ಆರು ತಿಂಗಳಲ್ಲಿ ಟೋಲ್ ಪ್ಲಾಜಾ ರದ್ದು, ಜಿಪಿಎಸ್ ಆಧಾರಿತ ಸಂಗ್ರಹ ವ್ಯವಸ್ಥೆ; ನಿತಿನ್ ಗಡ್ಕರಿ

|

Updated on: Mar 25, 2023 | 3:42 PM

ಮುಂದಿನ ಆರು ತಿಂಗಳುಗಳಲ್ಲಿ ದೇಶದ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳು ಇರುವುದಿಲ್ಲ, ಬದಲಿಗೆ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಆರು ತಿಂಗಳಲ್ಲಿ ಟೋಲ್ ಪ್ಲಾಜಾ ರದ್ದು, ಜಿಪಿಎಸ್ ಆಧಾರಿತ ಸಂಗ್ರಹ ವ್ಯವಸ್ಥೆ; ನಿತಿನ್ ಗಡ್ಕರಿ
ನಿತಿನ್​ ಗಡ್ಕರಿ
Follow us on

ನವದೆಹಲಿ: ಮುಂದಿನ ಆರು ತಿಂಗಳುಗಳಲ್ಲಿ ದೇಶದ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳು (Toll Plazas) ಇರುವುದಿಲ್ಲ, ಬದಲಿಗೆ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (nitin Gadkari) ತಿಳಿಸಿದ್ದಾರೆ. ಟೋಲ್ ಪ್ಲಾಜಾಗಳ ಬಳಿ ಸಂಚಾರ ದಟ್ಟಣೆ ತಡೆಯಲು ಮತ್ತು ಪ್ರಯಾಣಿಸಿದ ದೂರಕ್ಕೆ ಮಾತ್ರ ಟೋಲ್ ಸಂಗ್ರಹಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಭಾರತೀಯ ಕೈಗಾರಿಕೆಗಳ ಒಕ್ಕೂಟ (CII) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್ ಸಂಗ್ರಹ ಆದಾಯ 40,000 ಕೋಟಿ ರೂ. ಇದ್ದು ಮುಂದಿನ 2-3 ವರ್ಷಗಳಲ್ಲಿ 1.40 ಲಕ್ಷ ಕೋಟಿ ತಲುಪುವ ನಿರೀಕ್ಷೆ ಇದೆ ಎಂದರು.

ದೇಶದಲ್ಲಿ ಟೋಲ್ ಪ್ಲಾಜಾಗಳ ಬದಲಿಗೆ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆ ಸೇರಿದಂತೆ ಹೊಸ ತಂತ್ರಜ್ಞಾನಗಳ ಅಳವಡಿಕೆನ್ನು ಸರ್ಕಾರ ಎದುರು ನೋಡುತ್ತಿದೆ. ಆರು ತಿಂಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಸಲಿದ್ದೇವೆ ಎಂದು ಅವರು ಹೇಳಿದರು.

ವಾಹನಗಳನ್ನು ನಿಲ್ಲಿಸದೆ ಸ್ವಯಂಚಾಲಿತ ಟೋಲ್ ಸಂಗ್ರಹ ಆಗುವಂತೆ ಮಾಡಲು ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ವ್ಯವಸ್ಥೆ (ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್ ಕ್ಯಾಮೆರಾಗಳು) ಯೋಜನೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪ್ರಾಯೋಗಿಕವಾಗಿ ಹಮ್ಮಿಕೊಂಡಿದೆ. ಇದರ ಯಶಸ್ಸನ್ನು ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಮತ್ತೊಂದು ಅಪಘಾತ; ಟೋಲ್ ತಪ್ಪಿಸಲು ಹೋಗಿ ಬೈಕ್ ಸವಾರನ ಬಲಿ ಪಡೆದ KSRTC ಬಸ್

2018-19ರಲ್ಲಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸರಾಸರಿ ಕಾಯುವಿಕೆ ಅವಧಿ 8 ನಿಮಿಷಗಳಷ್ಟಿತ್ತು. ಫಾಸ್ಟ್​​ಟ್ಯಾಗ್​ಗಳ ಅಳವಡಿಕೆಯಿಂದಾಗಿ 2020-21 ಮತ್ತು 2021-22ರಲ್ಲಿ ಸರಾಸರಿ ಕಾಯುವಿಕೆ ಅವಧಿ 47 ಸೆಕೆಂಡ್​ಗೆ ಇಳಿಕೆಯಾಯಿತು ಎಂದು ಅವರು ತಿಳಿಸಿದ್ದಾರೆ.

ಕೆಲವು ಕಡೆಗಳಲ್ಲಿ, ವಿಶೇಷವಾಗಿ ನಗರಗಳ ಸಮೀಪದಲ್ಲಿ ಕಾಯುವ ಸಮಯದಲ್ಲಿ ಗಣನೀಯ ಸುಧಾರಣೆ ಕಂಡುಬಂದರೂ, ಜನನಿಬಿಡ ಪಟ್ಟಣಗಳಲ್ಲಿ ಪೀಕ್ ಅವರ್‌ಗಳಲ್ಲಿ ಟೋಲ್ ಪ್ಲಾಜಾಗಳಲ್ಲಿ ಇನ್ನೂ ಕಾಯುವಿಕೆ ಅವಧಿ ಹೆಚ್ಚಿದೆ ಎಂದ ಅವರು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ನಿರ್ಮಾಣ ವೆಚ್ಚವನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:41 pm, Sat, 25 March 23