ಗುಡ್ ಫ್ರೈ ಡೇ.. ಯೇಸುವನ್ನು ಶಿಲುಬೆಗೆ ಏರಿಸಿದ ದಿನವನ್ನು ಸ್ಮರಿಸಲು ಕ್ರಿಶ್ಚಿಯನ್ ಸಮುದಾಯದವರು ಆಚರಿಸುವ ಒಂದು ಹಬ್ಬ. ಈ ಬಾರಿ ಏಪ್ರಿಲ್ 2ರಂದು ಗುಡ್ ಫ್ರೈಡೇ ಆಚರಣೆ ನಡೆಯಲಿದೆ. ಇದನ್ನು ಪವಿತ್ರ ಶುಕ್ರವಾರ, ಮಹಾ ಶುಕ್ರವಾರ, ಕಪ್ಪು ಶುಕ್ರವಾರ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ. ಹಾಗೇ, ಕ್ರಿಶ್ಚಿಯನ್ನರು ಇದನ್ನು ಪ್ರಾಯಶ್ಚಿತ್ತ, ದುಃಖ ಮತ್ತು ಉಪವಾಸದ ದಿನವೆಂದು ಪರಿಗಣಿಸುತ್ತಾರೆ. ಇದನ್ನೊಂದು ವಿಶೇಷ ದಿನವೆಂದು ಭಾವಿಸಿ, ಏಸು ಕ್ರಿಸ್ತ ಬದುಕಿನುದ್ದಕ್ಕೂ ಸಾರಿದ ಪ್ರೀತಿ, ಮಾನವೀಯ ಮೌಲ್ಯಗಳ ಸಂದೇಶವನ್ನು ನೆನಪಿಸಿಕೊಳ್ಳುತ್ತಾರೆ. ಬೆಳಗ್ಗೆಯಿಂದಲೂ ಚರ್ಚ್ಗಳಲ್ಲಿ ಪ್ರಾರ್ಥನೆ, ಅವರದ್ದೇ ಆದ ರೀತಿಯ ವ್ರತಗಳು ನಡೆಯುತ್ತವೆ.
ಗುಡ್ಫ್ರೈಡೇ ಪದ ಬಳಕೆ ಎಲ್ಲಿಂದ?
ಈ ಗುಡ್ಫ್ರೈಡೇ ಎಂಬ ಶಬ್ದ ಮೊದಲು ಬಳಕೆಯಾಗಿದ್ದು 1290ರಲ್ಲಿ, ದಿ ಸೌತ್ ಇಂಗ್ಲಿಷ್ ಲೆಜೆಂಡರಿ ಎಂಬ ಹ್ಯಾಗೋಗ್ರಾಫಿಕ್ ಪುಸ್ತಕದಲ್ಲಿ ಎಂದು ಹೇಳಲಾಗಿದೆ. ಹಾಗೇ, ಯೇಸುಕ್ರಿಸ್ತ ಎಲ್ಲ ಮಾನವರ ಮೇಲೆ ತನಗಿರುವ ಅಗಾಧ ಪ್ರೀತಿಯನ್ನು ಸಾರಿದ ದಿನವನ್ನಾಗಿ ಗುಡ್ ಫ್ರೈಡೇ ಆಚರಿಸಲಾಗುತ್ತದೆ ಎಂದು 1885-1960ರವರೆಗೆ ಯುಎಸ್ನ ಕ್ಯಾಥೋಲಿಕ್ ಶಾಲೆಯಲ್ಲಿ ಬಳಕೆಯಾದ ಪಠ್ಯ ಬಾಲ್ಟಿಮೋರ್ ಕ್ಯಾಟೆಕಿಸಮ್ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಹಾಗೇ, ಗುಡ್ ಫ್ರೈಡೇ ಬಗ್ಗೆ ಯಾವುದೇ ಒಂದು ನಿರ್ದಿಷ್ಟತೆ, ಸ್ಪಷ್ಟತೆ ಇಲ್ಲವೆಂದು 1907ರ ಕ್ಯಾಥೋಲಿಕ್ ಎನ್ಕ್ಲೋಪೀಡಿಯಾದಲ್ಲಿ ಹೇಳಲಾಗಿದೆ. ಇನ್ನೂ ಕೆಲವರು ಗಾಡ್ ಫ್ರೈಡೇ (GOD FRIDAY)ಯಿಂದಲೇ ಗುಡ್ ಫ್ರೈಡೇ ಆಗಿದೆ ಎಂದೂ ನಂಬುತ್ತಾರೆ.
ಗುಡ್ಫ್ರೈಡೇ ಆಚರಣೆ ಹೇಗೆ?
ಗುಡ್ಫ್ರೈಡೇ ದಿನ ಕ್ರಿಶ್ಚಿಯನ್ನರು ಜೀಸಸ್ ಸ್ಮರಣೆ ಮಾಡುತ್ತಾರೆ. ಕೆಲವರು ಶೋಕದ ಸಂಕೇತವಾಗಿ ಕಪ್ಪು ಬಟ್ಟೆಯನ್ನೂ ಧರಿಸುತ್ತಾರೆ. ಈ ದಿನ ಚರ್ಚ್ನಲ್ಲಿ ಕ್ಯಾಂಡಲ್ ಹಚ್ಚುವುದಿಲ್ಲ.. ಬೆಲ್ ರಿಂಗ್ ಮಾಡುವುದಿಲ್ಲ. ಈ ದಿನವನ್ನು ಶುಭದಿನ ಎಂದು ಪರಿಗಣಿಸಿ, ಹಲವರು ಸಾಮಾಜಿಕ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಗಿಡಗಳನ್ನು ನೆಡುತ್ತಾರೆ.. ತಮ್ಮ ಕೈಲಾಗಿದ್ದನ್ನು ದಾನ ಮಾಡುತ್ತಾರೆ.
ಏನಿದು ಈಸ್ಟರ್ ಭಾನುವಾರ?
ಗುಡ್ ಫ್ರೈಡೇ ಏಸುವಿನ ಮರಣದ ದಿನವನ್ನು ಬಿಂಬಿಸಿದರೆ, ಈಸ್ಟರ್ ಭಾನುವಾರ ಅವರ ಪುನರ್ಜನ್ಮದ ಪ್ರತೀಕವಾಗಿದೆ. ಏಸು ಶಿಲುಬೆಗೆ ಏರಿದ ಮೂರು ದಿನದಲ್ಲಿ ಮತ್ತೆ ಪುನರ್ಜನ್ಮ ಪಡೆದು, ಮತ್ತೆ ತಮ್ಮ ಅನುಯಾಯಿಗಳೊಂದಿಗೆ 40 ದಿನ ಕಳೆದರು ಎಂಬ ನಂಬಿಕೆ ಇದೆ. ಈ ದಿನವನ್ನು ಈಸ್ಟರ್ ಭಾನುವಾರವನ್ನಾಗಿ ಆಚರಿಸಲಾಗುತ್ತದೆ.
ಇದನ್ನೂ ಓದಿ: ಏಸು ಬದುಕಿನ ಗುಟ್ಟು; ಅಷ್ಟೆಲ್ಲಾ ಜನಬೆಂಬಲವಿದ್ದರೂ ರಾಜನಾಗದೆ ಶಿಲುಬೆ ಏರುವ ಮೂಲಕ ಕೊಟ್ಟ ಸಂದೇಶ ಒಂದೆರೆಡಲ್ಲ
Published On - 11:25 am, Fri, 2 April 21