
ನವದೆಹಲಿ, ಡಿಸೆಂಬರ್ 24: ಅಮೂಲ್ಯ ನೈಸರ್ಗಿಕ ಸಂಪತ್ತಿರುವ ಅರಾವಳಿ ಪರ್ವತ ಶ್ರೇಣಿಯನ್ನು (Aravali Range) ಸಂಪೂರ್ಣವಾಗಿ ರಕ್ಷಿಸಲು ಬದ್ಧವಾಗಿದ್ದೇವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಅರಾವಳಿ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮೂಲಕ ಈ ಸೂಕ್ಷ್ಮ ಪ್ರದೇಶವನ್ನು ನಾಶ ಮಾಡುವ ಪ್ರಯತ್ನ ನಡೆದಿದೆ ಎನ್ನುವ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಸ್ಪಷ್ಟನೆ ಕೊಟ್ಟಿದೆ. ಇಂದು ಪತ್ರಿಕಾ ಹೇಳಿಕೆ ಹೊರಡಿಸಿದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು, ಅರಾವಳಿ ಶ್ರೇಣಿಯಲ್ಲಿ ಯಾವುದೇ ಹೊಸ ಗಣಿಗಳಿಗೆ ಅನುಮತಿ ನೀಡಬಾರದು ಎಂದು ವಿವಿಧ ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ಭಾರತದಲ್ಲಿ ಪಶ್ಚಿಮ ಘಟ್ಟ, ವಿಂಧ್ಯ, ಕಾರಕೋರಮ್ ಇತ್ಯಾದಿ ಇರುವ ಕೆಲ ಪ್ರಮುಖ ಪರ್ವತ ಶ್ರೇಣಿಗಳಲ್ಲಿ ಅರಾವಳಿಯೂ ಒಂದು. ದೆಹಲಿ ಸಮೀಪ ಶುರುವಾಗುವ ಈ ಪರ್ವತ ಶ್ರೇಣಿಯು ಹರ್ಯಾಣ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯದವರೆಗೂ ಇದೆ. ಇದರ ಹೆಚ್ಚಿನ ಭಾಗವು ರಾಜಸ್ಥಾನದಲ್ಲಿ ಇದೆ.
ಹಲವು ವರ್ಷಗಳಿಂದ ಈ ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಕಷ್ಟು ಗಣಿಗಾರಿಕೆಗಳು ನಡೆದಿವೆ. ಇದರಿಂದ ಇಲ್ಲಿಯ ಸೂಕ್ಷ್ಮ ಪರಿಸರಕ್ಕೆ ಧಕ್ಕೆಯಾಗಿದೆ ಎನ್ನುವುದು ಪರಿಸರ ಹೋರಾಟಗಾರರು ಮಾಡುತ್ತಿರುವ ಆರೋಪ.
ಅರಾವಳಿ ಪರ್ವತ ಶ್ರೇಣಿಯಲ್ಲಿ ಯಾವ್ಯಾವ ಪ್ರದೇಶಗಳಲ್ಲಿ ಮೈನಿಂಗ್ ಅನ್ನು ಸಂಪೂರ್ಣ ನಿಷೇಧಿಸಬೇಕು ಎಂಬುದನ್ನು ಗುರುತಿಸುವಂತೆ ಸರ್ಕಾರವು ಅರಣ್ಯ ಸಂಶೋಧನೆ ಮಂಡಳಿಯಾದ ಐಸಿಎಫ್ಆರ್ಇಗೆ ನಿರ್ದೇಶನ ನೀಡಿದೆ. ವಿವಿಧ ಮಾನದಂಡಗಳು ಹಾಗೂ ಅಂಶಗಳ ಆಧಾರದ ಮೇಲೆ ಈ ಸಂಸ್ಥೆಯು ಅರಾವಳಿ ಪ್ರದೇಶವನ್ನು ಅವಲೋಕಿಸಲಿದೆ.
ಹಾಗೆಯೇ, ವೈಜ್ಞಾನಿಕವಾಗಿ ಹಾಗೂ ಸುಸ್ಥಿರವಾಗಿ ಮಾಡಬಹುದಾದ ಗಣಿಗಾರಿಕೆ ಸಾಧ್ಯತೆ ಬಗ್ಗೆ ಐಸಿಎಫ್ಆರ್ಇ ಒಂದು ಸಮಗ್ರ ವರದಿ ಮಾಡಲಿದೆ. ಗಣಿಗಾರಿಕೆಯಿಂದ ಏನೇನು ಅನಾಹುತ, ಪರಿಣಾಮಗಳಾಗಬಹುದು, ಇತ್ಯಾದಿ ಎಲ್ಲಾ ರೀತಿಯ ಸಾಧ್ಯಾಸಾಧ್ಯತೆಗಳ ವಿಶ್ಲೇಷಣೆಯು ಈ ವರದಿಯಲ್ಲಿ ಇರುತ್ತದೆ. ಈ ವರದಿಯು ಸಾರ್ವತ್ರಿಕವಾಗಿ ಲಭ್ಯ ಇರುವಂತೆ ಮಾಡಲಾಗುತ್ತದೆ.
ಇದನ್ನೂ ಓದಿ: ದೆಹಲಿ ಮಾಲಿನ್ಯದ ಭೀಕರತೆಯನ್ನು ತೆರೆದಿಟ್ಟ ಸಚಿವ ನಿತಿನ್ ಗಡ್ಕರಿ
ಅರಾವಳಿ ಶ್ರೇಣಿಯಲ್ಲಿ 100 ಮೀಟರ್ಗಿಂತ ಹೆಚ್ಚು ಎತ್ತರದ ಗುಡ್ಡಗಳನ್ನು ಅರಾವಳಿ ಪರ್ವತ ಎಂದು ಪರಿಗಣಿಸಬಹುದು ಎಂದು ನವೆಂಬರ್ 20ರಂದು ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿತು. ಇದು ಪರಿಸರ ಹೋರಾಟಗಾರರನ್ನು ಆತಂಕಕ್ಕೆ ತಳ್ಳಿದೆ. ಅರಾವಳಿ ಶ್ರೇಣಿಯಲ್ಲಿ 100 ಮೀಟರ್ಗಿಂತ ಕಡಿಮೆ ಎತ್ತರದ ಹಲವು ಪರ್ವತಗಳಿವೆ. ಅವುಗಳನ್ನು ಅರಾವಳಿ ಶ್ರೇಣಿ ಎಂದು ಪರಿಗಣಿಸದೇ ಅಲ್ಲಿ ಗಣಿಗಾರಿಕೆಗೆ ಸರ್ಕಾರ ಅನುಮತಿಸಬಹುದು ಎಂಬುದು ಪ್ರಮುಖ ತಕರಾರು. ಈ ಹಿನ್ನೆಲೆಯಲ್ಲಿ ಸರ್ಕಾರವು ಇಡೀ ಅರಾವಳಿ ಶ್ರೇಣಿಯನ್ನೇ ರಕ್ಷಿಸುವುದಾಗಿ ಸ್ಪಷ್ಟನೆ ಕೊಟ್ಟಿರುವುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ