ಕಾರು ಚಾಲಕರೇ ಗಮನಿಸಿ; ಪಿಯುಸಿ ಪ್ರಮಾಣಪತ್ರದ ನಿಯಮಗಳಲ್ಲಿ ಮಹತ್ವದ ಬದಲಾವಣೆ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕೇಂದ್ರ ಮೋಟಾರು ವಾಹನ (16ನೇ ತಿದ್ದುಪಡಿ) ನಿಯಮಗಳು, 2026ರ ಅಡಿಯಲ್ಲಿ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದ (ಪಿಯುಸಿ) ಮಾನ್ಯತೆಯ ಅವಧಿಯನ್ನು ಪರಿಷ್ಕರಿಸಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ವಾಹನದ ಹೊರಸೂಸುವಿಕೆ ಮಾನದಂಡ, ವಾಹನದ ವಯಸ್ಸು (ಮೊದಲ ನೋಂದಣಿಯಾದ ದಿನಾಂಕದಿಂದ) ಮತ್ತು ವಾಹನದ ವರ್ಗವನ್ನು (ಖಾಸಗಿ ಅಥವಾ ವಾಣಿಜ್ಯ) ಆಧರಿಸಿ ಹೊಸ ಮಾನ್ಯತೆಯ ಅವಧಿಯನ್ನು ನಿಗದಿಪಡಿಸಲಾಗಿದೆ.

ನವದೆಹಲಿ, ನವೆಂಬರ್ 19: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವ ಕೇಂದ್ರ ಮೋಟಾರು ವಾಹನ (16ನೇ ತಿದ್ದುಪಡಿ) ನಿಯಮಗಳು, 2026ರ ಅಡಿಯಲ್ಲಿ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದ (ಪಿಯುಸಿ ಸರ್ಟಿಫಿಕೆಟ್) ಮಾನ್ಯತೆಯ ನಿಯಮಗಳನ್ನು ಪರಿಷ್ಕರಿಸಿದೆ. ನವೆಂಬರ್ 19ರಿಂದ ಜಾರಿಗೆ ಬಂದಿರುವ ಈ ಹೊಸ ನಿಯಮಗಳಿಂದ ಹೊಸ BS-VI ವಾಹನಗಳ ಮಾಲೀಕರಿಗೆ ದೀರ್ಘಾವಧಿಯ ನವೀಕರಣದ ಪ್ರಯೋಜನ ಸಿಗಲಿದ್ದು, ಹಳೆಯ ವಾಹನಗಳಿಗೆ ಕಟ್ಟುನಿಟ್ಟಿನ ತಪಾಸಣೆ ಕಡ್ಡಾಯವಾಗಿದೆ. ಪರಿಷ್ಕೃತ ನಿಯಮಗಳ ಅಡಿಯಲ್ಲಿ, 6 ವರ್ಷಗಳವರೆಗಿನ ಖಾಸಗಿ BS-VI ವಾಹನಗಳಿಗೆ ಪ್ರತಿ 3 ವರ್ಷಗಳಿಗೊಮ್ಮೆ ಹೊಸ ಪಿಯುಸಿ ಪ್ರಮಾಣಪತ್ರದ ಅಗತ್ಯವಿದ್ದರೆ, ಅದೇ ವಯೋಮಾನದ ಸಾರಿಗೆ (ವಾಣಿಜ್ಯ) ವಾಹನಗಳಿಗೆ ಪ್ರತಿ 2 ವರ್ಷಗಳಿಗೊಮ್ಮೆ ನವೀಕರಣದ ಅಗತ್ಯವಿರುತ್ತದೆ.
ನವೀಕರಣದ ಫ್ರೀಕ್ವೆನ್ಸಿ ವಾಹನದ ಎಮಿಷನ್ ಸ್ಟಾಂಡರ್ಡ್, ವಯಸ್ಸು ಮತ್ತು ವರ್ಗವನ್ನು ಅವಲಂಬಿಸಿರುತ್ತದೆ. ಹಳೆಯ BS-VI ವಾಹನಗಳಿಗೆ ಹೆಚ್ಚು ಬಾರಿ ನವೀಕರಣದ ಅಗತ್ಯ ಮುಂದುವರಿದರೆ, BS-I, BS-II ಮತ್ತು BS-III ಮಾನದಂಡಗಳನ್ನು ಅನುಸರಿಸುವ ವಾಹನಗಳು ಪ್ರತಿ 3 ತಿಂಗಳಿಗೊಮ್ಮೆ ತಮ್ಮ ಪ್ರಮಾಣಪತ್ರಗಳನ್ನು ನವೀಕರಿಸಬೇಕಾಗುತ್ತದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ನವೆಂಬರ್ 13ರಂದು ಕೇಂದ್ರ ಮೋಟಾರು ವಾಹನ (ಹದಿನಾರನೇ ತಿದ್ದುಪಡಿ) ನಿಯಮಗಳು, 2026ರ ಮೂಲಕ ಈ ಬದಲಾವಣೆಗಳನ್ನು ಅಧಿಸೂಚಿಸಿದೆ. ಇಂದು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ತಕ್ಷಣ ಈ ನಿಯಮಗಳು ಜಾರಿಗೆ ಬಂದಿವೆ.
ಪರಿಷ್ಕೃತ ವೇಳಾಪಟ್ಟಿಯು BS-VI ಹೊರಸೂಸುವಿಕೆ ಮಾನದಂಡಗಳನ್ನು ಅನುಸರಿಸುವ ಖಾಸಗಿ ಮತ್ತು ಸಾರಿಗೆ ವಾಹನಗಳಿಗೆ ವಿಭಿನ್ನ ಮಾನ್ಯತೆಯ ಅವಧಿಗಳನ್ನು ನಿಗದಿಪಡಿಸಿದೆ. ವಾಹನದ ವಯಸ್ಸನ್ನು ಅದು ಮೊದಲ ಬಾರಿಗೆ ನೋಂದಣಿಯಾದ ದಿನಾಂಕದಿಂದ ಲೆಕ್ಕಹಾಕಲಾಗುತ್ತದೆ.
ಇದನ್ನೂ ಓದಿ: ಪ್ರತಿ ಕಿ.ಮೀ.ಗೆ ಕೇವಲ 13 ಪೈಸೆ ವೆಚ್ಚದಲ್ಲಿ ಚಲಿಸುವ ಸೋಲಾರ್ ವಾಹನ ವಿನ್ಯಾಸಗೊಳಿಸಿದ 17 ವರ್ಷದ ವಿದ್ಯಾರ್ಥಿ
ಹೊಸ ನಿಯಮದ ಪ್ರಕಾರ, ಹೊಸ BS-VI ವಾಹನಗಳಿಗೆ ದೀರ್ಘಾವಧಿಯ ಮಾನ್ಯತೆ ನೀಡಲಾಗಿದ್ದು, ಹಳೆಯ ವಾಹನಗಳಿಗೆ (BS-I ರಿಂದ BS-IV) ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ವಾಹನದ ವಯಸ್ಸು ಅಥವಾ ವರ್ಗ (ಖಾಸಗಿ/ ವಾಣಿಜ್ಯ) ಯಾವುದೇ ಆಗಿರಲಿ, ದೇಶಾದ್ಯಂತ ಈ ವಾಹನಗಳಿಗೆ ಪ್ರತಿ 3 ತಿಂಗಳಿಗೊಮ್ಮೆ ಪಿಯುಸಿ ತಪಾಸಣೆ ಕಡ್ಡಾಯವಾಗಿದೆ. ದೇಶಾದ್ಯಂತ ಎಲ್ಲಾ BS-IV ವಾಹನಗಳ ಪಿಯುಸಿ ಪ್ರಮಾಣಪತ್ರದ ಅವಧಿಯನ್ನು 1 ವರ್ಷದಿಂದ 6 ತಿಂಗಳಿಗೆ ಇಳಿಸಲಾಗಿದೆ.
ನವೀಕರಿಸಿದ ಪಿಯುಸಿ ಪ್ರಮಾಣಪತ್ರವು ಯಾವಾಗ ಜಾರಿಗೆ ಬರುತ್ತದೆ?:
ವಾಹನ ಮಾಲೀಕರು ಯಾವಾಗ ಅರ್ಜಿ ಸಲ್ಲಿಸುತ್ತಾರೆ ಎಂಬುದರ ಆಧಾರದ ಮೇಲೆ ನವೀಕರಿಸಿದ ಪಿಯುಸಿ ಪ್ರಮಾಣಪತ್ರವು ಯಾವಾಗ ಜಾರಿಗೆ ಬರುತ್ತದೆ ಎಂಬುದನ್ನು ತಿದ್ದುಪಡಿ ಮಾಡಲಾದ ನಿಯಮಗಳು ಸ್ಪಷ್ಟಪಡಿಸುತ್ತವೆ. ಅಸ್ತಿತ್ವದಲ್ಲಿರುವ ಪ್ರಮಾಣಪತ್ರದ ಅವಧಿ ಮುಗಿಯುವ 10 ದಿನಗಳ ಒಳಗೆ ನವೀಕರಣಕ್ಕೆ ಅರ್ಜಿ ಸಲ್ಲಿಸಿದರೆ, ಹೊಸ ಪ್ರಮಾಣಪತ್ರವು ಹಿಂದಿನ ಪ್ರಮಾಣಪತ್ರದ ಅವಧಿ ಮುಗಿಯುವ ದಿನಾಂಕದಿಂದಲೇ ಜಾರಿಗೆ ಬರುತ್ತದೆ. ಅಸ್ತಿತ್ವದಲ್ಲಿರುವ ಪ್ರಮಾಣಪತ್ರದ ಅವಧಿ ಮುಗಿದ ನಂತರ ಅರ್ಜಿ ಸಲ್ಲಿಸಿದರೆ, ನವೀಕರಿಸಿದ ಪ್ರಮಾಣಪತ್ರವು ನವೀಕರಿಸಿದ ದಿನಾಂಕದಿಂದ ಜಾರಿಗೆ ಬರುತ್ತದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರಿ ವಾಹನಗಳಿಗೆ ಹೊಸ ರೂಲ್ಸ್; ನಗರದ ಮೂಲಕ ಹಾದುಹೋಗುವ ಹೊರಜಿಲ್ಲೆಗಳ ಟ್ಯಾಂಕರ್‌ಗಳಿಗೆ ನಿರ್ಬಂಧ!
ಹಳೆಯ ಪ್ರಮಾಣಪತ್ರಗಳಿಗೆ ಏನು ನಿಯಮ?:
ಹೊಸ ನಿಯಮ ಜಾರಿಗೆ ಬರುವ ಮೊದಲು ಪಡೆದಿರುವ ಪಿಯುಸಿ ಪ್ರಮಾಣಪತ್ರಗಳು ಅವುಗಳ ಅವಧಿ ಮುಗಿಯುವವರೆಗೂ ಮಾನ್ಯವಾಗಿರುತ್ತವೆ. ಅವುಗಳ ಅವಧಿ ಮುಗಿದ ನಂತರ ಮುಂದಿನ ಬಾರಿ ನವೀಕರಿಸುವಾಗ ಹೊಸ ನಿಯಮದ ಮಾನ್ಯತೆಯ ಅವಧಿ ಅನ್ವಯವಾಗುತ್ತದೆ.
ಪ್ರಸ್ತುತ ಪಿಯುಸಿ ಪ್ರಮಾಣಪತ್ರದ ಅವಧಿ ಮುಗಿಯಲು 10 ದಿನಗಳು ಇರುವಾಗಲೇ ನವೀಕರಿಸಿದರೆ, ಹೊಸ ಪ್ರಮಾಣಪತ್ರದ ಮಾನ್ಯತೆಯು ಹಳೆಯ ಪ್ರಮಾಣಪತ್ರದ ಅವಧಿ ಮುಗಿಯುವ ದಿನಾಂಕದಿಂದಲೇ ಪ್ರಾರಂಭವಾಗುತ್ತದೆ. ಇದರಿಂದ ಮುಂಚಿತವಾಗಿ ನವೀಕರಿಸುವವರಿಗೆ ಯಾವುದೇ ದಿನಗಳ ನಷ್ಟವಾಗುವುದಿಲ್ಲ. ಆದರೆ ಅವಧಿ ಮುಗಿದ ನಂತರ ನವೀಕರಿಸಿದರೆ, ಪರೀಕ್ಷೆ ನಡೆಸಿದ ದಿನದಿಂದ ಮಾನ್ಯತೆ ಲೆಕ್ಕಕ್ಕೆ ಬರುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




