ಸೋಮವಾರದಿಂದ 9-11 ವರೆಗಿನ ತರಗತಿಗಳನ್ನು ಶೇಕಡಾ 50 ಸಾಮರ್ಥ್ಯದೊಂದಿಗೆ ಪುನರಾರಂಭಿಸಲು ಅನುಮತಿ ನೀಡಿದ ಗುಜರಾತ ಸರ್ಕಾರ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 22, 2021 | 10:44 PM

ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಸಹ ಶೇಕಡಾ 50 ರಷ್ಟು ಸಾಮರ್ಥ್ಯ ಮತ್ತು ಕೋವಿಡ್​ ಸುರಕ್ಷತೆ ಮಾರ್ಗಸೂಚಿಗಳಾಗಿರುವ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು ಮತ್ತು ನಿಯಮಿತವಾಗಿ ಕೈಗಳನ್ನು ಸ್ಯಾನಿಟೈಸ್​ ಮಾಡಿಕೊಳ್ಳುವುದು-ಮೊದಲಾದ ನಿಯಮಗಳನ್ನು ಪಾಲಿಸಲೇಬೇಕೆಂಬ ನಿಯಮದೊಂದಿಗೆ ತರಗತಿ ನಡೆಸಲು ಸರ್ಕಾರ ಅನುಮತಿ ನೀಡಿದೆ.

ಸೋಮವಾರದಿಂದ 9-11 ವರೆಗಿನ ತರಗತಿಗಳನ್ನು ಶೇಕಡಾ 50 ಸಾಮರ್ಥ್ಯದೊಂದಿಗೆ ಪುನರಾರಂಭಿಸಲು ಅನುಮತಿ ನೀಡಿದ ಗುಜರಾತ ಸರ್ಕಾರ
ಸಾಂಕೇತಿಕ ಚಿತ್ರ
Follow us on

ಬರುವ ಸೋಮವಾರ ಅಂದರೆ ಜುಲೈ 26ರಿಂದ 9-11 ತರಗತಿಗಳನ್ನು ಶೇಕಡಾ 50 ರಷ್ಟು ಸಾಮರ್ಥ್ಯ ಮತ್ತು ಎಲ್ಲ ಕೋವಿಡ್-19 ಸುರಕ್ಷತೆ ಸಂಬಂಧಿಸಿದ ಮಾರ್ಗಸೂಚಿಗಳೊಂದಿಗೆ ಪುನರಾರಂಭಿಸಲು ಅನುಮತಿ ನೀಡಲಾಗಿದೆ ಎಂದು ಗುಜರಾತ ಸರ್ಕಾರ ಗುರುವಾರದಂದು ಹೇಳಿದೆ. ಭೌತಿಕವಾಗಿ ತರಗತಿಗಳಿಗೆ ಹಾಜರಾಗಲು ಇಚ್ಚಿಸುವ ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಅನುಮತಿ ಪತ್ರ ತರಬೇಕೆಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ. ರಾಜ್ಯದಲ್ಲಿ ಕೋವಿಡ್​ ಸೋಂಕಿತರ ಪ್ರಮಾಣ ಗಣನೀಯವಾಗಿ ಇಳಿಮುಖಗೊಂಡಿರುವ ಹಿನ್ನೆಲೆಯಲ್ಲಿ ಗುಜರಾತ್ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಗುಜರಾತ್​ನಲ್ಲಿ 12ನೇ ತರಗತಿ ವಿದ್ಯಾರ್ಥಿಗಳಿಗೆ ಜುಲೈ 15ರಿಂದಲೇ ತರಗತಿಗಳು ಆರಂಭವಾಗಿವೆ. ಆದರೆ ವಿದ್ಯಾರ್ಥಿಗಳ ಭೌತಿಕ ಹಾಜರಿ ಕಡ್ಡಾಯವೆಂದು ಸರ್ಕಾರ ಹೇಳಿಲ್ಲ. ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಸಹ ಶೇಕಡಾ 50 ರಷ್ಟು ಸಾಮರ್ಥ್ಯ ಮತ್ತು ಕೋವಿಡ್​ ಸುರಕ್ಷತೆ ಮಾರ್ಗಸೂಚಿಗಳಾಗಿರುವ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು ಮತ್ತು ನಿಯಮಿತವಾಗಿ ಕೈಗಳನ್ನು ಸ್ಯಾನಿಟೈಸ್​ ಮಾಡಿಕೊಳ್ಳುವುದು-ಮೊದಲಾದ ನಿಯಮಗಳನ್ನು ಪಾಲಿಸಲೇಬೇಕೆಂಬ ನಿಯಮದೊಂದಿಗೆ ತರಗತಿ ನಡೆಸಲು ಸರ್ಕಾರ ಅನುಮತಿ ನೀಡಿದೆ.

ಗುಜರಾತ್​ನ 18 ನಗರ ಪ್ರದೇಶಗಳ ಪೈಕಿ 10ರಲ್ಲಿ ರಾತ್ರಿ ಕರ್ಫ್ಯೂ ಅನ್ನು ಸರ್ಕಾರವು ತೆರವುಗೊಳಿಸಿದೆ ಮತ್ತು 9ನೇ ತರಗತಿಯಿಂದ ಹಿಡಿದು ಪದವಿ ವ್ಯಾಸಂಗದವರೆಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಡೆಯುವ ಕೋಚಿಂಗ್ ಕ್ಲಾಸುಗಳನ್ನು ಶೇಕಡಾ 50 ರಷ್ಟು ಹಾಜರಾತಿಯೊಂದಿಗೆ ಆರಂಭಿಸಲು ಅನುಮತಿ ನೀಡಿದೆ.
ಗುರುವಾರದಂದು ಗುಜರಾತ್​ನಲ್ಲಿ ಕೇವಲ 34 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 370 ಮಾತ್ರ ಆಗಿದೆ. ಕಳೆದ 24 ಗಂಟೆಗಳಲ್ಲಿ ಒಂದೇ ಒಂದು ಸೋಂಕಿತನ ಸಾವು ದಾಖಲಾಗಿಲ್ಲ. ಗುರುವಾರ ರಾಜ್ಯದಾದ್ಯಂತ ಸೋಂಕಿನಿಂದ ಚೇತರಿಸಿಕೊಂಡ 53 ಜನ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಹಾಗೆಯೇ, ರಾಜ್ಯದಲ್ಲಿ ಇಂದು 5,08,576 ಜನಕ್ಕೆ ಕೊವಿಡ್​ ಲಸಿಕೆ ನೀಡಲಾಗಿದೆ ಮತ್ತು ಅವರಲ್ಲಿ 2,67,293 ಜನ 18-44 ವಯೋಮಾನದವರು ತಮ್ಮ ಮೊದಲ ಡೋಸ್​ ಪಡೆದಿದ್ದಾರೆ.

ಇದನ್ನೂ ಓದಿ: ಬೆಂಕಿಯಿಂದ ಜನರು ಸಾಯುತ್ತಿದ್ದಾರೆ, ನೀವೇನು ಮಾಡ್ತಿದ್ದೀರಿ: ಗುಜರಾತ್ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ತಪರಾಕಿ