ಭಾರತದಲ್ಲಿ ಹೊಸ ಪ್ರಕರಣಗಳಿಗಿಂತ ಗುಣಮುಖ ಆಗುತ್ತಿರುವವರ ಸಂಖ್ಯೆ ಹೆಚ್ಚು; ಸಂಕಟದ ನಡುವೆ ಆಶಾದಾಯಕ ಬೆಳವಣಿಗೆ

ಕಳೆದ 5 ದಿನಗಳಿಂದಲೂ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ಪೈಕಿ ಶೇ.71.16ರಷ್ಟು ಜನ ದೇಶದ 10 ರಾಜ್ಯಗಳಿಗೆ ಸೇರಿದವರು ಎನ್ನುವುದು ಗಮನಾರ್ಹ.

  • Publish Date - 10:03 am, Sat, 15 May 21
ಭಾರತದಲ್ಲಿ ಹೊಸ ಪ್ರಕರಣಗಳಿಗಿಂತ ಗುಣಮುಖ ಆಗುತ್ತಿರುವವರ ಸಂಖ್ಯೆ ಹೆಚ್ಚು; ಸಂಕಟದ ನಡುವೆ ಆಶಾದಾಯಕ ಬೆಳವಣಿಗೆ
ಪ್ರಾತಿನಿಧಿಕ ಚಿತ್ರ

ದೆಹಲಿ: ಕೊರೊನಾ ಎರಡನೇ ಅಲೆಯಿಂದ ಇಡೀ ದೇಶವೇ ಚಿಂತೆಗೀಡಾಗಿದ್ದು, ಸಾವು, ನೋವುಗಳ ಸಾಲು ಸಾಲು ವರದಿಯ ನಡುವೆ ಆಶಾದಾಯಕ ಬೆಳವಣಿಗೆಯೊಂದು ಕಂಡುಬಂದಿದೆ. ಭಾರತದಲ್ಲಿ ಪ್ರತಿನಿತ್ಯ ದಾಖಲಾಗುತ್ತಿರುವ ಹೊಸ ಪ್ರಕರಣಗಳಿಗಿಂತ ಹೆಚ್ಚು ಸಂಖ್ಯೆಯಲ್ಲಿ ಜನ ಗುಣಮುಖರಾಗುತ್ತಿದ್ದು, ಇದುವರೆಗೆ ಕೊವಿಡ್​ 19ನಿಂದ ಭಾರತದಲ್ಲಿ ಚೇತರಿಸಿಕೊಂಡವರ ಸಂಖ್ಯೆ 2 ಕೋಟಿಯ ಗಡಿ ದಾಟಿದೆ. ಕಳೆದ ಐದು ದಿನಗಳಲ್ಲಿ ನಾಲ್ಕು ಬಾರಿ ಹೊಸ ಪ್ರಕರಣಗಳಿಗಿಂತಲೂ ಹೆಚ್ಚು ಚೇತರಿಕೆ ಪ್ರಮಾಣ ಇರುವುದು ಎರಡನೇ ಅಲೆಯ ಸಂಕಟದ ಸಮಯದಲ್ಲಿ ವೈದ್ಯಕೀಯ ಲೋಕಕ್ಕೆ ಹೊಸ ಭರವಸೆ ಮೂಡಿಸಿದೆ.

ನಿನ್ನೆ (ಮೇ 14) ಲೆಕ್ಕಾಚಾರದ ಪ್ರಕಾರ 24 ಗಂಟೆಗಳಲ್ಲಿ 3,44,776ಜನ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಭಾರತದಲ್ಲಿ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 2,00,79,599ಕ್ಕೆ ತಲುಪಿದೆ. ಕಳೆದ 5 ದಿನಗಳಿಂದಲೂ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ಪೈಕಿ ಶೇ.71.16ರಷ್ಟು ಜನ ದೇಶದ 10 ರಾಜ್ಯಗಳಿಗೆ ಸೇರಿದವರು ಎನ್ನುವುದು ಗಮನಾರ್ಹ.

ಮೇ.14ರ ದಿನದಂತ್ಯಕ್ಕೆ 24 ತಾಸಿನಲ್ಲಿ 3.26 ಲಕ್ಷ ಕೊರೊನಾ ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು, ಸುಮಾರು 3,890 ಜನ ದೇಶದಲ್ಲಿ ಕೊವಿಡ್​ 19 ಕಾರಣದಿಂದ ಮರಣಕ್ಕೀಡಾಗಿದ್ದಾರೆ. ಆ ಮೂಲಕ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 2.43ಕೋಟಿಯಷ್ಟಾಗಿದ್ದು, ಮೃತಪಟ್ಟವರ ಸಂಖ್ಯೆ 2.66ಲಕ್ಷದಷ್ಟಾಗಿದೆ. ಮಹಾರಾಷ್ಟ್ರದಲ್ಲಿ ನಿನ್ನೆ 39,923 ಪ್ರಕರಣಗಳು ಪತ್ತೆಯಾಗಿದ್ದು, ಮಾರ್ಚ್​ 31ರ ನಂತರ ನಿನ್ನೆಯೇ ಮೊದಲ ಬಾರಿಗೆ 40 ಸಾವಿರಕ್ಕೂ ಕಡಿಮೆ ಪ್ರಕರಣಗಳು ದಾಖಲಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಇಷ್ಟಾದರೂ ಒಟ್ಟಾರೆ ಪ್ರಕರಣಗಳನ್ನು ನೋಡಿದಾಗ ಇನ್ನೂ ಕೆಲ ಸಮಯಗಳ ಕಾಲ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡಬೇಕಿರುವುದು ಅನಿವಾರ್ಯವಾಗಿದ್ದು, ಒಂದುವೇಳೆ ಮೈಮರೆತದ್ದೇ ಆದಲ್ಲಿ ಅಪಾಯಕ್ಕೆ ಆಹ್ವಾನ ನೀಡಿದಂತೆ ಆಗಲಿದೆ. ಎರಡನೇ ಅಲೆಯ ವೈರಾಣು ಮೊದಲ ಬಾರಿಯದ್ದಕ್ಕಿಂತಲೂ ಮಾರಣಾಂತಿಕ ಎಂದು ನಿನ್ನೆಯಷ್ಟೇ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯನ್ನೂ ನೀಡಿದೆ. ಭಾರತದಲ್ಲಿ 2020ರ ಡಿಸೆಂಬರ್ 19 ರಂದು 1 ಕೋಟಿಯಷ್ಟಿದ್ದ ಕೊರೊನಾ ಪ್ರಕರಣಗಳ ಸಂಖ್ಯೆ ಕೇವಲ 6 ತಿಂಗಳಿನಲ್ಲಿ ದುಪ್ಪಟ್ಟಾಗಿದ್ದು, ಮೇ 4ರಂದು 2ಕೋಟಿಯ ಗಡಿ ದಾಟಿದೆ.

ಇದನ್ನೂ ಓದಿ:
ಆಗಸ್ಟ್​ನಿಂದ ಸೆಪ್ಟೆಂಬರ್ ಅವಧಿಯಲ್ಲಿ ದೇಶದಲ್ಲಿ 200 ಕೋಟಿ ಡೋಸ್ ಕೊವಿಡ್ ಲಸಿಕೆ ದೊರೆಯುವ ಸಾಧ್ಯತೆ