ತಕ್ಷಣವೇ ಲಸಿಕೆ ಪೂರೈಸುವಂತೆ ದೇಶದ ಪ್ರಭಾವಿಗಳಿಂದ ಅದಾರ್ ಪೂನಾವಾಲಾಗೆ ಬೆದರಿಕೆ ಕರೆ

|

Updated on: May 01, 2021 | 9:53 PM

ಮಾತು ಕೇಳದಿದ್ದರೆ ನಮ್ಮ ಸ್ಥಳವನ್ನು ಸುತ್ತುವರಿಯಬಹುದು. ಅವರ ಬೇಡಿಕೆಯನ್ನು ಈಡೇರಿಸದಿದ್ದರೆ ನಮಗೆ ಕೆಲಸ ಮಾಡಲು ಬಿಡದಿರಬಹುದು ಎಂದು ತಮ್ಮ ಆತಂಕವನ್ನು ಬಹಿರಂಗಪಡಿಸಿದ್ದಾರೆ.

ತಕ್ಷಣವೇ ಲಸಿಕೆ ಪೂರೈಸುವಂತೆ ದೇಶದ ಪ್ರಭಾವಿಗಳಿಂದ ಅದಾರ್ ಪೂನಾವಾಲಾಗೆ ಬೆದರಿಕೆ ಕರೆ
ಆಧಾರ್ ಪೂನಾವಾಲಾ
Follow us on

ದೆಹಲಿ: ಕೊವಿಡ್ ಲಸಿಕೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಸೆರಮ್​ ಇನ್​​​​​ಸ್ಟಿಟ್ಯೂಟ್​​​ ಮುಖ್ಯಸ್ಥ ಅದಾರ್ ಪೂನಾವಾಲಾ ತಮಗೆ ದೇಶದ ಪ್ರಭಾವಿ ವ್ಯಕ್ತಿಗಳು ತಕ್ಷಣವೇ ಲಸಿಕೆ ಪೂರೈಸುವಂತೆ ಕರೆ ಮಾಡಿ ಒತ್ತಡ ಮತ್ತು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಲಂಡನ್​ನಲ್ಲಿರುವ ಅವರು ಇಂಗ್ಲೆಂಡ್​ನ ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಭಾರತದ ಪ್ರಭಾವಿ ವ್ಯಕ್ತಿಗಳು, ಮುಖ್ಯಮಂತ್ರಿಗಳು, ಉದ್ಯಮಿಗಳಿಂದ ನನಗೆ ಆಕ್ರಮಣಕಾರಿ ಫೋನ್​ ಕರೆ​ಗಳು ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.  

ದೂರವಾಣಿ ಕರೆಯಲ್ಲಿ ಲಸಿಕೆ ಒದಗಿಸದಿದ್ದರೆ ಒಳ್ಳೆಯದಲ್ಲ ಎಂದು ಬೆದರಿಕೆ ಹಾಕಲಾಗುತ್ತಿದೆ. ಕೆಟ್ಟ ಭಾಷೆ ಬಳಸದಿದ್ದರೂ ಅಂತಹುದೇ ಭಾವಾರ್ಥ ಬರುವಂತಹ ಭಾಷೆಯಲ್ಲಿ ಒತ್ತಡ ಹೇರಲಾಗುತ್ತಿದೆ. ಪ್ರತಿಯೊಬ್ಬರು ಲಸಿಕೆ ಪಡೆಯಬೇಕೆಂದು ಬಯಸುತ್ತಿದ್ದಾರೆ. ಒಂದು ವೇಳೆ ನಮಗೆ ಲಸಿಕೆ ನೀಡದಿದ್ದರೇ, ನಿಮಗೆ ಒಳ್ಳೆಯದಲ್ಲ ಎನ್ನಲಾಗುತ್ತಿದೆ. ನಾನು ಅವರ ಮಾತು ಕೇಳದಿದ್ದರೆ ಅವರು ನನ್ನನ್ನು ಸುತ್ತುವರೆದು ಬೆದರಿಕೆ ಒಡ್ಡಬಹುದು. ಮಾತು ಕೇಳದಿದ್ದರೆ ನಮ್ಮ ಸ್ಥಳವನ್ನು ಸುತ್ತುವರಿಯಬಹುದು. ಅವರ ಬೇಡಿಕೆಯನ್ನು ಈಡೇರಿಸದಿದ್ದರೆ ನಮಗೆ ಕೆಲಸ ಮಾಡಲು ಬಿಡದಿರಬಹುದು ಎಂದು ತಮ್ಮ ಆತಂಕವನ್ನು ಬಹಿರಂಗಪಡಿಸಿದ್ದಾರೆ.

ಹೀಗಾಗಿ ಎಲ್ಲ ಜವಾಬ್ಧಾರಿಗಳೂ ನನ್ನ ಭುಜದ ಮೇಲೆ ಬಿದ್ದಿವೆ. ಆದರೆ ನಾನೊಬ್ಬನೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಮಹತ್ವದ ಘೋಷಣೆ ಮಾಡುತ್ತೇವೆ ಎಂದಿದ್ದಾರೆ. ಈ ಮೂಲಕ ಇಂಗ್ಲೆಂಡ್​​ನಲ್ಲೂ ಸೆರಮ್​ ಇನ್​​​​​ಸ್ಟಿಟ್ಯೂಟ್​ನ ಘಟಕ ತೆರೆಯುವ ಸುಳಿವು ನೀಡಿದ್ದಾರೆ.

ವೈ ಕೆಟಗೆರಿಯ ಭದ್ರತೆ ಒದಗಿಸಲಾಗಿತ್ತು
ಇತ್ತೀಚಿಗಷ್ಟೇ ಸೆರಮ್ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದಾರ್ ಪೂನಾವಾಲಾ ಭಾರತದಾದ್ಯಂತ ವೈ ಕೆಟೆಗಿರಿ ಭದ್ರತೆ ಪಡೆಯಲಿದ್ದಾರೆಂದು ಕೇಂದ್ರ ಗೃಹ ಇಲಾಖೆ ಹೇಳಿತ್ತು. ಸದರಿ ಭದ್ರತಾ ಕೆಟೆಗಿರಿಯು ಒಂದಿಬ್ಬರು ಕಮಾಂಡೊಗಳು ಸೇರಿದಂತೆ ಪೊಲೀಸರನ್ನು ಒಳಗೊಂಡಿದ್ದು, ಮೇ ಒಂದರಿಂದ ಲಸಿಕಾ ಅಭಿಯಾನದ ಮೂರನೆಯ ಹಂತ ಶುರುವಾಗುವ ಮೊದಲು ಪೂನಾವಾಲಾಗೆ ಭದ್ರತೆ ಒದಗಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ವರ್ಷವೊಂದರಲ್ಲಿ ತಯಾರಾಗುವ ಡೋಸ್​ಗಳ ಆಧಾರದಲ್ಲಿ ಪುಣೆಯಲ್ಲಿರುವ ಸಿರಮ್ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ (ಎಸ್​ಐಐ) ದೇಶದ ಅತಿದೊಡ್ಡ ಲಸಿಕಾ ಉತ್ಪಾದಿಸುವ ಸಂಸ್ಥೆಯಾಗಿದ್ದು ಭಾರತದ ಲಸಿಕಾ ಅಭಿಯಾನದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಸಂಸ್ಥೆಯ ಕೋವಿಷೀಲ್ಡ್ ಅಲ್ಲದೆ ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್ ಭಾರತದ ಖಾಸಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಮತ್ತೊಂದು ಲಸಿಕೆಯಾಗಿದೆ.

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ ಇಂದು 40,990 ಮಂದಿಗೆ ಕೊರೊನಾ ಸೋಂಕು, 271 ಸಾವು

Covid Helpline Numbers: ಆಕ್ಸಿಜನ್​, ರೆಮ್​ಡೆಸಿವರ್​ ಬೇಕಾದಲ್ಲಿ ಈ ಸಂಖ್ಯೆಗಳನ್ನು ಸಂಪರ್ಕಿಸಿ

(Getting aggressive calls from Indian powerfull people says Serum Institute CEO Adar Poonawalla)

Published On - 9:47 pm, Sat, 1 May 21