Selfie Death: ಟ್ರ್ಯಾಕ್ಟರ್ ಮೇಲೆ ಕುಳಿತು ಸೆಲ್ಫಿ ತೆಗೆಯಲು ಮುಂದಾದ ಯುವಕನ ಸಾವು; 60 ಅಡಿ ಬಾವಿಗೆ ಬಿದ್ದು ಮೃತ
Tamil Nadu: ತಮಿಳುನಾಡಿನ 18 ವರ್ಷದ ಯುವಕ ಕೂಡ ಸೆಲ್ಫಿ ವ್ಯಾಮೋಹಕ್ಕೆ ಒಳಗಾಗಿದ್ದು ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಟ್ರ್ಯಾಕ್ಟರ್ನ ಮೇಲೆ ಹತ್ತಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾಗ ಸಂಜೀವಿ ಎಂಬ 18 ವರ್ಷದ ಯುವಕ ಬಾವಿಗೆ ಬಿದ್ದು ಸಾವನ್ನಪ್ಪಿದ್ದ ಘಟನೆ ವೆಲ್ಲೂರು ಜಿಲ್ಲೆಯ ವಾನಿಯಂಬಾಡಿಯಲ್ಲಿ ನಡೆದಿದೆ.
ಚೆನ್ನೈ: ಯುವಕರಲ್ಲಿ ಇತ್ತೀಚೆಗೆ ಸೆಲ್ಫಿ ವ್ಯಾಮೋಹ ಹೆಚ್ಚುತ್ತಿದೆ. ಎಲ್ಲರಿಗಿಂತ ವಿಭಿನ್ನವಾಗಿ ಸೆಲ್ಫಿ ತೆಗೆದುಕೊಳ್ಳಬೇಕು ಎನ್ನುವ ಕ್ರೇಜ್ ಸೃಷ್ಟಿ ಮಾಡಿಕೊಂಡಿರುವ ಯುವ ಜನತೆ ನಂತರ ಅವುಗಳನ್ನು ಫೇಸ್ಬುಕ್ ಮತ್ತು ವಾಟ್ಸಾಪ್ನಲ್ಲಿ ಪೋಸ್ಟ್ ಮಾಡಿ ದೊಡ್ಡ ಸಾಹಸ ಮಾಡಿದಂತೆ ಸಂಭ್ರಮಿಸುತ್ತಾರೆ. ಈ ಸೆಲ್ಫಿಯಿಂದ ಅವಾಂತರಕ್ಕೆ ಸಿಲುಕಿದ ಅದೇಷ್ಟೋ ಘಟನೆಗಳು ನಮ್ಮ ಮುಂದೆ ಇದೆ. ಆದರೆ ಇಂತಹ ಸಾಹಸಕ್ಕೆ ಕೈ ಹಾಕುವ ಜನರ ಸಂಖ್ಯೆ ಮಾತ್ರ ಇನ್ನು ಕಡಿಮೆಯಾಗಿಲ್ಲ. ಸದ್ಯ ತಮಿಳುನಾಡಿನ 18 ವರ್ಷದ ಯುವಕ ಕೂಡ ಸೆಲ್ಫಿ ವ್ಯಾಮೋಹಕ್ಕೆ ಒಳಗಾಗಿದ್ದು ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಟ್ರ್ಯಾಕ್ಟರ್ನ ಮೇಲೆ ಹತ್ತಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾಗ ಸಂಜೀವಿ ಎಂಬ 18 ವರ್ಷದ ಯುವಕ ಬಾವಿಗೆ ಬಿದ್ದು ಸಾವನ್ನಪ್ಪಿದ್ದ ಘಟನೆ ವೆಲ್ಲೂರು ಜಿಲ್ಲೆಯ ವಾನಿಯಂಬಾಡಿಯಲ್ಲಿ ನಡೆದಿದೆ. ಮೃತ ಯುವಕನ ತಂದೆ ಕೃಷ್ಣನ್ ಕೃಷಿಕನಾಗಿದ್ದು, ಭೂಮಿ ಉಳುಮೆಗಾಗಿ ಒಂದು ಟ್ರಾಕ್ಟರ್ ಹೊಂದಿದ್ದಾರೆ. ಹೀಗಾಗಿ ಮಗ ಸಂಜೀವಿ ಶಾಲೆಗೆ ರಜೆ ಇರುವಾಗಲೆಲ್ಲಾ ತಂದೆಯೊಂದಿಗೆ ಟ್ರ್ಯಾಕ್ಟರ್‌ನಲ್ಲಿ ಜಮೀನಿಗೆ ಹೋಗುತ್ತಿದ್ದರು. ಕೃಷ್ಣನ್ ಕೂಡ ತನ್ನ ಮಗನಿಗೆ ಟ್ರ್ಯಾಕ್ಟರ್ ಕಲಿಸಲು ಪ್ರಯತ್ನಿಸುತ್ತಿದ್ದರು. ಅದರಂತೆ ಸಂಜೀವಿ ಕೂಡ ಟ್ರ್ಯಾಕ್ಟರ್ ಓಡಿಸಲು ಹೆಚ್ಚು ಆಸಕ್ತನಾಗಿದ್ದ.
ನಿನ್ನೆ ಟ್ರಾಕ್ಟರ್ನೊಂದಿಗೆ ಉಳುಮೆಗೆ ಹೊರಟ ತಂದೆಯ ಜತೆ ತಾನು ಬರುವುದಾಗಿ ತಿಳಿಸಿದ ಸಂಜೀವಿ ಜಮೀನಿನ ಕೆಲಸದಲ್ಲಿ ತಂದೆಗೆ ನೆರವಾಗಿದ್ದಾನೆ. ಬಳಿಕ ತಂದೆ ಊಟ ತರುತ್ತೇನೆ ಇಲ್ಲಿಯೇ ಕುಳಿತು ಊಟ ಮಾಡೋಣ ಎಂದು ಹೇಳಿ ಹೋರಟಾಗ ಟ್ರ್ಯಾಕ್ಟರ್ ಕೀಯನ್ನು ಗಾಡಿಯಲ್ಲೇ ಮರೆತಿದ್ದಾರೆ. ಇದನ್ನು ಕಂಡ ಯುವಕ ಟ್ರ್ಯಾಕ್ಟರ್ ಮೇಲೇರಿ ಗಾಡಿ ಓಡಿಸಲು ಮುಂದಾಗಿದ್ದಾನೆ. ಇಷ್ಟೇ ಆಗಿದ್ದರೆ ಬಹುಷಃ ಏನು ಅವಾಂತರವಾಗುತ್ತಿರಲಿಲ್ಲವೇನೋ ಆದರೆ ಟ್ರ್ಯಾಕ್ಟರ್ ಚಾಲನೆ ಮಾಡುವಾಗ ಸೆಲ್ಫಿ ತೆಗೆದುಕೊಳ್ಳಲು ಬಯಸಿದ್ದ ಸಂಜೀವಿ ತನ್ನ ಸ್ಮಾರ್ಟ್‌ಫೋನ್‌ನೊಂದಿಗೆ ಸೆಲ್ಫಿ ತೆಗೆದುಕೊಳ್ಳುವಾಗ, ಟ್ರಾಕ್ಟರ್ ಆಕಸ್ಮಿಕವಾಗಿ ಹತ್ತಿರದ 60 ಅಡಿ ಆಳದ ಬಾವಿಗೆ ಬಿದ್ದಿದೆ.
ಬ್ರೇಕ್ ಹಾಕುವ ಪ್ರಯತ್ನ ನಡೆಯುವ ಮೊದಲೇ ಟ್ರಾಕ್ಟರ್‌ನ ಅರ್ಧದಷ್ಟು ಭಾಗ ಬಾವಿಗೆ ಹೋಗಿದ್ದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಟ್ರಾಕ್ಟರ್ ಜೊತೆಗೆ ಸಂಜೀವಿಯೂ ಬಾವಿಗೆ ಬಿಳುತ್ತಿರುವುದನ್ನು ಸ್ಥಳೀಯರು ಗಮನಿಸಿ ಸ್ಥಳಕ್ಕೆ ದಾವಿಸುವಷ್ಟರಲ್ಲಿ ಅಪಘಾತ ನಡೆದೇ ಹೋಗಿತ್ತು. ಕೂಡಲೇ ಗ್ರಾಮಸ್ಥರು ವನಿಯಂಬಾಡಿ ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಸಹಾಯಕ ಸಿಬ್ಬಂದಿ ಅಲ್ಲಿಗೆ ತಲುಪಿ ನಾಲ್ಕು ಮೋಟರ್‌ಗಳೊಂದಿಗೆ ಬಾವಿಯಿಂದ ನೀರನ್ನು ಹೊರಹಾಕಿದರು. ಬಳಿಕ ಟ್ರ್ಯಾಕ್ಟರ್ ಮತ್ತು ಯುವಕನ ದೇಹವನ್ನು ಕ್ರೇನ್ ಸಹಾಯದಿಂದ ಹೊರತೆಗೆಯಲಾಯಿತು. ಆದರೆ ಸೆಲ್ಫಿ ತೆಗೆದುಕೊಳ್ಳಲು ಬಯಸಿದ ಯುವಕನ ಜೀವ ಮಾತ್ರ ಅದಾಗಲೇ ಅಂತ್ಯಕಂಡಿತ್ತು.
ಇದನ್ನೂ ಓದಿ: ಮೊನ್ನೆಯಷ್ಟೇ ಹಾಡಿಗೆ ತಲೆದೂಗಿದ ಯುವತಿ ಇಂದಿಲ್ಲ; ಪುಟ್ಟ ಕಂದನ ಕೂಗು, ಸಾವಿರಾರು ಜನರ ಪ್ರಾರ್ಥನೆಗೆ ದೇವರು ಸಹ ಕಿವಿಗೊಡಲಿಲ್ಲ
Published On - 12:11 pm, Sat, 15 May 21