ಅಹಮದಾಬಾದ್: ಈಗಾಗಲೇ ಕೊವಿಡ್-19 ಕೇಸುಗಳು ದೇಶಾದ್ಯಂತ ಹೆಚ್ಚುತ್ತಲೇ ಇದೆ. ಅದರ ನಡುವೆ ಒಮಿಕ್ರಾನ್ ಹರಡುವಿಕೆ ಕೂಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಮುಂತಾದ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಆದರೆ, ಗುಜರಾತ್ ಬಿಜೆಪಿ ಶಾಸಕ ಸೌರಭ್ ಪಟೇಲ್ ತಮ್ಮ ಪಕ್ಷದಿಂದ ಆಯೋಜಿಸಲಾಗಿದ್ದ ರಾತ್ರಿ ಕ್ರಿಕೆಟ್ ಪಂದ್ಯಾವಳಿಯ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈ ಕ್ರಿಕೆಟ್ ಮ್ಯಾಚ್ನಲ್ಲಿ ನೂರಾರು ಜನರು ಭಾಗವಹಿಸಿದ್ದರು. ಅವರಲ್ಲಿ ಹೆಚ್ಚಿನವರು ಮಾಸ್ಕ್ ಹಾಕಿರಲಿಲ್ಲ ಮತ್ತು ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸಿರಲಿಲ್ಲ.
ಡೆಲ್ಟಾ ಪ್ಲಸ್ ವೈರಸ್ಗಿಂತಲೂ ಹೆಚ್ಚು ವೇಗವಾಗಿ ಹರಡುವ ಒಮಿಕ್ರಾನ್ ರೂಪಾಂತರ ಪ್ರಕರಣಗಳು ಭಾರತದಲ್ಲಿ ಹೆಚ್ಚುತ್ತಲೇ ಇವೆ. ಆದರೂ ಬಿಜೆಪಿ ಶಾಸಕ ರಾತ್ರಿ ಹೊತ್ತು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ‘ನನ್ನ ಕ್ಷೇತ್ರವಾದ ಬೋಟಾಡ್ನಲ್ಲಿ ಯಾವುದೇ ಕೋವಿಡ್ ಪ್ರಕರಣಗಳಿಲ್ಲ. ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದಾಗ ಸುಮಾರು ಒಂದು ತಿಂಗಳ ಹಿಂದೆ ಕ್ರಿಕೆಟ್ ಪಂದ್ಯಾವಳಿಯನ್ನು ಪ್ರಾರಂಭಿಸಲಾಯಿತು. ಕೊವಿಡ್ ಕೇಸುಗಳು ಕಡಿಮೆ ಇರುವುದರಿಂದಲೇ ಈ ನೈಟ್ ಕ್ರಿಕೆಟ್ ಮ್ಯಾಚ್ ಅನ್ನು ಆಯೋಜಿಸಿದ್ದೆವು’ ಎಂದು ಶಾಸಕ ಸೌರಭ್ ಪಟೇಲ್ ತಾವು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಎರಡು ವಾರ್ಡ್‌ಗಳ ನಡುವೆ ಕ್ರಿಸ್‌ಮಸ್‌ನಲ್ಲಿ ಆಡಿದ ಟೂರ್ನಮೆಂಟ್ ಫೈನಲ್‌ನ ವಿಡಿಯೋಗಳಲ್ಲಿ ಪ್ರೇಕ್ಷಕರು, ಮಾಸ್ಕ್ ಇಲ್ಲದ ಅನೇಕರು ವಿಜಯೋತ್ಸವದ ಅಂಗವಾಗಿ ಪಿಚ್‌ಗೆ ಓಡಿ ಸಂಭ್ರಮಿಸಿರುವುದನ್ನು ನೋಡಬಹುದು.
ಭಾರತದ ಮಾಜಿ ಕ್ರಿಕೆಟಿಗ ಮುನಾಫ್ ಪಟೇಲ್ ಅವರು ಶಾಸಕರೊಂದಿಗೆ ಪಂದ್ಯಾವಳಿಯ ಟ್ರೋಫಿಗಳನ್ನು ಹಸ್ತಾಂತರಿಸಿದ್ದಾರೆ. ಅಂತಿಮ ಪಂದ್ಯವನ್ನು ಹೊರತುಪಡಿಸಿ, ಇತರ ಪಂದ್ಯಗಳಲ್ಲಿ ಕೆಲವೇ ಜನರು ಆಗಮಿಸಿದ್ದರು ಮತ್ತು ಅವರ ಸಮಯದಲ್ಲಿ ಎಲ್ಲಾ ಕೋವಿಡ್ ನಿಯಮಗಳನ್ನು ಅನುಸರಿಸಲಾಗಿದೆ ಎಂದು ಶಾಸಕರು ಹೇಳಿದ್ದಾರೆ. ಅವರ ವಿಧಾನಸಭಾ ಕ್ಷೇತ್ರದಿಂದ 140 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
“ಹಿಂದಿನ ಪಂದ್ಯಗಳಲ್ಲಿ ಹೆಚ್ಚು ಜನರು ಇರಲಿಲ್ಲ. ಫೈನಲ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದರು. ಇದು ನಮ್ಮ ನಿರೀಕ್ಷೆಗೂ ಮೀರಿತ್ತು. ನಾವು ಆಟವನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದೇವೆ” ಎಂದು ಶಾಸಕರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಗುಜರಾತ್ನಲ್ಲಿ ಕೊವಿಡ್ ಪ್ರಕರಣಗಳಲ್ಲಿ ಏರಿಕೆಯಾಗಿದೆ. 948 ಪ್ರಕರಣಗಳು ಸಕ್ರಿಯವಾಗಿವೆ.
ಇದನ್ನೂ ಓದಿ: ಕೊವಿಡ್ನಿಂದ ಮೃತರಾದವರ ಕುಟುಂಬಗಳಿಗೆ ಒಂದೂವರೆ ಲಕ್ಷ ಪರಿಹಾರ: ಕಂದಾಯ ಸಚಿವ ಆರ್ ಅಶೋಕ್
9 ತಿಂಗಳ ಹಿಂದೆ 2ನೇ ಡೋಸ್ ಕೊವಿಡ್ ಲಸಿಕೆ ಪಡೆದವರಿಗೆ ಮುಂಜಾಗರೂಕತೆ ಲಸಿಕೆ; ನೋಂದಣಿ ಹೇಗೆ? ಇಲ್ಲಿದೆ ಮಾಹಿತಿ