ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಹೈದರಾಬಾದ್ನ ಮುಂಚಿತ್ತಾಲ್ನಲ್ಲಿ ಶ್ರೀರಾಮಾನುಜಾಚಾರ್ಯರ 216 ಅಡಿ ಎತ್ತರದ ಪಂಚಲೋಹದ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಅದಕ್ಕೂ ಮೊದಲು ವಿವಿಧ ವೈದಿಕ ಕಾರ್ಯಕ್ರಮವನ್ನು ಅವರು ನೆರವೇರಿಸಿದ್ದಾರೆ. ಮುಂಚಿತ್ತಾಲ್ನ ಶ್ರೀ ರಾಮಾನುಜಾಚಾರ್ಯ ಆಶ್ರಮದ ಸಮೀಪವೇ ಈ ಮೂರ್ತಿ ಇದ್ದು, ವಿಶ್ವದ ಎರಡನೇ ಅತ್ಯಂತ ಎತ್ತರದ ಪ್ರತಿಮೆಯೆನಿಸಿದೆ. ಹಾಗೇ, ಇದನ್ನು ಸಮಾನತೆಯ ಮೂರ್ತಿ (Statue of Equality) ಎಂದೂ ಕರೆಯಗುತ್ತಿದೆ.
11ನೇ ಶತಮಾನದ ಸಂತ ಶ್ರೀ ರಾಮಾನುಜಾಚಾರ್ಯರ ಜನ್ಮ ಸಹಸ್ರಾಬ್ದಿ ಕಾರ್ಯಕ್ರಮ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳೂ ನಿನ್ನೆ ನಡೆದಿವೆ. ಅದರಲ್ಲೆಲ್ಲ ಪಾಲ್ಗೊಂಡ ಪ್ರಧಾನಿ ಮೋದಿ, ವಿಶ್ವಕ್ಸೇನಾ ಇಷ್ಟಿ ಯಾಗದ ಪೂರ್ಣಾಹುತಿಯಲ್ಲೂ ಭಾಗವಹಿಸಿದ್ದಾರೆ. (ಮುಂದಿನ ಎಲ್ಲ ಇಷ್ಟಾರ್ಥಗಳೂ ಸಿದ್ಧಿಸಲಿ ಎಂಬ ಕಾರಣಕ್ಕೆ ಮಾಡುವ ಯಾಗ ಇದು). ಇದೇ ವೇಳೆ ರಾಮಾನುಜಾಚಾರ್ಯ ಆಶ್ರಮದ ತ್ರಿದಂಡಿ ಚಿನ್ನ ಜೀಯರ್ ಸ್ವಾಮೀಜಿಯವರು ಪ್ರಧಾನಿ ನರೇಂದ್ರ ಮೋದಿಯವರ ಕೈಯಿಗೆ (ಮಣಿಕಟ್ಟು) ಚಿನ್ನದ ಕಂಕಣ (bracelet)ವನ್ನು ಕಟ್ಟಿದ್ದಾರೆ.
ಎರಡು ಬಂಗಾರದ ಕಂಕಣಗಳನ್ನು ಕಟ್ಟಲಾಗಿದ್ದು, ಅದನ್ನು ಪ್ರಧಾನಿಗೆ ಕಟ್ಟುವುದಕ್ಕೂ ಮೊದಲು ಮಂತ್ರಗಳಿಂದ ಪವಿತ್ರಗೊಳಿಸಲಾಗಿದೆ. ಸಂಕಲ್ಪದೊಂದಿಗೆ ಇಷ್ಟಿ ಯಾಗದಲ್ಲಿ ಪಾಲ್ಗೊಳ್ಳುವ ಯಾರಿಗಾದರೂ ಸರಿ ಪವಿತ್ರ ಕಂಕಣ ಕಟ್ಟಲಾಗುವುದು. ಹಾಗೇ, ಪ್ರಧಾನಿ ನರೇಂದ್ರ ಮೋದಿ ನಿನ್ನೆ ಶ್ರೀರಾಮಾನುಜಾಚಾರ್ಯರ ಸಮಾನತೆ ಮೂರ್ತಿ ಉದ್ಘಾಟನೆಗೂ ಪೂರ್ವ ವಿಶ್ವಕ್ಸೇನಾ ಇಷ್ಟಿ ಯಾಗದಲ್ಲಿ ಪಾಲ್ಗೊಂಡಿದ್ದರಿಂದ ಅವರ ಕೈಗೂ ಕಂಕಣಗಳನ್ನು ಕಟ್ಟಲಾಗಿದೆ ಎಂದು ಆಶ್ರಮ ತಿಳಿಸಿದೆ.
ರಾಮಾನುಜಾಚಾರ್ಯರು ಸಮಾನತೆಯ ಪ್ರತಿಪಾದಕರಾಗಿದ್ದರು. ನಂಬಿಕೆ, ಜಾತಿ, ಪಂಥ ಸೇರಿ ಬದುಕಿನ ಎಲ್ಲದರಲ್ಲೂ ಸಮಾನತೆ ಇರಬೇಕು ಎಂದು ಹೇಳಿದ್ದರು. ಡಾ. ಅಂಬೇಡ್ಕರ್ ಕೂಡ ರಾಮಾನುಜಾಚಾರ್ಯರ ತತ್ವವನ್ನು ಎತ್ತಿಹಿಡಿದಿದ್ದರು. ಹೀಗಾಗಿ ಅವರ ಪ್ರತಿಮೆಗೆ ಸಮಾನತೆ ಮೂರ್ತಿ ಎಂದು ಕರೆಯಲಾಗಿದೆ. ರಾಮಾನುಜಾಚಾರ್ಯರ ಪಂಚಲೋಹದ ಪ್ರತಿಮೆ (ಸಮಾನತೆ ಪ್ರತಿಮೆ) ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದು ಅನಾವರಣಗೊಂಡ ಶ್ರೀರಾಮಾನುಜಾಚಾರ್ಯರ ಸಮಾನತೆ ಮೂರ್ತಿ ಈ ದೇಶದ ಯುವಜನರನ್ನು ಪ್ರೋತ್ಸಾಹಿಸಲಿದೆ. ಇದು ರಾಮಾನುಜಾಚಾರ್ಯರ ಜ್ಞಾನ, ನಿರ್ಲಿಪ್ತತೆ ಮತ್ತು ಆದರ್ಶಗಳ ಪ್ರತೀಕವಾದ ಮೂರ್ತಿ ಎಂದು ಹೇಳಿದರು. ಮಹಾನ್ ನಾಯಕ, ಸಮಾನತೆಯನ್ನು ಪ್ರತಿಪಾದಿಸಿದ್ದ ಡಾ. ಅಂಬೇಡ್ಕರ್ ಅವರು ಶ್ರೀರಾಮಾನುಜಾಚಾರ್ಯರ ಬಹುದೊಡ್ಡ ಅನುಯಾಯಿಯಾಗಿದ್ದರು. ಸರ್ವರಿಗೂ ಸಮಬಾಳು, ಸಮಾಜ ಎಂಬ ಅವರ ತತ್ವಾದರ್ಶಗಳನ್ನು ಪಾಲಿಸಿದರು. ರಾಮಾನುಜಾಚಾರ್ಯರು ಸಂಸ್ಕೃತ ಗ್ರಂಥ ಸಂಯೋಜನೆ ಮಾಡಿದರು ಮತ್ತು ಭಕ್ತಿ ಮಾರ್ಗದಲ್ಲಿ ತಮಿಳು ಭಾಷೆಗೂ ಅಷ್ಟೇ ಪ್ರಾಮುಖ್ಯತೆ ನೀಡಿದರು ಎಂದು ಮೋದಿಯವರು ಹೇಳಿದರು. ಅಂದಹಾಗೇ, ಈ ಸಹಸ್ರಾಬ್ದಿ ಕಾರ್ಯಕ್ರಮ 12 ದಿನ ನಡೆಯಲಿದೆ.