ಎಲ್ಲರಿಗೂ ಜೀವನದಲ್ಲಿ ತಾವು ಏನಾದರೂ ಸಾಧಿಸಬೇಕೆಂಬ ಛಲವಿರುತ್ತದೆ, ಅದನ್ನು ಸಾಧಿಸಿದಾಗ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ.
15 ವರ್ಷದ ಬಾಲಕಿ ಸತತ 8 ಗಂಟೆಗಳ ಕಾಲ ಈಜುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ಗೆ ಸೇರ್ಪಡೆಯಾಗಿ ಪೋಷಕರು ಮಾತ್ರವಲ್ಲದೇ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾಳೆ. ಛತ್ತೀಸ್ಗಢದ ದುರ್ಗ್ ಜಿಲ್ಲೆಯ ಪುರೈ ಗ್ರಾಮದ 15 ವರ್ಷದ ಬಾಲಕಿ ಚಂದ್ರಕಲಾ ಓಜಾ 8 ಗಂಟೆಗಳ ಕಾಲ ನಿರಂತರವಾಗಿ ಈಜುವ ಮೂಲಕ ಸಾಧನೆ ಮಾಡಿದ್ದಾಳೆ.
10ನೇ ತರಗತಿ ವಿದ್ಯಾರ್ಥಿನಿಯಾಗಿರುವ ಚಂದ್ರಕಲಾ, ತನ್ನ 5ನೇ ವಯಸ್ಸಿನಿಂದ ಈಜು ಅಭ್ಯಾಸ ಮಾಡುತ್ತಿದ್ದು, ರಾಷ್ಟ್ರ ಮತ್ತು ರಾಜ್ಯ ಮಟ್ಟದ ಆಟಗಾರರ ಕುಟುಂಬದಿಂದ ಬಂದವರು. ಜ್ಯೂನಿಯರ್ ಓಪನ್ ರಾಷ್ಟ್ರೀಯ ಮತ್ತು ರಾಜ್ಯ ಚಾಂಪಿಯನ್ಶಿಪ್ಗಳಲ್ಲಿ 3 ಚಿನ್ನ, 2 ಬೆಳ್ಳಿ ಪದಕಗಳನ್ನು ಅವರು ಗೆದ್ದಿದ್ದಾರೆ. ಅವರ ಅಕ್ಕ ಭೂಮಿಕಾ ಕೂಡ ಈಜುಗಾರ್ತಿ.
ಮತ್ತಷ್ಟು ಓದಿ: ಸೀರೆಯುಟ್ಟ ಅಜ್ಜಿ ನದಿಗೆ ಧುಮುಕಿದ್ದಕ್ಕೆ ಭಲೇ ಭಲೇ ಎನ್ನುತ್ತಿರುವ ನೆಟ್ಟಿಗರು
ಬೆಳಗ್ಗೆ 5.10ಕ್ಕೆ ಪುರೈ ಗ್ರಾಮದ ಹೊಂಡದಲ್ಲಿ ಪ್ರಾರ್ಥನೆ ಮುಗಿಸಿ ಈಜಲು ಪ್ರಾರಂಭಿಸಿದ ಚಂದ್ರಕಲಾ ಮಧ್ಯಾಹ್ನ 1.10ರವರೆಗೂ ಈಜಿದ್ದರು.
ಈ ಹೊಸ ದಾಖಲೆ ಸೃಷ್ಟಿಸಲು ಚಂದ್ರಕಲಾ ನಿತ್ಯ 10 ರಿಂದ 12 ಗಂಟೆಗಳ ಕಾಲ ಅಭ್ಯಾಸ ನಡೆಸುತ್ತಿದ್ದರು. ಆಕೆಗೆ ತರಬೇತಿ ನೀಡಿದವರು ಓಂ ಕುಮಾರ್ ಓಜಾ. ಇಡೀ ಗ್ರಾಮವು ಆಕೆಗೆ ಬೆಂಬಲ ನೀಡಿದೆ.
8 ಗಂಟೆಗಳ ಕಾಲ ಈಜಿ ಹೊರಗಡೆ ಬಂದಾಗ ಎಲ್ಲರೂ ಅಭಿನಂದಿಸಿದರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಏಷ್ಯಾ ಮುಖ್ಯಸ್ಥ ಡಾ ಮನೀಷ್ ಬಿಷ್ಣೋಯ್ ಅವರ ಸಾಧನೆಯನ್ನು ಘೋಷಿಸಿದರು ಮತ್ತು ರಾಜ್ಯ ಗೃಹ ಸಚಿವ ತಾಮ್ರಧ್ವಜ್ ಸಾಹು ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಮಾಣಪತ್ರ ಮತ್ತು ಪದಕವನ್ನು ನೀಡಿದರು. ಪ್ರಸ್ತುತ, ಪುರೈನಲ್ಲಿ 103 ಯುವ ಈಜುಪಟುಗಳಿದ್ದಾರೆ, ಅವರು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಅನುಭವ ಹೊಂದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ