ಪ್ರಶಾಂತ್ ಕಿಶೋರ್ ಗೊತ್ತಲ್ಲಾ? ವಿದೇಶದಲ್ಲಿ ಶಿಕ್ಷಣ ಪಡೆದು ಭಾರತದಲ್ಲಿ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗುವಲ್ಲಿ ಮಹತ್ವದ ಪ್ರಚಾರ ಕಾರ್ಯಭಾರ ನಿಭಾಯಿಸಿದ್ದವರು. ಆನಂತರ ಮೋದಿ ತಂಡದಿಂದ ದೂರವಾಗಿ ಅವರ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡು ಇತ್ತೀಚೆಗೆ ಪಶ್ಚಿಮ ಬಂಗಾಲದ ಮಮತಾ ಬ್ಯಾನರ್ಜಿ ಅವರು ಪುನಃ ಮುಖ್ಯಮಂತ್ರಿಯಾಗಿ ಪ್ರತಿಷ್ಠಾಪಿಸುವಲ್ಲಿ ಗುರುತರ ಪಾತ್ರ ವಹಿಸಿದ್ದರು. ಆದಾದ ಬಳಿಕ.. ಈ ಚುನಾವಣಾ ರಾಯಭಾರ ಕೆಲಸಗಳು ಸಾಕು. ಸ್ವಲ್ಪ ಕಾಲ ಚುನಾವಣಾ ಪ್ರಚಾರಗಳಿಂದ ವಿಮುಖನಾಗುವೆ ಎಂದು ಸ್ವತಃ ಅವರೇ ಘೋಷಿಸಿದ್ದರು. ಆದರೆ ಅವರ ಅನುಪಸ್ಥಿತಿ ಕಾಡುತ್ತದೆ ಅಂತಾನೋ ಏನೋ ಅವರ ನಕಲಿಯೊಬ್ಬ ಅವತರಿಸಿದ್ದಾನೆ. ಆದರೆ ಅವನು ಅಪರಾವತಾರವನ್ನು ಆರಂಭದಲ್ಲೇ ಪೊಲೀಸರು ಚಿವುಟಿ ಹಾಕಿದ್ದಾರೆ. ಅವನೊಬ್ಬನ್ನಷ್ಟೇ ಅಲ್ಲ; ಅವನ ಗ್ಯಾಂಗ್ ಅನ್ನೂ ಪೊಲೀಸರು ಹೆಡೆಮುರಿಗೆ ಕಟ್ಟಿದ್ದಾರೆ.
ಇದೆಲ್ಲಾ ಘಟಿಸಿರುವುದು ಲೂಧಿಯಾನಾದಲ್ಲಿ. ಆರೋಪಿ ಮೊದಲು ಪಂಜಾಬ್ನ ಬಾಟ್ಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ತಾನೇ ಎಂದು ನಕಲಿಯಾಗಿ ಗುರುತಿಸಿಕೊಂಡಿದ್ದಾನೆ. ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಸಂಗ್ರೂರ್ನ ಇಬ್ಬರು ಸ್ಥಳೀಯ ನಾಯಕರು ಮತ್ತು ಜಲಂಧರ್ನ ಮಾಜಿ ಮೇಯರ್ ಒಬ್ಬರಿಗೆ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದಾನೆ ಈ ನಕಲಿ ಆಸಾಮಿ. ಅಷ್ಟೇ ಅಲ್ಲ ಲೂಧಿಯಾನಾದ ಹಾಲಿ ಶಾಸಕನಿಗೂ ಮತ್ತೆ ಟಿಕೆಟ್ ಭಾಗ್ಯ ಕಲ್ಪಿಸುವುದಾಗಿ ಈ ಗ್ಯಾಂಗ್ ಭರವಸೆ ನೀಡಿತ್ತಂತೆ!
ಲೂಧಿಯಾನಾ ಪೊಲೀಸರು ಶುಕ್ರವಾರ ಇಬ್ಬರನ್ನು ಅರೆಸ್ಟ್ ಮಾಡಿದ್ದರು. ಅವರು ನೀಡಿದ ಮಾಹಿತಿಯಂತೆ ಅವರ ತಂಡದ ನಾಯಕ ಪೋಲ್ ಸ್ಟ್ರಾಟೆಜಿಸ್ಟ್ ಪ್ರಶಾಂತ್ ಕಿಶೋರ್ ತಾನೇ ಎಂದು ಹೇಳಿಕೊಂಡು ಅನೇಕ ರಾಜಕೀಯ ನೇತಾರರಿಗೆ ಯಾಮಾರಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಸದರಿ ನಕಲಿ ಪ್ರಶಾಂತ್ ಕಿಶೋರ್ ಎಂಬಾತ ಕಾಂಗ್ರೆಸ್ ಪಕ್ಷದ ವತಿಯಿಂದ ಮುಂದಿನ ವರ್ಷ ವಿಧಾನಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿದ್ದಾನೆ ಎಂಬ ಮಾಹಿತಿಯೂ ಹೊರಬಿದ್ದಿದೆ.
ರಾಕೇಶ್ ಕುಮಾರ್ ಭಾಸಿನ್ ಮತ್ತು ರಜತ್ ಕುಮಾರ್ ರಾಜಾ ಬಂಧಿತರು, ಇಬ್ಬರೂ ಶಿವ ಸೇನಾ (ಸೂರ್ಯವಂಶಿ) ಸದಸ್ಯರು ಎಂದು ತಿಳಿದುಬಂದಿದೆ. ಗೌರವ್ ಶರ್ಮಾ ಎಂಬುವವನ್ನು ಈಗ ಪರಾರಿಯಾಗಿದ್ದಾನೆ. ಈ ಮೂವರೂ ಸೇರಿಕೊಂಡು 5 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಲಪಟಾಯಿಸಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ತಂಡದ ಮುಖ್ಯಸ್ಥನಾಗಿದ್ದ ಗೌರವ್ ಶರ್ಮಾ ತಾನು ಪೋಲ್ ಸ್ಟ್ರಾಟೆಜಿಸ್ಟ್ ಪ್ರಶಾಂತ್ ಕಿಶೋರ್ ಎಂದು ಹೇಳಿಕೊಂಡು ತಿರುಗಾಡುತ್ತಿದ್ದರೆ ಉಳಿದಿಬ್ಬರು ಅವನಿಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರಂತೆ.
ರಾಕೇಶ್ ಕುಮಾರ್ ಭಾಸಿನ್ ಶಿವ ಸೇನಾದ (ಸೂರ್ಯವಂಶಿ) ಅಖಿಲ ಭಾರತ ಅಧ್ಯಕ್ಷನಾಗಿದ್ದರೆ ರಜತ್ ಕುಮಾರ್ ರಾಜಾ ಅದೇ ಸಂಘಟನೆಯ ಸೆಕ್ರೆಟರಿ! ಕುತೂಹಲದ ಸಂಗತಿಯೆಂದ್ರೆ ಈಗ ಸಿಕ್ಕಿಬಿದ್ದಿರುವ ಖದೀಮ ರಾಕೇಶ್ ಕುಮಾರ್ ಭಾಸಿನ್ಗೆ ತೀವ್ರಗಾಮಿಗಳಿಂದ ಜೀವಬೆದರಿಕೆ ಇದೆಯೆಂದು ಪಂಜಾಬ್ ಸರ್ಕಾರ ಅವನಿಗೆ ನಾಲ್ಕು ಮಂದಿ ಅಂಗರಕ್ಷಕರ ಮೂಲಕ ಭದ್ರತೆ ನೀಡುತ್ತಿತ್ತು!
ನಕಲಿ ಪೋಲ್ ಸ್ಟ್ರಾಟೆಜಿಸ್ಟ್ ಪ್ರಶಾಂತ್ ಕಿಶೋರ್ ಕಾರ್ಯವಿಧಾನ ಹೀಗಿತ್ತು…
ಲೂಧಿಯಾನಾ ಗ್ರಾಮೀಣ ಭಾಗದ ಜಂಟಿ ಪೊಲೀಸ್ ಆಯುಕ್ತ (JCP) ಸಚಿನ್ ಶರ್ಮಾ ಹೇಳುವಂತೆ ಪ್ರಮುಖ ಆರೋಪಿ ಗೌರವ್ ಶರ್ಮಾಗೂ ಪೋಲ್ ಸ್ಟ್ರಾಟೆಜಿಸ್ಟ್ ಪ್ರಶಾಂತ್ ಕಿಶೋರ್ ಅವರಿಗೂ ಯಾವುದೇ ಸಂಪರ್ಕ ಇಲ್ಲ. ಬಂಧಿತ ರಾಕೇಶ್ ಕುಮಾರ್ ಭಾಸಿನ್ ಮತ್ತು ರಜತ್ ಕುಮಾರ್ ರಾಜಾ ಅವರಿಬ್ಬರೂ ಮೊದಲು ಟಿಕೆಟ್ ಆಕಾಂಕ್ಷಿಗಳನ್ನು ಸಂಪರ್ಕಿಸಿ, ಚುನಾವಣಾ ಟಿಕೆಟ್ ಕೊಡಿಸುವ ಮಾತುಗಳನ್ನಾಡುತ್ತಿದ್ದರಂತೆ.
ಬಳಿಕ, ಕಿಂಗ್ಪಿನ್ ಗೌರವ್ ಶರ್ಮಾನೊಂದಿಗೆ ಸಂಪರ್ಕ ಕುದುರಿಸುತ್ತಿದ್ದರಂತೆ. ಅವನೋ.. ತಾನೇ ಪೋಲ್ ಸ್ಟ್ರಾಟೆಜಿಸ್ಟ್ ಪ್ರಶಾಂತ್ ಕಿಶೋರ್ ಅಂತಾ ಹೇಳಿಕೊಂಡು ಟಿಕೆಟ್ ಆಕಾಂಕ್ಷಿಗಳನ್ನು ಪುಸಲಾಯಿಸುತ್ತಿದ್ದನಂತೆ! ಕೇವಲ ಪಂಜಾಬ್ ಅಷ್ಟೇ ಅಲ್ಲ; ಪಕ್ಕದ ಹರ್ಯಾಣಾ, ಬಿಹಾರ, ರಾಜಸ್ಥಾನ ಮತ್ತಿತರ ರಾಜ್ಯಗಳ ಅನೇಕ ಟಿಕೆಟ್ ಆಕಾಂಕ್ಷಿಗಳು ಗೌರವ್ ಶರ್ಮಾ ಗ್ಯಾಂಗ್ ಮೋಡಿಗೆ ಸುಲಭದ ತುತ್ತಾಗಿದ್ದಾರೆ ಎಂದು JCP ತಿಳಿಸಿದ್ದಾರೆ.
(Gang promising election tickets busted by Ludhiana Police kingpin Gaurav Sharma posed as Prashant Kishor)
Prashant Kishor: ರಾಜಕೀಯ ಪಕ್ಷಗಳಿಗೆ ಸಲಹೆ ನೀಡುವ ಕೆಲಸಕ್ಕೆ ಗುಡ್ಬೈ ಹೇಳಿದ ಪ್ರಶಾಂತ್ ಕಿಶೋರ್
Published On - 11:34 am, Sat, 15 May 21