಲ್ಲಿ ಇನ್ನೂ ಇದ್ದಾರೆ 50 ಭಾರತೀಯರು, ವಾಪಸ್​ ಬರುವ ಇಚ್ಛೆ ಇರುವುದು ಕೆಲವೇ ಮಂದಿಗೆ ಮಾತ್ರ: ಸಚಿವೆ ಮೀನಾಕ್ಷಿ ಲೇಖಿ

Published On - 8:35 pm, Thu, 31 March 22