ಪಂಚರಾಜ್ಯಗಳ ವಿಧಾನಸಭೆ ಚುನಾವಣೆ, ಕರ್ನಾಟಕದ ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ

ಕೊರೊನಾ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿರುವ ಆತಂಕದ ನಡುವೆ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳಲ್ಲಿ ಭಾನುವಾರ ಮತ ಎಣಿಕೆ ನಡೆಯಲಿದೆ.

ಪಂಚರಾಜ್ಯಗಳ ವಿಧಾನಸಭೆ ಚುನಾವಣೆ, ಕರ್ನಾಟಕದ ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ
ಕೋವಿಡ್ ಹಿನ್ನೆಲೆಯಲ್ಲಿ ಮತ ಎಣಿಕೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. (ಸಂಗ್ರಹ ಚಿತ್ರ)
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: ರಶ್ಮಿ ಕಲ್ಲಕಟ್ಟ

Updated on:May 02, 2021 | 8:45 AM

ದೇಶದ ಜನರ ಕುತೂಹಲ ಕೆರಳಿಸಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೊರೊನಾ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿರುವ ಆತಂಕದ ನಡುವೆ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳಲ್ಲಿ ಮತ ಎಣಿಕೆ ನಡೆಯಲಿದೆ. ರಾಜಕೀಯ ಪಕ್ಷಗಳ ಏಜೆಂಟರು ಮತ ಎಣಿಕೆ ಕೇಂದ್ರ ಪ್ರವೇಶಿಸಲು ಕೋವಿಡ್ ನೆಗೆಟಿವ್ ವರದಿ ಇರಲೇಬೇಕು ಎಂಬ ನಿಯಮವನ್ನು ಈ ಬಾರಿ ಜಾರಿಗೆ ತರಲಾಗಿದೆ. ಚುನಾವಣಾ ಪೂರ್ವ ಹಾಗೂ ಚುನಾವಣಾ ನಂತರದ ಸಮೀಕ್ಷೆಗಳ ಸತ್ಯಾಸತ್ಯತೆ ಕೂಡ ಭಾನುವಾರ (ಮೇ 2) ಬಹಿರಂಗವಾಗಲಿದೆ. ಈ ಎಲ್ಲ ಫಲಿತಾಂಶದ ಕ್ಷಣಕ್ಷಣದ ಮಾಹಿತಿಗಳನ್ನು ಟಿವಿ 9 ಕನ್ನಡ ಸುದ್ದಿವಾಹಿನಿ ಮತ್ತು https://tv9kannada.com/ ಮೂಲಕ ಪಡೆಯಬಹುದಾಗಿದೆ. ಚುನಾವಣೆಗೆ ಸಂಬಂಧಿಸಿದ ಕ್ಷಣಕ್ಷಣದ ಅಪ್​ಡೇಟ್​ಗಾಗಿ https://tv9kannada.com/elections/livetv ಲಿಂಕ್ ಕ್ಲಿಕ್ ಮಾಡಿ.

ಪಶ್ಚಿಮ ಬಂಗಾಳ: ದೀದಿ VS ಮೋದಿ, ಪ್ರಶಾಂತ್ ಕಿಶೋರ್ Vs ಅಮಿತ್ ಶಾ ಕಳೆದೊಂದು ತಿಂಗಳಿನಿಂದ ದೇಶದಲ್ಲಿ ಹೆಚ್ಚು ಸದ್ದು ಮಾಡಿದ್ದು ಪಶ್ಚಿಮ ಬಂಗಾಳದ ಚುನಾವಣೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ನಡುವೆ ಹೋರಾಟಕ್ಕಿಂತಲೂ ಹೆಚ್ಚಾಗಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಹೋರಾಟ ನಡೆಯುತ್ತಿರುವಂತೆ ಬಿಂಬಿಸಲಾಯಿತು. ಜನರ ಕಣ್ಣಿಗೆ ಕಾಣಿಸುವಂತಿದ್ದ ಈ ಎರಡೂ ಮುಖಗಳ ಬೆನ್ನಿಗಿದ್ದವರು ಬಿಜೆಪಿಯ ‘ಚಾಣಕ್ಯ’ ಅಮಿತ್ ಶಾ ಮತ್ತು ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್.

ಪಶ್ಚಿಮ ಬಂಗಾಳದಲ್ಲಿ ನರೇಂದ್ರ ಮೋದಿ ಮತ್ತು ಮಮತಾ ಬ್ಯಾನರ್ಜಿ ತಮ್ಮ ಜನಪ್ರಿಯತೆ, ಪ್ರತಿಷ್ಠೆಯನ್ನು ಪಣಕ್ಕಿಟ್ಟು ಹೋರಾಟ ನಡೆಸಿದ್ದರು. ಈ ಹೋರಾಟದಲ್ಲಿ ಗೆಲ್ಲುವರಾರು ಎನ್ನುವುದು ಬಹಿರಂಗವಾಗಲಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯೇ ಗೆಲ್ಲಲಿ, ಟಿಎಂಸಿಯೇ ಗೆಲ್ಲಲಿ ಹೊಸ ಇತಿಹಾಸ ನಿರ್ಮಾಣವಾಗುವುದಂತೂ ಖಚಿತ. ಟಿಎಂಸಿ ಪಕ್ಷ ಗೆದ್ದರೇ, ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಂತೆ ಆಗುತ್ತೆ. ಬಿಜೆಪಿ ಗೆದ್ದರೆ, ಕಳೆದ ಚುನಾವಣೆಯಲ್ಲಿ ಕೇವಲ ಮೂರೇ ಮೂರು ಕ್ಷೇತ್ರಗಳಲ್ಲಿ ಗೆದ್ದಿದ್ದ ಪಕ್ಷ ಈಗ ಬಹುಮತ ಪಡೆದು ಅಧಿಕಾರಕ್ಕೆ ಬಂದಂತೆ ಆಗುತ್ತೆ.

ಉತ್ತರದ ಜಮ್ಮು ಕಾಶ್ಮೀರದಿಂದ ಹಿಡಿದು ದಕ್ಷಿಣದ ಕರ್ನಾಟಕದವರೆಗೆ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ. ಕೆಲ ರಾಜ್ಯಗಳಲ್ಲಿ ಅಧಿಕಾರಕ್ಕೆ ಮೈತ್ರಿಯನ್ನು ಆಸರೆಯಾಗಿ ಬಳಸಿಕೊಂಡಿದೆ. ಬಿಜೆಪಿಯ ಹಿಂದಿನ ರೂಪವಾದ ಭಾರತೀಯ ಜನಸಂಘಕ್ಕೆ ತನ್ನದೇ ಆದ ರಾಷ್ಟ್ರೀಯತೆಯ ಸಿದ್ದಾಂತ, ನೀತಿ, ನಿಲುವುಗಳನ್ನು ರೂಪಿಸಿ ಕೊಟ್ಟವರು ದೀನದಯಾಳ ಉಪಾಧ್ಯಾಯ. ಇಂದಿಗೂ ಬಿಜೆಪಿ ಪಕ್ಷ ಹಾಗೂ ನಾಯಕರ ಪಾಲಿಗೆ ದೀನದಯಾಳ್ ಉಪಾಧ್ಯಾಯ ಬಹುದೊಡ್ಡ ಆದರ್ಶ. ಆದರೇ ದೀನದಯಾಳ್ ಉಪಾಧ್ಯಾಯ ಅವರ ತವರು ರಾಜ್ಯ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿಯ ಕಮಲದ ಬಾವುಟ ಹಾರಿಸಲು ಸಾಧ್ಯವಾಗಿಲ್ಲ. ಈಗ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಎಂಬ ತ್ರಿಮೂರ್ತಿಗಳ ನೇತೃತ್ವದಲ್ಲಿ ಬಂಗಾಳದಲ್ಲಿ ಬಿಜೆಪಿ ಬಾವುಟ ಹಾರಿಸಲು ಭಾರಿ ಹೋರಾಟ ನಡೆಸಿದೆ.

ಆದರೆ, ಬಂಗಾಳದ ತಮ್ಮ ಕೋಟೆಗೆ ಬಿಜೆಪಿ ಲಗ್ಗೆ ಹಾಕದಂತೆ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಏಕಾಂಗಿಯಾಗಿ ಭಾರಿ ಪ್ರತಿರೋಧ ತೋರಿದ್ದಾರೆ. ‘ನಾನು ದುರ್ಬಲಳಲ್ಲ. ಬಂಗಾಳದ ಹುಲಿ, ಬಂಗಾಳದ ಮನೆ ಮಗಳ. ನಾನೂ ಕೂಡ ಹಿಂದೂ ಬ್ರಾಹ್ಮಣ ಕುಟುಂಬದ ಕುಡಿ. ಶಾಂಡಿಲ್ಯ ಗೋತ್ರಕ್ಕೆ ಸೇರಿದವಳು’ ಎಂದು ಮಮತಾ ಬ್ಯಾನರ್ಜಿ ಹೇಳುವ ಮೂಲಕ ಎಲ್ಲ ಪ್ರತ್ಯಾಸ್ತ್ರಗಳನ್ನು ಬಿಜೆಪಿಯ ಅಸ್ತ್ರಕ್ಕೆ ಪ್ರತಿಯಾಗಿ ಬಳಸಿದ್ದಾರೆ. ಬಿಜೆಪಿಯದ್ದು ಹಿಂದುತ್ವದ ಆಧಾರದ ಮತ ಧ್ರುವೀಕರಣವಾದರೆ, ಮಮತಾ ದೀದಿಯದ್ದು ಜಾತ್ಯಾತೀತ ಮತ ಧ್ರುವೀಕರಣದ ಅಸ್ತ್ರ. ಶೇ 30ರಷ್ಟಿರುವ ಮುಸ್ಲಿಂ ಮತಗಳು ಇಬ್ಭಾಗವಾಗದಂತೆ ಮಮತಾ ನೋಡಿಕೊಂಡಿದ್ದಾರೆ. ಮಮತಾ ತಂತ್ರಗಳು ಫಲ ಕೊಟ್ಟಿವೆಯಾ? ಇಲ್ಲವೇ ಬಿಜೆಪಿಯ ಪ್ರತಿತಂತ್ರಗಳು ಫಲ ಕೊಟ್ಟಿವೆಯಾ ಎನ್ನುವುದು ಮತಎಣಿಕೆಯ ಬಳಿಕ ಸ್ಪಷ್ಟವಾಗಲಿದೆ.

ಪಶ್ಚಿಮ ಬಂಗಾಳ ಸೇರಿದಂತೆ ಪಂಚ ರಾಜ್ಯಗಳಲ್ಲಿ ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಫಲಿತಾಂಶದ ಟ್ರೆಂಡ್ ಸ್ಪಷ್ಟವಾಗಲಿದೆ. ಸಂಪೂರ್ಣ ಮತ ಎಣಿಕೆ ಮುಗಿಯಲು ಸಂಜೆಯವರೆಗೂ ಕಾಲಾವಕಾಶ ಬೇಕಾಗಬಹುದು. ಪಶ್ಚಿಮ ಬಂಗಾಳದಲ್ಲಿ 78,799 ಮತಗಟ್ಟೆಗಳಿದ್ದವು. ಇವುಗಳ ಇವಿಎಂಗಳನ್ನು ತೆರೆದು ಮತದಾರರ ತೀರ್ಪುನ್ನು ಲೆಕ್ಕಹಾಕಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು 294 ಕ್ಷೇತ್ರಗಳಿದ್ದು, ಸರಳ ಬಹುಮತಕ್ಕೆ 148 ಕ್ಷೇತ್ರಗಳಲ್ಲಿ ಗೆಲ್ಲಬೇಕು. ಟಿಎಂಸಿ ಪಕ್ಷವೇ ಸ್ಪಷ್ಟ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.

ತಮಿಳುನಾಡಿನಲ್ಲಿ ‘ಸೂರ್ಯೋದಯ’ ನಮ್ಮ ನೆರೆಯ ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ತಮಿಳುನಾಡಿನ ಬಹುದೊಡ್ಡ ನಾಯಕರೆನಿಸಿದ್ದ ಜೆ.ಜಯಲಲಿತಾ ಮತ್ತು ಕೆ.ಕರುಣಾನಿಧಿ ಇಲ್ಲದೆ ನಡೆದಿರುವ ಮೊದಲ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಚುಕ್ಕಾಣಿ ಯಾರ ಪಾಲಾಗಲಿದೆ ಎನ್ನುವುದು ಇಂದು ನಿರ್ಧಾರವಾಗಲಿದೆ. ದ್ರಾವಿಡರ ನಾಡಿನಲ್ಲಿ ಈ ಬಾರಿಯ ಸೂರ್ಯೋದಯದ ಚಿಹ್ನೆ ಹೊಂದಿರುವ ಡಿಎಂಕೆ ಪಕ್ಷವು ಎರಡೆಲೆ ಚಿಹ್ನೆಯ ಎಐಎಡಿಎಂಕೆ ಪಕ್ಷವನ್ನು ಮಣಿಸಲಿದೆ ಎಂದು ಚುನಾವಣಾ ನಂತರದ ಸಮೀಕ್ಷೆಗಳು ಹೇಳಿವೆ. ಡಿಎಂಕೆ ಅಧಿಕಾರಕ್ಕೆ ಬಂದರೆ, ಎಂ.ಕೆ.ಸ್ಟಾಲಿನ್ ತಮಿಳುನಾಡಿನ ಮುಂದಿನ ಸಿಎಂ ಆಗಲಿದ್ದಾರೆ. ತಮಿಳುನಾಡಿನಲ್ಲಿ ಈ ಬಾರಿ ಖಾತೆ ತೆರೆಯಲು ಬಿಜೆಪಿ ಕೂಡ ಎಐಎಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡು ಹೋರಾಟ ನಡೆಸಿದೆ. ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ಕೆ.ಅಣ್ಣಾಮಲೈ ಅರವೈಕುರುಚಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದು, ಅಣ್ಣಾಮಲೈ ರಾಜಕೀಯ ಭವಿಷ್ಯವೂ ಈ ಬಾರಿ ನಿರ್ಧಾರವಾಗಲಿದೆ. ನಟ ಕಮಲಹಾಸನ್ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ನಟಿ ಖುಷ್ಬೂ ಥೌಸಂಡ್ ಲೈಟ್ಸ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ತಮಿಳುನಾಡಿನಲ್ಲಿ ಒಟ್ಟು 234 ಕ್ಷೇತ್ರಗಳಿದ್ದು, ಬಹುಮತಕ್ಕೆ 118 ಕ್ಷೇತ್ರಗಳಲ್ಲಿ ಯಾವುದಾದರೂ ಪಕ್ಷಕ್ಕೆ ಗೆಲುವು ಅನಿವಾರ್ಯ.

ಅಸ್ಸಾಂ ಸಿಎಂ ಯಾರಾಗ್ತಾರೆ? ಈಶಾನ್ಯ ಭಾರತದ ಪ್ರಮುಖ ರಾಜ್ಯ ಅಸ್ಸಾಂನ ಚುನಾವಣಾ ಫಲಿತಾಂಶ ಕೂಡ ಮೇ 2ರಂದು ಘೋಷಣೆಯಾಗಲಿದೆ. ಈ ಹಿಂದೆ ತರುಣ್ ಗೋಗೋಯಿ ಸತತವಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಆದರೆ, ಇತ್ತೀಚೆಗೆ ತರುಣ್ ಗೋಗೋಯಿ ನಿಧನರಾಗಿದ್ದಾರೆ. ಕಾಂಗ್ರೆಸ್ ಸಿಎಂ ಅಭ್ಯರ್ಥಿಯನ್ನೇ ಘೋಷಿಸಿರಲಿಲ್ಲ. ಬಿಜೆಪಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ಅತೀವ ವಿಶ್ವಾಸ ಇದೆ. ಆದರೆ, ಬಿಜೆಪಿಗೆ ಮತ್ತೆ ಬಹುಮತ ಸಿಕ್ಕರೇ, ಸಿಎಂ ಸ್ಥಾನವನ್ನು ಮತ್ತೆ ಸರ್ಬಾನಂದ ಸೋನವಾಲ್ ಗೆ ನೀಡುತ್ತೋ, ಹಿಮಂತ್ ಬಿಸ್ವಾ ಶರ್ಮಾಗೆ ನೀಡುತ್ತೋ ಎಂಬ ಕುತೂಹಲ ಇದೆ. ಅಸ್ಸಾಂನಲ್ಲಿ 126 ಕ್ಷೇತ್ರಗಳಿದ್ದು, ಬಹುಮತಕ್ಕೆ 64 ಕ್ಷೇತ್ರಗಳಲ್ಲಿ ಗೆಲುವು ಅಗತ್ಯ. ಅಸ್ಸಾಂನಲ್ಲಿ ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಎಕ್ಸಿಟ್ ಪೋಲ್ ಗಳು ಭವಿಷ್ಯ ನುಡಿದಿವೆ.

ದೇವರ ನಾಡು ಕೇರಳದಲ್ಲಿ ಯಾರಿಗೆ ಅಧಿಕಾರ? ದೇವರ ನಾಡು ಎಂದೇ ಹೆಸರಾದ ಕೇರಳ ವಿಧಾನಸಭೆಯ ಫಲಿತಾಂಶ ಕೂಡ ಇಂದು ಪ್ರಕಟವಾಗಲಿದೆ. ಕೇರಳದಲ್ಲಿ 1980 ರಿಂದ ಒಮ್ಮೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬಂದರೇ, ಮುಂದಿನ ಚುನಾವಣೆಯಲ್ಲಿ ಎಡಪಕ್ಷಗಳ ನೇತೃತ್ವದ ಎಲ್‌ಡಿಎಫ್ ಅಧಿಕಾರಕ್ಕೆ ಬರುತ್ತಿದೆ. ಆದರೇ, ಈ ಭಾರಿ ಈ ಟ್ರೆಂಡ್ ಮುಂದುವರಿಯಲ್ಲ ಎಂದು ಎಕ್ಸಿಟ್ ಪೋಲ್ ಗಳು ಭವಿಷ್ಯ ನುಡಿದಿವೆ. ಸತತ ಎರಡನೇ ಬಾರಿಗೆ ಆಡಳಿತರೂಢ ಸಿಪಿಎಂ   ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಅಧಿಕಾರಕ್ಕೆ ಬರಲಿದೆ ಎಂದು ಎಕ್ಸಿಟ್ ಪೋಲ್​ಗಳು ಹೇಳಿವೆ. ಪಾಲಕ್ಕಾಡ್​ನಿಂದ ಮೆಟ್ರೋ ಮ್ಯಾನ್ ಖ್ಯಾತಿಯ ಇ.ಶ್ರೀಧರನ್, ತ್ರಿಶೂರ್​ನಲ್ಲಿ ನಟ ಸುರೇಶ್ ಗೋಪಿ ಬಿಜೆಪಿ ಅಭ್ಯರ್ಥಿಗಳಾಗಿ ಅಖಾಡದಲ್ಲಿದ್ದಾರೆ. ಕಳೆದ ಬಾರಿ ಒ. ರಾಜಗೋಪಾಲ್  ಗೆಲ್ಲುವ ಮೂಲಕ ನೇಮಂ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿತ್ತು. ಈ ಬಾರಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲುತ್ತೆ ಎನ್ನುವ ಕುತೂಹಲ ಇದೆ. ಕೇರಳದಲ್ಲಿ ಒಟ್ಟು 140 ಕ್ಷೇತ್ರಗಳಿದ್ದು, ಅಧಿಕಾರಕ್ಕೇರಲು 71 ಕ್ಷೇತ್ರಗಳಲ್ಲಿ ಗೆಲುವು ಅನಿವಾರ್ಯ.

ಪುದುಚೇರಿಯಲ್ಲಿ ಅಧಿಕಾರಕ್ಕೆ ಬರಲಿದೆಯೇ ಎನ್​ಡಿಎ? ಪುದುಚೇರಿ ವಿಧಾನಸಭೆಗೂ ಏಪ್ರಿಲ್ 6ರಂದೇ ಚುನಾವಣೆ ನಡೆದಿದೆ. ಈ ಬಾರಿ ಪುದುಚೇರಿಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ಪಕ್ಷವು ಕಾಂಗ್ರೆಸ್, ಡಿಎಂಕೆ ಪಕ್ಷದಲ್ಲಿದ್ದ ಶಾಸಕರನ್ನೇ ಚುನಾವಣೆಗೂ ಮುನ್ನ ತನ್ನ ಕಡೆಗೆ ಸೆಳೆದುಕೊಂಡಿದೆ. ಎನ್.ಆರ್‌.ಕಾಂಗ್ರೆಸ್ ಪಕ್ಷದ ರಂಗಸ್ವಾಮಿ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಎನ್‌.ಆರ್.ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆದ್ದರೆ ಎನ್​ಡಿಎಂ ಮೈತ್ರಿಕೂಟ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಎಕ್ಸಿಟ್ ಪೋಲ್​ಗಳು ಭವಿಷ್ಯ ನುಡಿದಿವೆ. ಪುದುಚೇರಿಯಲ್ಲಿ ಎನ್​ಡಿಎ ಅಧಿಕಾರಕ್ಕೆ ಬಂದರೆ, ಎನ್‌.ಆರ್‌.ರಂಗಸ್ವಾಮಿ ಸಿಎಂ ಗಾದಿಗೇರಬಹುದು. ಪುದುಚೇರಿ ವಿಧಾನಸಭೆಯಲ್ಲಿ 30 ಸ್ಥಾನಗಳಿದ್ದು, ಮೂವರನ್ನು ನಾಮನಿರ್ದೇಶನ ಮಾಡಲಾಗುತ್ತೆ. ಹೀಗಾಗಿ ಬಹುಮತಕ್ಕೆ 17 ಕ್ಷೇತ್ರಗಳಲ್ಲಿ ಗೆಲುವು ಅಗತ್ಯ.

ಮತ ಎಣಿಕಾ ಕೇಂದ್ರಕ್ಕೆ ಬರುವ ರಾಜಕೀಯ ಪಕ್ಷಗಳ ಏಜೆಂಟರು, ಕೋವಿಡ್ ನೆಗೆಟಿವ್ ವರದಿ ತರಬೇಕು. ಕೋವಿಡ್ ನೆಗೆಟಿವ್ ವರದಿ ಇಲ್ಲದಿದ್ದರೇ, ಮತ ಎಣಿಕಾ ಕೇಂದ್ರಕ್ಕೆ ಪ್ರವೇಶ ನೀಡಲ್ಲ. ಜೊತೆಗೆ ಕೊರೊನಾದ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿದ್ದರೇ ಮಾತ್ರ ಪ್ರವೇಶ ನೀಡಲಾಗುತ್ತೆ. ಮತಎಣಿಕೆ ಕೇಂದ್ರಗಳ ಬಳಿ ವಿಜಯೋತ್ಸವಕ್ಕೂ ಅವಕಾಶ ಇಲ್ಲ. ಕೊರೊನಾ ಹರಡದಂತೆ ತಡೆಯಲು ಮತಎಣಿಕೆ ಕೇಂದ್ರಗಳ ಬಳಿ ವಿಜಯೋತ್ಸಾವಕ್ಕೆ ಬ್ರೇಕ್ ಹಾಕಲಾಗಿದೆ.

ಕರ್ನಾಟಕದ ಎರಡು ಅಸೆಂಬ್ಲಿ, ಒಂದು ಲೋಕಸಭಾ ಕ್ಷೇತ್ರದ ಫಲಿತಾಂಶ ಕರ್ನಾಟಕದ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಕೂಡ ಭಾನುವಾರವೇ ಘೋಷಣೆಯಾಗಲಿದೆ. ಮಸ್ಕಿಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಗೆಲುವಿಗಾಗಿ ಹೋರಾಟ ನಡೆದಿದೆ. ಬಸವ ಕಲ್ಯಾಣ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆದಿದೆ. ಇನ್ನೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಗೆಲುವಿಗಾಗಿ ಬಿಜೆಪಿ-ಕಾಂಗ್ರೆಸ್ ಭಾರಿ ಹೋರಾಟ ನಡೆಸಿವೆ. ಬೆಳಗಾವಿ ಜನರು ಸುರೇಶ್ ಅಂಗಡಿ ನಿಧನದ ಅನುಕಂಪ ತೋರಿ ಪತ್ನಿ ಮಂಗಳಾ ಅಂಗಡಿಯನ್ನು ಗೆಲ್ಲಿಸುತ್ತಾರಾ ಇಲ್ಲವೇ ಕಾಂಗ್ರೆಸ್ ಪಕ್ಷದ ಸತೀಶ್ ಜಾರಕಿಹೊಳಿ ಗೆಲ್ಲಿಸುತ್ತಾರಾ ಎನ್ನುವ ಪ್ರಶ್ನೆಗೆ ಮತಎಣಿಕೆ ಬಳಿಕ ಉತ್ತರ ಸಿಗಲಿದೆ.

(Countdown for Five State Assembly Elections Karnataka By Elections Result)

ಇದನ್ನೂ ಓದಿ: Assembly Election Result 2021: 4 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದಲ್ಲಿ ಮತಎಣಿಕೆ; ಒಟ್ಟು ಕ್ಷೇತ್ರಗಳು, ಸಮಯದ ವಿವರ ಇಲ್ಲಿದೆ..

ಇದನ್ನೂ ಓದಿ: Exit Poll Results 2021: ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ರಾಜ್ಯಗಳ ಗದ್ದುಗೆ ಯಾರಿಗೆ? ಎಲ್ಲ ಮತಗಟ್ಟೆ ಸಮೀಕ್ಷೆಗಳ ಸರಾಸರಿ ಲೆಕ್ಕಾಚಾರ ನೀಡುವ ಒಳನೋಟವೇನು?

Published On - 11:02 pm, Sat, 1 May 21

ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಬಿಜೆಪಿ ಶಾಸಕ ಪ್ರಭು ಚವ್ಹಾಣ್​ಗೆ ಮಹಾರಾಷ್ಟ್ರ ಶಿವಸೇನೆ ಪುಂಡರಿಂದ ಕಿರಿಕ್
ಬಿಜೆಪಿ ಶಾಸಕ ಪ್ರಭು ಚವ್ಹಾಣ್​ಗೆ ಮಹಾರಾಷ್ಟ್ರ ಶಿವಸೇನೆ ಪುಂಡರಿಂದ ಕಿರಿಕ್